ಹೆಂಡತಿ, ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ಪತಿ! ಕಿಟಕಿಯಿಂದ ನೋಡಿದ ಗ್ರಾಮಸ್ಥರಿಗೆ ಕಾದಿತ್ತು ಶಾಕ್​!

man
Published on

ಭೋಪಾಲ್​: ಪತಿಯೊಬ್ಬ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳ ಕೊಲೆ ಮಾಡಿ, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಈ ದುಷ್ಕೃತ್ಯಕ್ಕೆ ಕಾರಣವೇನು ಎನ್ನುವುದರ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಮಜ್ಗವಾನ್​ ಪಟ್ಟಣದಲ್ಲಿ ಇಂತಹ ಘಟನೆ ನಡೆದಿದೆ. 37 ವರ್ಷದ ವ್ಯಕ್ತಿ ತನ್ನ 32 ವರ್ಷದ ಹೆಂಡತಿ ಮತ್ತು ಒಂದು ವರ್ಷದ ಹಾಗೂ ಐದು ವರ್ಷದ ಇಬ್ಬರು ಮಕ್ಕಳ ಗಂಟಲು ಕತ್ತರಿಸಿ ಕೊಲೆ ಮಾಡಿದ್ದಾನೆ. ನಂತರ ಮನೆಯ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಮವಾರ ಮಧ್ಯರಾತ್ರಿ ಈ ಕೆಲಸ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ 11.30 ಆದರೂ ಮನೆ ಬಾಗಿಲು ತೆರೆಯದಿದ್ದದ್ದನ್ನು ಕಂಡು ಗ್ರಾಮಸ್ಥರು ಕಿಟಕಿಯಿಂದ ಇಣುಕಿ ನೋಡಿದ್ದಾರೆ. ಆಗ ಮನೆಯ ಯಜಮಾನ ಫ್ಯಾನಿನಲ್ಲಿ ನೇತಾಡುತ್ತಿರುವುದು ಕಂಡಿದೆ. ತಕ್ಷಣ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ.

ಪೊಲೀಸರು ಬಂದು ಮನೆ ಬಾಗಿಲು ಒಡೆದು ನೋಡಿದಾಗ, ಮಹಿಳೆ ಮತ್ತು ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ನಾಲ್ಕೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ಬಗ್ಗೆ ಎಲ್ಲ ಕೋನಗಳಿಂದ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net