VIDEO: ಡ್ಯೂಟಿ ನಿರ್ವಹಿಸಿದ್ದೇ ತಪ್ಪಾಯಿತು- ಹೋಮ್​ ಗಾರ್ಡ್ ಹತ್ರಾನೇ ಬಸ್ಕಿ ಹೊಡೆಸಿದ ಕೃಷಿ ಅಧಿಕಾರಿ!

Bihar Home Guard made to do sit-ups for stopping officer during lockdown
Published on

ಪಟನಾ: ಕರೊನಾ ಸೋಂಕು ಹರಡದಂತೆ ತಡೆಗಟ್ಟಲು ದೇಶದೆಲ್ಲೆಡೆ ಲಾಕ್​ಡೌನ್ ಚಾಲ್ತಿಯಲ್ಲಿದೆ. ಬಹುತೇಕ ಕಡೆಗಳಲ್ಲಿ ಹೋಮ್​ಗಾರ್ಡ್​ಗಳು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಕ್​ಡೌನ್ ನಿಯಮ ಉಲ್ಲಂಘಿಸಿದವರಿಗೆ ಅಲ್ಲೇ ಶಿಕ್ಷೆಯಾಗಿ ಬಸ್ಕಿ ಹೊಡೆಸುವುದು, ಯೋಗ ಮಾಡಿಸುವುದು, ವ್ಯಾಯಾಮ ಮಾಡಿಸುವುದು ಇತ್ಯಾದಿಗಳ ಸುದ್ದಿ ನಿತ್ಯವೂ ಓದುತ್ತಿದ್ದೇವೆ. ವಿಡಿಯೋಗಳನ್ನೂ ನೋಡುತ್ತಿದ್ದೇವೆ. ಇದಕ್ಕೆ ವ್ಯತಿರಿಕ್ತವಾದ ವಿಡಿಯೋ ಒಂದು ಈಗ ವೈರಲ್ ಆಗಿದೆ.

ಹೌದು ಹೋಮ್​ಗಾರ್ಡ್ ಒಬ್ಬರು ಬಸ್ಕಿ ಹೊಡೆಯುತ್ತಿರುವ ವಿಡಿಯೋ ಅದು. ಬಿಹಾರದ ಆಮ್​ ಆದ್ಮಿ ಪಕ್ಷದ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ಅಲ್ಲಿನ ಅರರಿಯಾ ಜಿಲ್ಲೆಯ ಬೈರಾಗಚ್ಚಿ ಚೌಕ್ ಚೆಕ್​ಪೋಸ್ಟ್​ನಲ್ಲಿ ನಡೆದ ಘಟನೆ ಇದು. ಲಾಕ್​ಡೌನ್ ಅವಧಿ ಆದ್ದರಿಂದ ಹೋಮ್​ಗಾರ್ಡ್​ ಅಲ್ಲಿ ಕರ್ತವ್ಯದಲ್ಲಿದ್ದರು. ಅರಾರಿಯಾದ ಕೃಷಿ ಅಧಿಕಾರಿ ಮನೋಜ್ ಕುಮಾರ್ ಅವರಿದ್ದ ಕಾರನ್ನೂ ಹೋಮ್​ಗಾರ್ಡ್ ತಡೆದು ತಪಾಸಣೆ ನಡೆಸಿದ್ದರು. ನಂತರ ನಡೆದುದು ಈಗ ಇತಿಹಾಸ.

ತಪಾಸಣೆಯಿಂದ ಕೆರಳಿದ ಮನೋಜ್ ಕುಮಾರ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು 50 ವರ್ಷ ವಯಸ್ಸಿನ ಹೋಮ್​ ಗಾರ್ಡ್​ಗೆ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಆಮ್​ ಆದ್ಮಿ ಪಕ್ಷದವರ ಟ್ವೀಟ್ ಸಂದೇಶದಲ್ಲಿದ್ದ ಅಂಶ ಇಷ್ಟು - ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದ ಘಟನೆ ಇದು. ಕರ್ತವ್ಯದಲ್ಲಿದ್ದ ಹೋಮ್​ಗಾರ್ಡ್​ ಅನ್ನು ಅವಮಾನವಾಗುವಂತೆ ನಡೆಸಿದ ಈ ಕೃತ್ಯದಲ್ಲಿ ಪೊಲೀಸರೂ ಷಾಮೀಲಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net