

ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದರೂ ಸಿಎಂ ಸ್ಥಾನಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಪೈಪೋಟಿ ಹೈಕಮಾಂಡ್ಗೆ ಭಾರಿ ತಲೆನೋವು ತಂದಿಟ್ಟಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗ ನಾಯಕರೊಂದಿಗೆ ಸಿದ್ದರಾಮಯ್ಯ ದೆಹಲಿಗೆ ಬಂದಿದ್ದರೂ, ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದರಿಂದ ಸೋಮವಾರ ಸಂಜೆ ಉಭಯ ನಾಯಕರ ಜತೆ ಖರ್ಗೆ ನಡೆಸಬೇಕಿದ್ದ ಸಭೆ ರದ್ದಾಗಿದೆ. ಶಿವಕುಮಾರ್ಗೆ ಮಂಗಳವಾರ ದೆಹಲಿಗೆ ಬರಲೇಬೇಕೆಂದು ಸೂಚನೆ ನೀಡಲಾಗಿದೆ. ಅವರು ಬಂದ ಬಳಿಕ ಸಿದ್ದರಾಮಯ್ಯ ಜತೆ ಸಭೆ ನಡೆಸಲು ಖರ್ಗೆ ತೀರ್ವನಿಸಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ಶಾಸಕರ ಬೆಂಬಲವಿರುವ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಬೇಕು ಎಂಬ ಅಭಿಪ್ರಾಯದಿಂದ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನಗೊಂಡಿದ್ದಾರೆ. ಹೀಗಾಗಿಯೇ, ಹೈಕಮಾಂಡ್ ಕರೆಯನ್ನು ನಿರ್ಲಕ್ಷಿಸಿರುವ ಡಿಕೆಶಿ, ಮೊದಲು 5 ವರ್ಷಗಳ ಕಾಲ ಸಿಎಂ, ನಂತರ 5 ವರ್ಷಗಳ ಕಾಲ ಪ್ರತಿಪಕ್ಷದ ನಾಯಕ...ಈಗ ಮತ್ತೆ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಲು ಹೊರಟಿದ್ದೀರಿ. ಹೀಗಿದ್ದಾಗ ನಾನ್ಯಾಕೆ ದೆಹಲಿಗೆ ಬರಬೇಕು ಎಂದು ವರಿಷ್ಠರಿಗೇ ಸೆಡ್ಡು ಹೊಡೆದಿದ್ದಾರೆ. ಹೀಗಾಗಿ ಸಿಎಂ ಆಯ್ಕೆ ಜಟಿಲವಾಗಿದ್ದು, ಸಿದ್ದರಾಮಯ್ಯ-ಡಿಕೆಶಿ ಬಹಿರಂಗ ಸಂಘರ್ಷ ಹೊಸ ಸವಾಲನ್ನೊಡ್ಡಿದೆ.
ಹೊಟ್ಟೆ ನೋವಿನ ನೆಪ: ಸೋಮವಾರ ಸಂಜೆ ದೆಹಲಿಗೆ ಹೋಗಲು ಸಜ್ಜಾಗಿದ್ದ ಡಿಕೆಶಿ ಅವರಿಗೆ ಅಲ್ಲಿನ ನಡೆದಿರುವ ವಿದ್ಯಮಾನಗಳ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಹೊಟ್ಟೆ ನೋವಿನ ನೆಪ ಹೇಳಿ ದೆಹಲಿ ಪ್ರವಾಸದಿಂದ ದೂರ ಉಳಿದರು. ಆದರೆ ತಮ್ಮ ಡಿ.ಕೆ. ಸುರೇಶ್ ಅವರನ್ನು ಕಳುಹಿಸಿಕೊಟ್ಟರು.
