More

    ಮೈಸೂರಿನ ಆಸ್ತಿ ಅರಸರದ್ದೇ: ಸರ್ಕಾರಕ್ಕೆ ಸುಪ್ರೀಂನಲ್ಲಿ ಭಾರಿ ಹಿನ್ನಡೆ- ಜಿಲ್ಲಾಡಳಿತಕ್ಕೂ ಎದುರಾಗಿದೆ ದೊಡ್ಡ ಸಂಕಷ್ಟ!

    ಮೈಸೂರು: ಮೈಸೂರಿನ ಕುರುಬಾರಹಳ್ಳಿ, ಆಲನಹಳ್ಳಿ, ಚೌಡಹಳ್ಳಿಯ 1536 ಎಕರೆ ಪ್ರದೇಶದ ಭೂ ವಿವಾದಕ್ಕೆ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಈ ಜಮೀನು ಮೈಸೂರು ಅರಸರಿಗೇ ಸೇರಿದ್ದು ಎಂದು ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠ ಹೇಳಿದೆ. ಕಳೆದ ಜುಲೈನಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರ್‌ಪರಿಶೀಲನಾ ಅರ್ಜಿಯನ್ನು ನ್ಯಾಯಪೀಠ ವಜಾ ಮಾಡಿದೆ.

    ಈ ಮೂಲಕವಾಗಿ, ಜಮೀನು ಮೂಲವಾಗಿ ಮೈಸೂರು ಅರಸರಿಗೇ ಸೇರಿದ್ದಾಗಿದೆ ಎಂದು ಮತ್ತೊಮ್ಮೆ ಸುಪ್ರೀಂಕೋರ್ಟ್‌ ಹೇಳಿದೆ. ಇದೇ ಮಾತನ್ನು ಹೇಳಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್‌ ತೀರ್ಪನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿತ್ತು. ಈ ತೀರ್ಪನ್ನು ಪುನರ್‌ಪರಿಶೀಲನಾ ಅರ್ಜಿ ಮೂಲಕ ಪ್ರಶ್ನಿಸಲಾಗಿತ್ತು. ಅದು ಕೂಡ ಇದೀಗ ವಜಾಗೊಂಡಿದೆ.

    ಈ ಹಿನ್ನೆಲೆಯಲ್ಲಿ, ಚಾಮುಂಡಿಬೆಟ್ಟ ತಪ್ಪಲು ಭೂಮಿ ಉಳಿಸಿಕೊಳ್ಳುವ ರಾಜ್ಯ ಸರ್ಕಾರದ ಕಾನೂನು ಹೋರಾಟ ಅಂತ್ಯ ಕಂಡಿದೆ.

    ಅದೇ ಇನ್ನೊಂದೆಡೆ, ರಾಜ ಮನೆತನದವರಿಂದ ಭೂಮಿ ಖರೀದಿಸಿದವರ ಹೆಸರಿಗೆ ಖಾತೆ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ವಿಳಂಬ ಮಾಡಿದ್ದಕ್ಕೆ ಅಂದಿನ‌ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ

    ಭೂಮಾಲೀಕರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಹೈಕೋರ್ಟ್ ನಡೆಯುತ್ತಿದೆ. ಡಿಸೆಂಬರ್ 7ಕ್ಕೆ ವಿಚಾರಣೆ ಮುಂದೂಡಲಾಗಿದೆ. ಭೂ ಮಾಲೀಕರಿಗೆ ಖಾತೆ ಆಗದಿದ್ದರೆ ಮೈಸೂರು ಜಿಲ್ಲಾಡಳಿತ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಂಕಷ್ಟ ಎದುರಾಗಲಿದೆ.

