

| ಕೀರ್ತಿನಾರಾಯಣ ಸಿ. ಬೆಂಗಳೂರು
ಪೆಟ್ರೋಲ್ ಬಂಕ್, ಟೋಲ್ ಪ್ಲಾಜಾ ಹೀಗೆ ಎಲ್ಲೆಂದರಲ್ಲಿ ವಾಹನ ವಿಮಾ ಪಾಲಿಸಿ ಖರೀದಿಸುವ ಮುನ್ನ ಎಚ್ಚರವಿರಲಿ! ಏಕೆಂದರೆ, ನೀವು ನಾಲ್ಕು ಚಕ್ರ ಅಥವಾ ಮೂರು ಚಕ್ರದ ವಾಹನದ ವಿಮಾ ಪಾಲಿಸಿಗೆ ಹಣ ಪಾವತಿಸಿದ್ದರೆ, ಇನ್ಶೂರೆನ್ಸ್ ಕಂಪನಿಯಲ್ಲಿ ದ್ವಿಚಕ್ರ ವಾಹನ ಹೆಸರಲ್ಲಿ ನೋಂದಾಯಿಸಿ, ಫೋಟೋಶಾಪ್ನಲ್ಲಿ ವಿವರಗಳನ್ನು ತಿದ್ದಿ ನಕಲಿ ಪಾಲಿಸಿ ಕೈಗಿಡುವ ವಂಚಕ ಜಾಲಗಳು ಸಕ್ರಿಯವಾಗಿವೆ. ಕರ್ನಾಟಕದಲ್ಲಿ ಒಂದೇ ಕಂಪನಿಯ ಹೆಸರಲ್ಲಿ 450ಕ್ಕೂ ಅಧಿಕ ನಕಲಿ ವಿಮಾ ಪಾಲಿಸಿ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ಶೂರೆನ್ಸ್ ಕಂಪನಿಗಳು ಹಾಗೂ ವಾಹನ ಮಾಲೀಕರಿಗೆ ಆತಂಕ ಶುರುವಾಗಿದೆ.
ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಕೊಟ್ಟ ದೂರಿನ ಮೇರೆಗೆ ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್ ಪೊಲೀಸ್ ಠಾಣೆ ಹಾಗೂ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿವೆ. ವಂಚನೆಗೆ ಬಳಸಿರುವ ನೂರಾರು ಇ-ಮೇಲ್ ಐಡಿಗಳು ಹಾಗೂ ಮೊಬೈಲ್ ನಂಬರ್ಗಳ ಮಾಹಿತಿ ಸಿಕ್ಕಿದ್ದು, ಅದರ ಆಧಾರದಲ್ಲಿ ಆರೋಪಿಗಳ ಪತ್ತೆಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ನಡೆದಿರುವ ನಕಲಿ ವಾಹನ ಪಾಲಿಸಿ ವಂಚನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ, ತಮಿಳುನಾಡು ಮತ್ತು ಹರಿಯಾಣ ಸೇರಿ ಇತರ ರಾಜ್ಯಗಳ ಪೊಲೀಸ್ ಠಾಣೆಗಳಲ್ಲೂ ದೂರುಗಳು ದಾಖಲಾಗಿವೆ. ತಮಿಳುನಾಡಿನಲ್ಲಿ 500ಕ್ಕೂ ಹೆಚ್ಚು ಇಂತಹ ವಂಚನೆ ಪ್ರಕರಣಗಳು ಪತ್ತೆಯಾಗಿದ್ದು, ಕೋಟ್ಯಂತರ ರೂ. ವಂಚಿಸಲಾಗಿದೆ. ಐಷಾರಾಮಿ ಕಾರುಗಳು ಹಾಗೂ ಭಾರಿ ಗಾತ್ರದ ವಾಣಿಜ್ಯ ಬಳಕೆಯ ವಾಹನಗಳಿಗೆ ನಕಲಿ ವಿಮಾ ಪಾಲಿಸಿ ಕೊಟ್ಟು ವಂಚಿಸಿರುವ ಪ್ರಕರಣಗಳು ಹೆಚ್ಚು ವರದಿಯಾಗಿವೆ.