ವೀಕ್ಷಕರಿಂದ ವರದಿ ಸಲ್ಲಿಕೆ: ರಾಜ್ಯಕ್ಕೆ ಭೇಟಿ ನೀಡಿ ಶಾಸಕರ ಅಭಿಪ್ರಾಯ ಸಂಗ್ರಹಿಸಿಕೊಂಡು ಬಂದಿದ್ದ ವೀಕ್ಷಕರಾದ ಸುಶೀಲ್ ಕುಮಾರ್ ಶಿಂಧೆ, ದೀಪಕ್ ಬಬಾರಿಯಾ ಮತ್ತು ಜಿತೇಂದ್ರ ಸಿಂಗ್ ಜತೆ ಖರ್ಗೆ ಸಭೆ ನಡೆಸಿದ್ದು, ವರದಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದು, ಡಿಕೆಶಿಯವರನ್ನು ಸಮಾಧಾನಪಡಿಸದಿದ್ದರೆ ಪಕ್ಷಕ್ಕೆ ಭಾರಿ ಹಾನಿಯಾಗುವ ಸಾಧ್ಯತೆ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಖರ್ಗೆ ನಿವಾಸಕ್ಕೆ ಸುರೇಶ್: ಅಣ್ಣ ಶಿವಕುಮಾರ್ ಗೈರಿನ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಖರ್ಗೆ ನಿವಾಸಕ್ಕೆ ಡಿ.ಕೆ. ಸುರೇಶ್ ಭೇಟಿ ನೀಡಿದ್ದು, ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವ ವಿಚಾರದ ಬಗ್ಗೆ ತೀವ್ರ ವಿರೋಧ ಹೊರಹಾಕಿ ಬಂದಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಪಕ್ಷ ಸಂಘಟನೆಗಾಗಿ ನಾವು ಎಷ್ಟು ಶ್ರಮ ಹಾಕಿದ್ದೇವೆ, ಸಿದ್ದರಾಮಯ್ಯನವರು ಏನು ಶ್ರಮ ಹಾಕಿದ್ದಾರೆ ಎನ್ನುವುದನ್ನು ತಾಳೆ ಹಾಕಿ ನೋಡಿ. ಆಗಲೇ ವಾಸ್ತವ ಗೊತ್ತಾಗುತ್ತದೆ. ನಮ್ಮ ಬೇಡಿಕೆ ನ್ಯಾಯಯುತ. ನೀವು ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ಶಿವಕುಮಾರ್ ಸಂದೇಶವನ್ನು ರವಾನಿಸಿ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಪ್ತರೊಂದಿಗೆ ಸಿದ್ದು ಸಭೆ: ಕರ್ನಾಟಕ ಭವನದ ಬದಲು ದೆಹಲಿಯ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ಸಿದ್ದರಾಮಯ್ಯಗೆ ಶಾಸಕರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಜಮೀರ್ ಅಹ್ಮದ್, ಅಶೋಕ್ ಪಟ್ಟಣ, ಭೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ ಹಾಗೂ ಪುತ್ರ ಯತೀಂದ್ರ ಸಾಥ್ ನೀಡಿದ್ದಾರೆ. ನಂತರ ಸಿದ್ದರಾಮಯ್ಯ ಅವರಿದ್ದ ಹೋಟೆಲ್ಗೆ ಬಂದ ಶಾಸಕ ಕೆ.ಎಚ್. ಮುನಿಯಪ್ಪ, ಆರ್.ವಿ. ದೇಶಪಾಂಡೆ, ಪ್ರಕಾಶ್ ಹುಕ್ಕೇರಿ, ಗಣೇಶ್ ಹುಕ್ಕೇರಿ ಜತೆ ಮಾತುಕತೆ ನಡೆಸಿದ್ದಾರೆ.
ಶಾಸಕರು ನಮ್ಮ ಜತೆಗಿದ್ದಾರೆ!: ಹೋಟೆಲ್ನಲ್ಲಿ ಮಾತಿಗೆ ಸಿಕ್ಕ ಸಿದ್ದರಾಮಯ್ಯ ಆಪ್ತ ಶಾಸಕರೊಬ್ಬರು, ಬಹುತೇಕರ ಬೆಂಬಲ ಸಿದ್ದರಾಮಯ್ಯ ಅವರಿಗೆ ಇರುವುದರಿಂದ ಅವರನ್ನೇ ಸಿಎಂ ಮಾಡಬೇಕು. ಕೆಲವೇ ಗಂಟೆಗಳಲ್ಲಿ ಅದು ಘೊಷಣೆಯಾಗಲಿದೆ ಎಂದು ಹೇಳಿದರು. ಎರಡು ವರ್ಷಗಳಿಗಷ್ಟೇ ಸಿದ್ದರಾಮಯ್ಯ ಸಿಎಂ ಆಗಿರುತ್ತಾರಾ ಎಂಬ ಪ್ರಶ್ನೆಗೆ ಆ ಶಾಸಕರು ಕಿರುನಗೆ ತೋರಿದರೆ ಹೊರತು ಯಾವುದೇ ಉತ್ತರ ನೀಡಲಿಲ್ಲ.