    ಏನಿದು ವಿವಾದ?
    ಈ ಭೂಮಿಯನ್ನು ಖರಾಬ್ ಜಮೀನು ಎಂದು 2015ರಲ್ಲಿ ಆದೇಶಿಸಿದ್ದ ಜಿಲ್ಲಾಧಿಕಾರಿ ಕ್ರಮವನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿ, ಇದು ಖರೀದಿದಾರರಿಗೆ ಸೇರಬೇಕು ಎಂದು ತಿಳಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಸರ್ಕಾರ, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ, ಭೂಮಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಕಾನೂನು ಹೋರಾಟಕ್ಕೆ ಮುಂದಾಗಿತ್ತು. ಆದರೆ, ಸುಪ್ರೀಂಕೋರ್ಟ್ ನಲ್ಲೂ ಸರ್ಕಾರಕ್ಕೆ ಹಿನ್ನಡೆಯಾಗಿರುವುದರಿಂದ ಒಂದೂವರೆ ಸಾವಿರ ಎಕರೆ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡಂತಾಗಿದೆ.

    71 ವರ್ಷಗಳ ಹಿಂದಿನ ಒಪ್ಪಂದ: 1950ರಲ್ಲಿ ಭಾರತ ಸರ್ಕಾರ ಮತ್ತು ಮೈಸೂರು ಮಹಾರಾಜರ ನಡುವೆ ಈ ಜಮೀನು ಸ್ವಾಧೀನ ಕುರಿತ ಒಂದು ಒಪ್ಪಂದವೇರ್ಪಟ್ಟಿತ್ತು. ಅದರ ಪ್ರಕಾರವಾಗಿ, 1561.31 ಎಕರೆ ಜಮೀನು ಮಹಾರಾಜರಿಗೆ ಸೇರುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿತ್ತು. ಹೀಗಾಗಿ, ನಂತರದ ವರ್ಷಗಳಲ್ಲಿ ಜಮೀನನ್ನು ಒಂದೊಂದೇ ಖರೀದಿದಾರರಿಗೆ ಮಾರಾಟ ಮಾಡಲು ಮಹಾರಾಜರ ಮನೆಯವರು ಮುಂದಾಗಿದ್ದರು. 1880-83ರ ಮೂಲ ಸಮೀಕ್ಷೆಯಲ್ಲಿ, ಕುರುಬರಹಳ್ಳಿ ಗ್ರಾಮದಲ್ಲಿ ಒಟ್ಟು 152 ಸಮೀಕ್ಷೆ ಸಂಖ್ಯೆಗಳನ್ನು ರಚಿಸಲಾಗಿದೆ. ಕುರುಬರಹಳ್ಳಿ ಗ್ರಾಮದ ಒಟ್ಟು ವಿಸ್ತೀರ್ಣ 1580 ಎಕರೆ 32 ಗುಂಟೆಗಳು. 1580.32 ಎಕರೆಯಲ್ಲಿ 973 ಎಕರೆ ಮತ್ತು 14 ಗುಂಟಾಗಳನ್ನು ಖರಾಬ್ – ಬಿ ಎಂದು ವರ್ಗೀಕರಿಸಲಾಗಿತ್ತು.

    ಭೂಮಿಯಲ್ಲೀಗ ಏನಿವೆ?: ಈ ಜಮೀನಿನ ವ್ಯಾಪ್ತಿಯಲ್ಲಿ ಕೆರೆಗಳು, ಅರಣ್ಯ ಪ್ರದೇಶ, ಲಲಿತಮಹಲ್ ಅರಮನೆ, ಹೆಲಿಪ್ಯಾಡ್, ರಸ್ತೆಗಳು, ಉದ್ಯಾನವನಗಳು, ಮೃಗಾಲಯ, ರೇಸ್ ಕೋರ್ಸ್, ರಾಜ್ಯ ಆಡಳಿತ ತರಬೇತಿ ಸಂಸ್ಥೆ, ಸರ್ಕಾರಿ ಶಾಲೆಗಳು, ಕಾಲೇಜುಗಳು, ಅಂಗನವಾಡಿ ಕೇಂದ್ರಗಳು ಮುಂತಾದವುಗಳಿವೆ. ಆದರೆ, ಇವೆಲ್ಲವನ್ನೂ ಸರ್ಕಾರ ಖರಾಬ್ ಬಿ ಭೂಮಿ ಎಂದು ವರ್ಗೀಕರಿಸಿತ್ತು. ಈ ವರ್ಗೀಕರಣವನ್ನು ಖರೀದಿದಾರರು ಒಪ್ಪಿಕೊಳ್ಳಲಿಲ್ಲ ಮತ್ತು ಸುಪ್ರೀಂಕೋರ್ಟ್ ಕೂಡ ಸರ್ಕಾರದ ಕ್ರಮ ತಳ್ಳಿಹಾಕಿದೆ.