ಬಿಎಂಡಬ್ಲ್ಯು ಕಾರಿಗೆ 80 ಸಾವಿರ ರೂ.ನಿಂದ 1 ಲಕ್ಷ ರೂ. ವರೆಗೆ ವಿಮಾ ಮೊತ್ತ ಪಾವತಿಸಬೇಕಾಗುತ್ತದೆ. ಬೈಕ್ಗೆ 500 ರೂ.ನಿಂದ 1500 ರೂ.ವರೆಗೆ ಇದೆ. ಮಾಲೀಕನಿಂದ 1 ಲಕ್ಷ ರೂ. ಪಡೆಯುವ ವಂಚಕರು, ಬೈಕ್ ಹೆಸರಲ್ಲಿ 500 ರೂ. ನಿಂದ 1500 ರೂ. ಪಾವತಿಸಿ ಪಾಲಿಸಿ ಪ್ರಮಾಣಪತ್ರ ನೀಡಿ ಮೋಸ ಮಾಡುತ್ತಿದ್ದಾರೆ.
225 ವಾಹನಕ್ಕೆ ನಕಲಿ ವಿಮೆ ಕೊಟ್ಟವ ಸೆರೆ: ಅಕೋ ಜನರಲ್ ಇನ್ಸುರೆನ್ಸ್ ಹೆಸರಿಲ್ಲಿ ವಂಚಿಸಿದ್ದ ಪ್ರಕರಣದಲ್ಲಿ ಇತ್ತೀಚೆಗೆ ಅರೋಪಿಯೊಬ್ಬನನ್ನು ಬಂಧಿಸಲಾಗಿತ್ತು. ಓಲಾದಿಂದ ಖರೀದಿಸಿದ್ದ 225 ಕಾರುಗಳಿಗೆ ಬೈಕ್ ಹೆಸರಲ್ಲಿ ವಿಮಾ ಪಾಲಿಸಿ ಮಾಡಿಸಿದ್ದ. ಆನ್ಲೈನ್ ಅಪ್ಲಿಕೇಷನ್ ದುರ್ಬಳಕೆ ಮಾಡಿಕೊಂಡು ಕೃತ್ಯವೆಸಗಿದ್ದ. ಆ ಪ್ರಕರಣದ ಬೆನ್ನಲ್ಲೇ ಇನ್ನೊಂದು ಬೃಹತ್ ಹಗರಣ ಬೆಳಕಿಗೆ ಬಂದಿದೆ.
ಶಿವಮೊಗ್ಗ ಆರ್ಟಿಒದಲ್ಲಿ ನೋಂದಣಿಯಾಗಿ ರುವ ವಾಹನಕ್ಕೆ ಜಯನಗರ ಇನ್ಶೂರೆನ್ಸ್ ಕಚೇರಿಯಲ್ಲಿ ಪಾಲಿಸಿ ಮಾಡಲಾಗಿದೆ. ಅಶೋಕ ಲೇಲ್ಯಾಂಡ್ನ ವಾಣಿಜ್ಯ ಬಳಕೆಯ ಭಾರಿ ವಾಹನಕ್ಕೆ ಹೀರೋ ಹೋಂಡಾ ಬೈಕ್ ಹೆಸರಿನಲ್ಲಿ ವಿಮಾ ಪಾಲಿಸಿ ಮಾಡಿಕೊಡಲಾಗಿದೆ. ಭಾರಿ ವಾಹನದ ಪಾಲಿಸಿಯ ಮೊತ್ತ ಜಿಎಸ್ಟಿ ಸೇರಿ 47,406 ರೂ. ಇದೆ. ಬೈಕ್ ಪಾಲಿಸಿಯ ಮೊತ್ತ ಜಿಎಸ್ಟಿ ಸೇರಿ 1,330 ರೂ. ಇದೆ. ಮಾಲೀಕನಿಂದ 47,406 ರೂ. ಪಡೆದಿರುವ ವಂಚಕರು ಬೈಕ್ ಹೆಸರಲ್ಲಿ 1,330 ರೂ. ಕೊಟ್ಟು ಪಾಲಿಸಿ ಮಾಡಿಸಿದ್ದಾರೆ. ನಂತರ ಹೀರೋ ಹೋಂಡಾ ಸ್ಥಳದಲ್ಲಿ ಅಶೋಕ ಲೇಲ್ಯಾಂಡ್ ಹಾಗೂ ಪಾಲಿಸಿ ಮೊತ್ತ 1330 ರೂ.ನ ಜಾಗದಲ್ಲಿ 47,406 ರೂ. ಎಂದು ಫೋಟೋಶಾಪ್ನಲ್ಲಿ ತಿದ್ದಿ ಮಾಲೀಕನಿಗೆ ಕೊಟ್ಟಿದ್ದಾರೆ.