ಅಭಿಪ್ರಾಯ ಕೇಳುತ್ತಿರುವ ಖರ್ಗೆ: ದೆಹಲಿಗೆ ಬಂದಿರುವ ರಾಜ್ಯ ಕಾಂಗ್ರೆಸ್ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತಿರುವ ಖರ್ಗೆ, ಎಲ್ಲರ ಅಭಿಪ್ರಾಯ ಅನಿಸಿಕೆಗಳನ್ನು ಕೇಳುತ್ತಿದ್ದಾರೆ. ಎರಡು ಬಣಗಳ ಮುಖಂಡರೊಂದಿಗೆ ಮಾತುಕತೆ ಮಾಡಿ, ಅವರ ಮನದಾಳ ಅರಿಯುವ ಯತ್ನ ಮಾಡಿದ್ದಾರೆ.
ಬಹುಪಾಲು ಶಾಸಕರು ನನ್ನ ಪರವಾಗಿದ್ದಾರೆ, ನಾನೇ ಸಿಎಂ ಆಗಬೇಕೆಂದು ಜನರ ಬಯಕೆ. ಈ ಸರ್ಕಾರ ತರುವಲ್ಲಿ ನನ್ನ ಶ್ರಮ ಹೆಚ್ಚಿದೆ, ಹೀಗಾಗಿ ಐದು ವರ್ಷ ಪೂರ್ಣ ಸಿಎಂ ಸ್ಥಾನ ನನಗೇ ಕೊಡೇಕು. | ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಸೋನಿಯಾ ಅವರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ಮಂಗಳವಾರ ದೆಹಲಿಗೆ ತೆರಳುತ್ತೇನೆ. ಸ್ವಲ್ಪ ಆರೋಗ್ಯ ಏರುಪೇರಾಗಿತ್ತು, ಹೀಗಾಗಿ ಸೋಮವಾರ ಹೋಗಲಿಲ್ಲ. ಸೋನಿಯಾ ಕೂಡ ದಿಲ್ಲಿಯಲ್ಲಿ ಇರಲಿಲ್ಲ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
2. ಹೆಚ್ಚು ಶಾಸಕರ ಬೆಂಬಲ ಹೊಂದಿದ್ದು, ಜನರ ಒಲವು ಅವರ ಕಡೆಗೇ ಇದೆ
3. ಈ ಸರ್ಕಾರ ತರುವಲ್ಲಿ ಶ್ರಮ ಹೆಚ್ಚಿದೆ, ಅನೇಕ ಪ್ರಮುಖ ಸಮುದಾಯಗಳು ಜತೆ ಇವೆ
4. ಈ ವಾತಾವರಣದಲ್ಲಿ ಉತ್ತಮ ಆಡಳಿತಕ್ಕೆ ಅನುಭವ ಅಗತ್ಯ. ಅದಕ್ಕೆ ಸಿದ್ದು ಸೂಕ್ತ
5. ಯಾವುದೇ ಕಳಂಕವಿಲ್ಲ, ಈ ಹಿಂದೆ ಐದು ವರ್ಷ ಉತ್ತಮ ಆಡಳಿತ ನೀಡಿದ್ದಾರೆ
2. ಹಳೇ ಮೈಸೂರು ಭಾಗದಲ್ಲಿ ಮತ ವರ್ಗಾವಣೆಗೆ ಡಿಕೆ ಪ್ರಯತ್ನ ಕಾರಣ, ಸ್ಥಾನ ಹೆಚ್ಚಿದೆ
3. ಅಧಿಕಾರ ಹಂಚಿಕೆ ಸೂತ್ರ ಬೇರೆಡೆ ವರ್ಕೌಟ್ ಆಗಿಲ್ಲ. ಹೀಗಾಗಿ ಮೊದಲ ಅವಕಾಶ ಕೊಡಬೇಕು
4. ಪಕ್ಷ ಕುಸಿದಿದ್ದಾಗ ಇಡೀ ರಾಜ್ಯ ಸುತ್ತಾಡಿ ಬೆವರು ಹರಿಸಿದ್ದಾರೆ, ಪ್ರಬಲ ಸಮುದಾಯ ಜತೆಗಿದೆ
5. ಈಗಾಗಲೇ ಸತತ 10 ವರ್ಷ ಅಧಿಕಾರ ಅನುಭವಿಸಿದವರಿಗೆ ಮತ್ತೆ ಅವಕಾಶವೇ?
