ಒಡೆಸಾ ಬಂದರು, ಮರಿಯುಪೋಲ್ ಸ್ಥಾವರ ಧ್ವಂಸ: ಯೂಕ್ರೇನ್ ನೆರವಿನ ಮಸೂದೆಗೆ ಬೈಡೆನ್ ಅಸ್ತು; ಇಝಿಯುಂನಲ್ಲಿ 44 ಶವ ಪತ್ತೆ

Ukraine
ಖಾರ್ಕಿವ್​​ನ ಇಝಿಯುಂ ಎಂಬಲ್ಲಿ ಕುಸಿದ್ದ ಕಟ್ಟಡದಲ್ಲಿ ಸಿಕ್ಕ ಶವಗಳು
Published on

ಝುಪೋರಿಝುಝಿಯಾ(ಯೂಕ್ರೇನ್): ರಷ್ಯಾ ಹಾರಿಸಿದ ಹೈಪರ್​ಸಾನಿಕ ಕ್ಷಿಪಣಿಯಿಂದ ಒಡೆಸಾದ ಬಂದರು ಧ್ವಂಸಗೊಂಡಿದೆ ಎಂದು ಯೂಕ್ರೇನ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಸಾಮಗ್ರಿಗಳ ಸರಬರಾಜು ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಅಸ್ತವ್ಯಸ್ತಗೊಳಿಸುವುದು ಕಪು್ಪ ಸಮುದ್ರದಲ್ಲಿರುವ ಬಂದರು ನಾಶದ ಹಿಂದಿರುವ ರಷ್ಯಾದ ಉದ್ದೇಶವಾಗಿದೆ. ಇನ್ನೊಂದೆಡೆ, ರಷ್ಯಾ ಪಡೆಗಳಿಗೆ ಸಂಪೂರ್ಣ ನಿಯಂತ್ರಣ ಬಿಟ್ಟು ಕೊಡದಂತೆ ತೀವ್ರ ಪ್ರತಿರೋಧ ಒಡ್ಡಲಾಗುತ್ತಿರುವ ಮಹತ್ವದ ಮರಿಯುಪೋಲ್ ಬಂದರಿನಲ್ಲಿನ ಉಕ್ಕು ಸ್ಥಾವರದ ಮೇಲೂ ರಷ್ಯಾ ದಾಳಿ ಮಾಡಿದೆ. ಬಾಂಬ್ ದಾಳಿಗಳಿಂದ ತಪ್ಪಿಸಿಕೊಳ್ಳಲು ಇನ್ನೂ ಸುಮಾರು ನೂರು ಜನರು ಸುರಂಗ ಮಾರ್ಗಗಳಲ್ಲಿ ಅಡಗಿ ಕುಳಿತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

44 ಶವ ಪತ್ತೆ: ಖಾರ್ಕಿವ್​ ಪ್ರದೇಶದ ಇಝಿಯುಂ ಎಂಬಲ್ಲಿ ಮಾರ್ಚ್​ನಲ್ಲಿ ರಷ್ಯಾ ನಾಶ ಮಾಡಿದ್ದ ಒಂದು ಕಟ್ಟಡದ ಅಡಿಯಲ್ಲಿ 44 ನಾಗರಿಕರ ದೇಹಗಳು ಪತ್ತೆಯಾಗಿವೆ ಎಂದು ಯೂಕ್ರೇನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೂಕ್ರೇನ್ ನೆರವಿನ ಮಸೂದೆಗೆ ಸಹಿ: ರಷ್ಯಾ ವಿರುದ್ಧ ಸೆಣಸುತ್ತಿರುವ ಯೂಕ್ರೇನ್​ಗೆ ನೆರವಾಗುವ ಮಸೂದೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಹಿ ಹಾಕಿದ್ದಾರೆ. ರಷ್ಯಾ ವಿರುದ್ಧ ರಣರಂಗದಲ್ಲಿ ಯೂಕ್ರೇನ್ ಯಶಸ್ಸಿಗೆ ಈ ನೆರವು ತುಂಬಾ ನಿರ್ಣಾಯಕ ಎಂದು ಅವರು ಹೇಳಿದ್ದಾರೆ.

