ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದವನ ಬಂಧನ

arrest
Published on

ಅರರಿಯಾ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರವನ್ನು ಜನವರಿ 22ರಂದು ಸ್ಫೋಟಿಸುವುದಾಗಿ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ 21 ವರ್ಷದ ವ್ಯಕ್ತಿಯನ್ನು ಬಿಹಾರದ ಅರರಿಯಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈತ ಶನಿವಾರ ತಡರಾತ್ರಿ ಪಲಾಸಿ ಪೊಲೀಸ್​ ಠಾಣೆ ವ್ಯಾಪ್ತಿಯ ಬಲುವಾ ಕಲಿಯಗಂಜ್​ನಲ್ಲಿರುವ ಅವರ ನಿವಾಸದಿಂದ ಕರೆ ಮಾಡಿದ್ದ ಇಂತೆಖಾಬ್‌ ಆಲಂ (21) ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅರಾರಿಯಾದ ಪೊಲೀಸ್​ ವರಿಷ್ಠಾಧಿಕಾರಿ ಅಶೋಕ್​ ಕುಮಾರ್​ ಸಿಂಗ್​ ತಿಳಿಸಿದ್ದಾರೆ.

ಈತ ಜನವರಿ 19ರಂದು 112 ತುರ್ತು ಸಹಾಯ ಸಂಖ್ಯೆಗೆ ಕರೆ ಮಾಡಿ, ‘ನನ್ನ ಹೆಸರು ಛೋಟಾ ಶಕೀಲ್‌. ನಾನು ದಾವೂದ್ ಇಬ್ರಾಹಿಂ ಸಹಚರ. ಜ.22ರಂದು ರಾಮಮಂದಿರವನ್ನು ಸ್ಫೋಟಿಸುತ್ತೇನೆ’ ಎಂದು ಹೇಳಿದ್ದ ಎಂದು ಎಸ್ಪಿ ಅಶೋಕ್ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಈತನಿಗೆ ಅಪರಾಧ ಹಿನ್ನೆಲೆ ಇಲ್ಲ. ಮಾನಸಿಕ ಅಸ್ವಸ್ಥನಂತೆ ಕಾಣುತ್ತಾನೆ. ಆದರೆ ಸೂಕ್ಷ್ಮ ವಿಷಯವಾಗಿರುವ ಕಾರಣ ಪ್ರಕರಣ ದಾಖಲಿಸಿಕೊಂಡು, ಮೊಬೈಲ್‌ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net