

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರ ಆರೋಗ್ಯ, ಫಿಟ್ನೆಸ್, ಯೋಗ ಬಗ್ಗೆ ಎಲ್ಲರಿಗೂ ಗೊತ್ತಿದೆ. ಒಂದು ಒಳ್ಳೆಯ ಜೀವನಶೈಲಿಗೆ ಶಿಲ್ಪಾ ಶೆಟ್ಟಿ ಉತ್ತಮ ಉದಾಹರಣೆ ಎಂದರೆ ತಪ್ಪಾಗುವುದಿಲ್ಲ. ಇನ್ನು, ಇವರ ತಂಗಿ ಶಮಿತಾ ಶೆಟ್ಟಿ ಸಹ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಖ್ಯಾತ ನಟಿ. 42 ವರ್ಷದ ಶಮಿತಾ ಶೆಟ್ಟಿ ತಮ್ಮ ಹೊಳೆಯುವ ಚರ್ಮಕ್ಕೆ ಮತ್ತು ಸದಾ ಯಂಗ್ ಆಗಿ ಕಾಣಿಸುವುದಕ್ಕೆ ಬಹಳಷ್ಟು ಫೇಮಸ್ ಆಗಿದ್ದಾರೆ. ಆದರೆ ಇಂತಹ ಶಮಿತಾ ಶೆಟ್ಟಿ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದರೆ ನೀವು ನಂಬುತ್ತೀರಾ?
ಹೌದು, 42 ವರ್ಷ ಆದರೂ 25 ವರ್ಷದ ಹುಡುಗಿಯಂತೆ ಯಂಗ್ ಆಗಿ ಕಾಣಿಸಿಕೊಳ್ಳುವ ನಟಿ ಶಮಿತಾ ಶೆಟ್ಟಿ ಹಿಂದಿಯ ಬಿಗ್ ಬಾಸ್ ಒಟಿಟಿ ಸೀಸನ್ನಲ್ಲಿ ಭಾಗವಹಿಸಿ ಹೆಚ್ಚು ಸುದ್ದಿಯಲ್ಲಿದ್ದರು. ಇದೀಗ ಶಮಿತಾ ಬಿಗ್ ಬಾಸ್ 15ರಲ್ಲಿ ಸಹ ಕಾಣಿಸಿಕೊಂಡರು. ಆದರೆ, ಶಮಿತಾ ಅನಾರೋಗ್ಯದ ಕಾರಣದಿಂದ ಬಿಗ್ ಬಾಸ್ ಮನೆಯಿಂದ ಹೊರಬಂದು ನಂತರ ಚೇತರಿಸಿಕೊಂಡು ಮತ್ತೆ ವೈಲ್ಡ್ ಕಾರ್ಡ್ ಪ್ರವೇಶದ ಮೂಲಕ ಬಂದಿದ್ದು, ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಇವರದ್ದೇ ಸದ್ದು.
ಇದಕ್ಕೆ ಕಾರಣ ನಟಿ ಶಮಿತಾ ತಾವು ಬಳಲುತ್ತಿರುವ ಒಂದು ಕಾಯಿಲೆಯ ಬಗ್ಗೆ ಬಿಗ್ ಬಾಸ್ನ ಸಹಸ್ಪರ್ಧಿ ಅಕ್ಷರಾ ಸಿಂಗ್ ಬಳಿ ಬಿಚ್ಚಿಟ್ಟಿದ್ದಾರೆ. ಶಮಿತಾ ಶೆಟ್ಟಿಗೆ 'ಕೊಲೈಟಿಸ್' ಎಂಬ ಕರುಳು ಉರಿಯ ಕಾಯಿಲೆ ಇದೆಯಂತೆ. ಈ ಕಾಯಿಲೆಯಿಂದ ಅವರಿಗೆ ಸಹಜವಾಗಿ ಊಟ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ. ದೊಡ್ಡ ಕರುಳಿನ ಒಳಗಿನ ಉರಿಯಿಂದ ಹೊಟ್ಟೆ ನೋವು, ಅತಿಸಾರ, ಸೆಳೆತ, ತಲೆ ನೋವಿನಿಂದ ಬಳಲುತ್ತಿದ್ದಾರೆ ನಟಿ ಶಮಿತಾ ಶೆಟ್ಟಿ. ಜೊತೆಗೆ, ಶಮಿತಾ ತಾವು ಗ್ಲುಟನ್ ಮುಕ್ತ ಆಹಾರವನ್ನು ಸೇವಿಸುವುದು ಇದೇ ಕಾರಣಕ್ಕೆಂದು ಹೇಳಿದ್ದಾರೆ.
ಬಿಗ್ ಬಾಸ್ 15ಗೆ ನಟಿ ಶಮಿತಾ ಸದ್ಯ ವೈಲ್ಡ್ ಕಾರ್ಡ್ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಸೀಸನ್ ನ ಟಾಪ್ 5 ಸ್ಪರ್ಧಿಗಳಲ್ಲಿ ಇವರು ಒಬ್ಬರಾಗಿದ್ದು, 15ನೇ ಸೀಸನ್ ನಲ್ಲಿ ಶಮಿತಾ ವಿನ್ನರ್ ಅಥವಾ ರನ್ನರಪ್ ಆಗಲಿದ್ದಾರೆ ಎಂದು ನೆಟ್ಟಿಗರು ಅಂದಾಜಿಸುತ್ತಿದ್ದಾರೆ. ಇದರಿಂದ, 2000 ದಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ನಟಿ ಶಮಿತಾಗೆ ಎರಡನೇ ಇನ್ನಿಂಗ್ಸ್ನಲ್ಲಿ ಹೆಚ್ಚು ಬೇಡಿಕೆಯಿಂದ ಪ್ಲಸ್ ಪಾಯಿಂಟ್ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.