    ಖರೀದಿದಾರರು ಏನು ವಾದಿಸಿದ್ದರು?: ಭಾರತ ಸರ್ಕಾರದ ಜತೆಗಿನ ಒಪ್ಪಂದದಂತೆ ಮೈಸೂರಿನ ಮಹಾರಾಜರು ಆಸ್ತಿಯ ಏಕೈಕ ಮಾಲೀಕರು ಎಂದು ವ್ಯಾಖ್ಯಾನಕ್ಕೆ ಇಲ್ಲಿ ಅವಕಾಶವಿಲ್ಲ. ರಾಜ್ಯ ಅಥವಾ ಇತರ ಸಕ್ಷಮ ಪ್ರಾಧಿಕಾರಗಳ ಗಮನಕ್ಕೆ ತಾರದೆಯೇ ಅವರು ಯಾರಿಗೆ ಬೇಕಾದರೂ ಇದನ್ನು ಮಾರಾಟ ಮಾಡಬಹುದು.

    – 1950ರ ಒಪ್ಪಂದಕ್ಕೆ ಮುಂಚಿತವಾಗಿ ಇರುವ ಭೂಮಿಯ ಇತಿಹಾಸ ಮತ್ತು ವರ್ಗೀಕರಣ ಇಲ್ಲಿ ಅಪ್ರಸ್ತುತ. ಏಕೆಂದರೆ ಒಪ್ಪಂದದ ಪ್ರಕಾರ ಅವರಿಗೆ ವೈಯಕ್ತಿಕ ಬಳಕೆಗಾಗಿ ಭೂಮಿಯನ್ನು ನೀಡಲಾಯಿತು.
    – ರಾಜ್ಯದ ದಾಖಲೆಗಳು ತಪ್ಪುದಾರಿಗೆಳೆದಿದೆ. ಏಕೆಂದರೆ ಈ ಭೂಮಿ ಎಂದಿಗೂ ರಾಜ್ಯದ ಸ್ವಾಧೀನದಲ್ಲಿರಲಿಲ್ಲ.

    – ಮಾಲೀಕತ್ವವು ವರ್ಗೀಕರಣಕ್ಕಿಂತ ಭಿನ್ನ. ಪ್ರಸ್ತುತ ಸಂದರ್ಭದಲ್ಲಿ ವರ್ಗೀಕರಣದ ಮೂಲಕ ರಾಜ್ಯ ತನ್ನ ಹಕ್ಕು ಸಾಧಿಸಲು ಹೊರಟಿದೆ. ಆದರೆ, ಸರ್ಕಾರಕ್ಕೆ ಇಲ್ಲಿ ಹಕ್ಕೇ ಇಲ್ಲ. 1950ರ ಒಪ್ಪಂದದ ಅಡಿಯಲ್ಲಿ ಮಹಾರಾಜರಿಂದ ಭೂಮಿಯನ್ನು ಕಾನೂನುಬದ್ಧವಾಗಿ ನೀಡಲಾಗಿದೆ ಮತ್ತು ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ.

    VIDEO: ಸೆಲ್ಫಿ ಕೇಳುವ ನೆಪದಲ್ಲಿ ನಟಿ ಕವಿತಾ ಗೌಡ ಕಿಡ್ನಾಪ್‌! ಸಿಸಿಟಿವಿಯಲ್ಲಿ ಭಯಾನಕ ದೃಶ್ಯ; ಅಪಹರಣದ ರಹಸ್ಯ ಬಯಲು

    https://app.bitly.com/Bk536guVWMj/bitlinks/3l6Tubh?actions=edit

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts