

ಜೈಪುರ: ರಾಜಸ್ಥಾನದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಹುನ್ನಾರ ನಡೆಸಿದ ಆರೋಪದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಬಂಡಾಯ ಶಾಸಕ ಭನ್ವರ್ಲಾಲ್ ಶರ್ಮ ವಿರುದ್ಧ ರಾಷ್ಟ್ರದ್ರೋಹ ಮತ್ತು ಸಂಚು ರೂಪಿಸಿದ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಾವು ದಾಖಲಿಸಿಕೊಂಡಿರುವ ಎಫ್ಐಆರ್ನಲ್ಲಿರುವ ಸಂಜಯ್ ಜೈನ್ ಎಂಬ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿಯ ಜತೆ ಕೈಜೋಡಿಸಿರುವ ಕಾಂಗ್ರೆಸ್ನ ಬಂಡಾಯ ಶಾಸಕರು ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದರು ಎಂಬುದು ಪಕ್ಷದ ಆಂತರಿಕ ತನಿಖೆಯಿಂದ ದೃಢಪಟ್ಟಿರುವುದಾಗಿ ತನ್ನ ದೂರಿನಲ್ಲಿ ಕಾಂಗ್ರೆಸ್ ತಿಳಿಸಿದೆ.
ಆದರೆ, ಬಂಧಿತ ಸಂಜಯ್ ಜೈನ್ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಇದೇ ವೇಳೆ ಕಾಂಗ್ರೆಸ್ ನಾಯಕರು ಬಂಡಾಯ ಶಾಸಕರಾದ ಭನ್ವರ್ ಲಾಲ್ ಶರ್ಮ ಹಾಗೂ ವಿಶ್ವೇಂದ್ರ ಸಿಂಗ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತೊಗೆದಿದ್ದಾರೆ. ಇವರಿಬ್ಬರೂ ಜತೆಗೂಡಿ ಬಿಜೆಪಿ ಮುಖಂಡರೊಂದಿಗೆ ಕೈಜೋಡಿಸಿ, ಸರ್ಕಾರವನ್ನು ಉರುಳಿಸಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ.
ಇದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ತಮ್ಮ ಬಳಿ ಎರಡು ಆಡಿಯೋ ರೆಕಾರ್ಡಿಂಗ್ ಇರುವುದಾಗಿಯೂ ಒಂದರಲ್ಲಿ ಸರ್ಕಾರವನ್ನು ಉರುಳಿಸುವ ಬಗ್ಗೆ ಭನ್ವರ್ಲಾಲ್ ಶರ್ಮ ಬಿಜೆಪಿ ಮುಖಂಡರ ಜತೆ ಮಾತುಕತೆ ನಡೆಸಿರುವುದು ಪತ್ತೆಯಾಗಿದೆ. ಅದರಲ್ಲಿ ಇರುವ ಬಿಜೆಪಿ ಮುಖಂಡರ ಧ್ವನಿ ಶೇಖಾವತ್ ಅವರದ್ದಾಗಿದೆ ಎಂದು ಆರೋಪಿಸಿದ್ದರು.
ತಾವು ಮಾಡಿರುವ ಎಲ್ಲ ಆರೋಪಗಳು ಮತ್ತು ದಾಖಲಿಸುವ ದೂರುಗಳ ತನಿಖೆಯನ್ನು ರಾಜಸ್ಥಾನ ಪೊಲೀಸ್ ವಿಶೇಷ ಕಾರ್ಯಾಪಡೆಯ (ಎಸ್ಒಜಿ) ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಎಸ್ಒಜಿ ಒಂದು ರಾಷ್ಟ್ರದ್ರೋಹ ಸೇರಿ ಎರಡು ಎಫ್ಐಆರ್ಗಳನ್ನು ದಾಖಲಿಸಿಕೊಂಡಿತು ಎನ್ನಲಾಗಿದೆ.
ತನಿಖೆಗೆ ಸಿದ್ಧ: ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಆರೋಪಿಸಿರುವಂತೆ ಆಡಿಯೋ ರೆಕಾರ್ಡಿಂಗ್ನಲ್ಲಿರುವುದು ನನ್ನ ಧ್ವನಿಯಲ್ಲ. ಈ ಕುರಿತು ಯಾವುದೇ ರೀತಿಯ ತನಿಖೆಗೂ ನಾನು ಸಿದ್ಧ. ಎಲ್ಲಿಯೇ ವಿಚಾರಣೆ ನಡೆದರೂ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಈ ಆಡಿಯೋ ರೆಕಾರ್ಡಿಂಗ್ಗಳು ಆನ್ಲೈನ್ನಲ್ಲಿ ಸಾಕಷ್ಟು ವೈರಲ್ ಆಗಿದೆ. ಆದರೆ, ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ಅವನ್ನು ಪ್ರಸಾರ ಮಾಡಲಿಲ್ಲ. ಬದಲಿಗೆ ಆ ಆಡಿಯೋ ಟೇಪ್ನಲ್ಲಿದೆ ಎನ್ನಲಾದ ಮಾತುಕತೆಯ ವಿವರವನ್ನು ತಾವೇ ಓದಿ ಹೇಳಿದ್ದು ವಿಶೇಷವಾಗಿತ್ತು.