ಬೆಂಗಳೂರು: ನಾನು ರೆಬೆಲ್ ಅಲ್ಲ, ಬ್ಲ್ಯಾಕ್ಮೇಲೆ ಮಾಡಲ್ಲ. ಆ ರೀತಿ ಮಾಡುವವನೂ ನಾನಲ್ಲ, ನನಗೆ ದೂರದೃಷ್ಟಿ ಇದೆ. ಪಕ್ಷ ನಿಷ್ಠನಾಗಿರುತ್ತೇನೆ ಎಂದು ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ. ಮುಖ್ಯಮಂತ್ರಿ ಆಯ್ಕೆ ವಿಚಾರ ಕೇಂದ್ರ ನಾಯಕರ ಅಂಗಳದಲ್ಲಿದೆ. ಅವರು ಈ ಗೆಲುವಿನ ಹಿಂದೆ ಯಾರಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.
ಇದೇ ವೇಳೆ ಸುದ್ದಿಗಾರರ ನಂಬರ್ ಗೇಮ್ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಸಿದ್ದರಾಮಯ್ಯಗೆ ಸಂಖ್ಯಾಬಲವಿದೆ, ಅವರಿಗೆ ಆಲ್ದಿ ಬೆಸ್ಟ್ ಎಂದು ಮಾರ್ವಿುಕವಾಗಿ ಹೇಳಿದರು. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಮತ್ತು ರಾಹುಲ್ ಗಾಂಧಿ ನನ್ನ ಮೇಲೆ ವಿಶ್ವಾಸ ಹೊಂದಿದ್ದಾರೆ. ನಾವು ವಿಷಯವನ್ನು ಅವರಿಗೆ ಬಿಡುತ್ತೇವೆ ಎಂದ ಅವರು, ನಿನ್ನ ಮೇಲೆ ವಿಶ್ವಾಸವಿದೆ ಎಂದು ಸೋನಿಯಾ ಗಾಂಧಿ ನನಗೆ ಹೇಳಿದ್ದರು ಎಂದು ನೆನಪಿಸಿಕೊಂಡರು.
135 ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಒಂದು ಸಾಲಿನ ನಿರ್ಣಯ ಅಂಗೀಕರಿಸಿದ್ದಾರೆ, ಕೆಲವರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನನ್ನ ಶಕ್ತಿ 135 ಶಾಸಕರು, ನನ್ನ ನಾಯಕತ್ವದಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದಿದೆ ಎಂದರು.
ಗೆಲುವಿನ ಹಿಂದಿನ ಶ್ರಮ ಹಾಗೂ ಗೆಲುವಿನ ಹಿಂದೆ ಯಾರಿದ್ದಾರೆಂಬುದನ್ನು ಒಪ್ಪಿಕೊಳ್ಳುವ ಸೌಜನ್ಯ ಇರಬೇಕಾಗುತ್ತದೆ ಎಂದ ಅವರು, ನಮ್ಮ ಶಾಸಕರು ಪಕ್ಷದಿಂದ ಹೊರಗೆ ಹೋದಾಗ ನಾನು ಎದೆಗುಂದದೆ ಧೈರ್ಯದಿಂದ ಜವಾಬ್ದಾರಿ ವಹಿಸಿಕೊಂಡಿದ್ದೇನೆ, ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಏನಾಯಿತು ಎಂಬುದನ್ನು ನಾನು ಬಹಿರಂಗಪಡಿಸಲು ಬಯಸುವುದಿಲ್ಲ ಎಂದು ತಿಳಿಸಿದರು.