

Mallikarjun Kharge: 2025 ರ ಬಿಹಾರ ವಿಧಾನಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಭ್ರಷ್ಟ ಮತ್ತು ಅಸಮರ್ಥ ಆಡಳಿತ ಅಂತ್ಯದ ಆರಂಭ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬುಧವಾರ(ಸೆ. 24) ಕಿಡಿಕಾರಿದ್ದಾರೆ.
ಪಾಟ್ನಾದಲ್ಲಿ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಬಿಹಾರದ ರಾಜಕೀಯ ಸನ್ನಿವೇಶದ ಕುರಿತು ಪ್ರತಿಕ್ರಿಯೆ ನೀಡಿದ ಖರ್ಗೆˌ ಆಡಳಿತಾರೂಢ ಎನ್ಡಿಎಯೊಳಗಿನ ಬಿರುಕನ್ನು ಉಲ್ಲೇಖಿಸಿˌ ಆಂತರಿಕ ಕಲಹ ಈಗ ಬಹಿರಂಗವಾಗಿದೆ ಎಂದು ತಿಳಿಸಿದರು.
ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಬಿಜೆಪಿ ಹೊಣೆಗಾರಿಕೆಯಂತೆ ನೋಡುತ್ತಿದೆ. ಆದರೆ, ಬಿಹಾರದ ಜನರು ಬಿಜೆಪಿ ಕಾರ್ಯಸೂಚಿಗಳನ್ನು ತಿರಸ್ಕರಿಸುತ್ತಿದ್ದಾರೆ. ಏಕೆಂದರೆ ಜನರಿಗೆ ಅಭಿವೃದ್ಧಿ ಬೇಕು, ಧಾರ್ಮಿಕ ಧ್ರುವೀಕರಣವಲ್ಲ. ಇನ್ನು ರಾಷ್ಟ್ರೀಯ ರಂಗಗಳಲ್ಲಿ ದೇಶವನ್ನು ವಿಫಲಗೊಳಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಭಾರತವು ಅತ್ಯಂತ ಸವಾಲಿನ ಅವಧಿಯನ್ನು ಎದುರಿಸುತ್ತಿದೆ. ರಾಜತಾಂತ್ರಿಕ ತಪ್ಪು ಹೆಜ್ಜೆಗಳು ಮತ್ತು ದೇಶೀಯ ಪ್ರಕ್ಷುಬ್ಧತೆಗಳು ಮೋದಿ ಆಡಳಿತದಲ್ಲಿ ಸಂಪೂರ್ಣ ವೈಫಲ್ಯವನ್ನು ಪ್ರತಿಬಿಂಬಿಸಿದೆ ಎಂದರು.
ನರೇಂದ್ರ ಮೋದಿ ಹಾಗೂ ಅವರ ಸರ್ಕಾರದ ರಾಜತಾಂತ್ರಿಕತೆಯ ವೈಫಲ್ಯವು ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಪ್ರಧಾನಿಯವರು ನನ್ನ ಸ್ನೇಹಿತರು ಎನ್ನುವವರೇ ಇಂದು ಭಾರತವನ್ನು ಹಲವಾರು ಸಮಸ್ಯೆಗಳಿಗೆ ಸಿಲುಕಿಸುತ್ತಿದ್ದಾರೆ ಎಂದು ತಿಳಿಸಿದರು.
ಇಂದು, ನಮ್ಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ತಿರುಚುತ್ತಿರುವಾಗ ಬಿಹಾರದಲ್ಲಿ ನಮ್ಮ ವಿಸ್ಕೃತ ಸಿಡಬ್ಲ್ಯೂಸಿ ಸಭೆಯನ್ನು ನಡೆಸುವುದು ಮತ್ತು ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ನಮ್ಮ ಪ್ರತಿಜ್ಞೆಯನ್ನು ಪುನರುಚ್ಚರಿಸುವುದು ಅತ್ಯಗತ್ಯವಾಗಿವೆ ಹಾಗೆಯೇ ಚುನಾವಣಾ ಆಯೋಗದ ನ್ಯಾಯಯುತತೆಯು ಪಾರದರ್ಶಕದ ಬಗ್ಗೆ ಗಂಭೀರ ಚರ್ಚೆಗಳನ್ನು ಸೃಷ್ಟಿಸಿದೆ ಎಂದುಹೇಳಿದರು.
ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರುˌ ಈಗ ದೇಶಾದ್ಯಂತ ಲಕ್ಷಾಂತರ ಜನರ ಮತಗಳನ್ನು ತೆಗೆದುಹಾಕಲು ಪಿತೂರಿ ನಡೆಸಲಾಗುತ್ತಿದೆ. ಮತಗಳ್ಳತನ ಎಂದರೆ ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ದುರ್ಬಲರು ಮತ್ತು ಬಡವರಿಗೆ ಸೇರಿದ ಪಡಿತರ, ಪಿಂಚಣಿ, ಔಷಧ, ಮಕ್ಕಳ ವಿದ್ಯಾರ್ಥಿವೇತನ ಮತ್ತು ಪರೀಕ್ಷಾ ಶುಲ್ಕದ ಕಳ್ಳತನ" ಎಂದು ಅವರು ಹೇಳಿದರು.
ಪ್ರಧಾನಿ ಸ್ನೇಹಿತರಿಂದ ಅಪಾಯ
ನರೇಂದ್ರ ಮೋದಿ ಸರ್ಕಾರದ ರಾಜತಾಂತ್ರಿಕ ವೈಫಲ್ಯದ ಪರಿಣಾಮದಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಇಂದು ಸವಾಲುಗಳ ಹಾದಿಯಲ್ಲಿ ನಡೆಯುವಂತಾಗಿದೆˌ ಪ್ರಧಾನಿ ಮೋದಿ ನನ್ನ ಸ್ನೇಹಿತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾಯಕರುಗಳೇ ಭಾರತವನ್ನು ಹಲವಾರು ತೊಂದರೆಗಳಿಗೆ ಸಿಲುಕಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಟ್ರಂಪ್ ಮಾಡಿದ ಭಾಷಣದಲ್ಲಿ, ಚೀನಾ ಮತ್ತು ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸುವ ಮೂಲಕ ಉಕ್ರೇನ್ ಯುದ್ಧಕ್ಕೆ ಬೆಂಬಲ ನೀಡುತ್ತಿವೆ ಎಂದು ಹೇಳಿದ ಒಂದು ದಿನದ ನಂತರ ಖರ್ಗೆ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ (ಏಜೆನ್ಸೀಸ್)