4,000 ಕೋಟಿ ಡಾಲರ್ ಆರ್ಥಿಕ ನೆರವು ಒದಗಿಸುವುದು ಇದರ ಉದ್ದೇಶವಾಗಿದೆ. ದ್ವಿತೀಯ ವಿಶ್ವ ಯುದ್ಧದ ವೇಳೆ ಹಿಟ್ಲರ್ ನೇತೃತ್ವದ ನಾಜಿ ಜರ್ಮನಿಯನ್ನು ಸೋಲಿಸಲು ಸಂಯುಕ್ತ ರಂಗ ಅನುಸರಿಸಿದ್ದ ‘ಲೆಂಡ್-ಲೀಸ್’ ಕಾರ್ಯಕ್ರಮಕ್ಕೆ ಮರುಜೀವ ಕೊಡುವ ಗುರಿ ಹೊಂದಿರುವ ಮಸೂದೆ, ರಷ್ಯಾ ವಿರುದ್ಧ ಜಂಟಿ ಹೋರಾಟಕ್ಕೆ ಬಲ ನೀಡಲಿದೆ. ರಷ್ಯಾ ವಿರುದ್ಧ ಹೋರಾಡಲು ಇನ್ನೂ ಸಾವಿರಾರು ಕೋಟಿ ಡಾಲರ್ ಹಣ ವೆಚ್ಚ ಮಾಡಲು ಅಮೆರಿಕದ ಸಂಸತ್ತು (ಕಾಂಗ್ರೆಸ್) ಸಿದ್ಧವಿದ್ದು ಅದರ ಜೊತೆಯಲ್ಲೇ ಬೈಡೆನ್ ಈ ಮಸೂದೆಗೆ ಸೋಮವಾರ ಸಹಿ ಹಾಕಿದ್ದಾರೆ.

ಹೊಣೆ ನಿರ್ಧರಿಸಲು ಬದ್ಧ: ರಷ್ಯಾ ಯುದ್ಧದ ವೇಳೆ ಯೂಕ್ರೇನ್​ನ ಬುಚಾ ನಗರದಲ್ಲಿ ನಡೆದ ನಾಗರಿಕರ ಹತ್ಯೆಗಳಿಗೆ ಹೊಣೆ ನಿಗದಿಪಡಿಸಲು ಅಂತಾರಾಷ್ಟ್ರೀಯ ಸಮುದಾಯ ಬದ್ಧವಾಗಿದೆ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್​ಬಾಕ್ ಪಣತೊಟ್ಟಿದ್ದಾರೆ. ಕಿಯೆವ್ ನಗರದ ಹೊರವಲಯದಲ್ಲಿರುವ ಬುಚಾ ಪಟ್ಟಣಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿದ್ದ ಬೇರ್​ಬಾಕ್, ಅಲ್ಲಿನ ಪರಿಸ್ಥಿತಿಯ ಖುದ್ದು ವೀಕ್ಷಣೆ ನಡೆಸಿದರು. ರಷ್ಯಾ ಆಕ್ರಮಣದ ವೇಳೆ ಬುಚಾ ಪಟ್ಟಣದಲ್ಲಿ ಊಹಿಸಲಸಾಧ್ಯವಾದ ಅಪರಧ ಎಸಗಲಾಗಿದೆ ಎಂದು ಜರ್ಮನಿ ನಾಯಕಿ ಹೇಳಿದರು.

ಯೂಕ್ರೇನ್​ನಲ್ಲಿ ಅಧಿಕ ಸಾವು: ರಷ್ಯಾ ಆಕ್ರಮಣದಿಂದಾಗಿ ಯೂಕ್ರೇನ್​ನಲ್ಲಿ ಸಂಭವಿಸಿರುವ ಸಾವು ವರದಿಯಾಗಿರುವುದ ಕ್ಕಿಂತಲೂ ಹೆಚ್ಚಾಗಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಯುದ್ಧದಿಂದ ಯೂಕ್ರೇನ್​ನಲ್ಲಿ 3,381 ಜನರು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ಆದರೆ ಇನ್ನೂ ಸಾವಿರಾರು ಜನರು ಬಲಿಯಾಗಿದ್ದಾರೆ ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮೇಲ್ವಿಚಾರಣೆ ಮಿಷನ್ ಮಂಗಳವಾರ ಅಭಿಪ್ರಾಯ ಪಟ್ಟಿದೆ.

ಕುಂಟುತ್ತಿದ್ದ ಪುತಿನ್?: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ ಮಾಸ್ಕೊದ ಕೆಂಪು ಚೌಕದಲ್ಲಿ ನಡೆದ ವಿಕ್ಟರಿ ಡೇ ಕಾರ್ಯಕ್ರಮದಲ್ಲಿ ಕಾಲಿನ ಮೇಲೆ ಬಟ್ಟೆ ಹೊದ್ದುಕೊಂಡು ಕುಳಿತಿದ್ದು ಅವರ ಅನಾರೋಗ್ಯ ಕುರಿತ ಊಹಾಪೋಹಗಳಿಗೆ ಇನಷ್ಟು ರೆಕ್ಕೆ ಬರಲು ಕಾರಣವಾಗಿದೆ. ಅವರು ಕುಂಟುತ್ತಿರುವಂತೆಯೂ ಕಂಡು ಬಂದಿದ್ದಾರೆ. ಪುತಿನ್ ರ್ಪಾನ್ಸನ್ ಅಥವಾ ಕ್ಯಾನ್ಸರ್​ನಿಂದ ಬಳಲುತ್ತಿರಬಹುದು ಎಂದು ಊಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net