ಕೋರಮಂಗಲ ಆರ್ಟಿಒದಲ್ಲಿ ನೋಂದಣಿಯಾಗಿರುವ ಲಾರಿಯ ಗ್ರಾಸ್ ವೆಹಿಕಲ್ ವೇಟ್ (ಜಿವಿಡಬ್ಲ್ಯು) ಅನ್ನೇ ಕಡಿಮೆ ತೋರಿಸಿ ವಿಮಾ ಪಾಲಿಸಿ ಮಾಡಿಕೊಡಲಾಗಿದೆ. ಪಾಲಿಸಿ ಮೊತ್ತ 43 ಸಾವಿರ ರೂ. ಪಾವತಿಸಬೇಕಾದ ಜಾಗದಲ್ಲಿ 18 ಸಾವಿರ ರೂ. ಕಟ್ಟಿ ಪಾಲಿಸಿ ಮಾಡಿಸಲಾಗಿತ್ತು. 2021ರ ಆ.5ರಂದು ಇದೇ ಲಾರಿ ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿ ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು, ಸವಾರರಿಬ್ಬರು ಗಾಯಗೊಂಡಿದ್ದರು. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿ, ಸದ್ಯ ಬೆಂಗಳೂರು ಸಿಟಿ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಒಬ್ಬ ಗಾಯಾಳು 25 ಲಕ್ಷ ರೂ. ವಿಮೆಗೆ ಕ್ಲೇಮ್ ಮಾಡಿದ್ದಾರೆ. ಆದರೆ, ವಿಮಾ ಕಂಪನಿ ಪರಿಶೀಲನೆಯಲ್ಲಿ ಪಾಲಿಸಿ ಗೋಲ್‍ಮಾಲ್ ಗೊತ್ತಾಗಿ, ವಿಮಾ ಪರಿಹಾರ ಕೊಡಲಾಗದು ಎಂದು ಹೇಳಿದೆ.
ಮಹಾರಾಷ್ಟ್ರ ಆರ್ಟಿಒದಲ್ಲಿ ನೋಂದಣಿ ಯಾಗಿರುವ ಅಪೆ ಪೋರ್ಟರ್ ವಾಣಿಜ್ಯ ವಾಹನಕ್ಕೆ ಟಿವಿಎಸ್ ಸ್ಕೂಟಿ ಹೆಸರಲ್ಲಿ ಪಾಲಿಸಿ ಮಾಡಿಕೊಡಲಾಗಿದೆ. ಅಪೆ ಪೋರ್ಟರ್ ವಾಹನಕ್ಕೆ ಜಿಎಸ್ಟಿ ಸೇರಿ 18,580 ರೂ. ಪಾಲಿಸಿ ಮೊತ್ತ ಆಗುತ್ತೆ. ಟಿವಿಎಸ್ ಸ್ಕೂಟಿಗೆ ಜಿಎಸ್ಟಿ ಸೇರಿ 569 ರೂ. ಇದೆ. ಮಾಲೀಕನಿಂದ 18,580 ರೂ. ಪಡೆದಿರುವ ವಂಚಕರು, ಟಿವಿಎಸ್ ಸ್ಕೂಟಿ ಹೆಸರಲ್ಲಿ 569 ರೂ. ಪಾವತಿಸಿ ಪಾಲಿಸಿ ಮಾಡಿಸಿದ್ದಾರೆ. ನಂತರ ಪೋಟೋಶಾಪ್ನಲ್ಲಿ ವಿವರಗಳನ್ನು ತಿದ್ದಿ, ಆಪೆ ಪಾಲಿಸಿ ಎಂದು ಮಾಲೀಕನಿಗೆ ನಂಬಿಸಿದ್ದಾರೆ.