ವಿಧಾನಸೌಧದ ಎದುರು ಭುವನೇಶ್ವರಿ ಪ್ರತಿಮೆ?

Bhuvaneshwari
Published on

ಪಂಕಜ ಕೆ.ಎಂ. ಬೆಂಗಳೂರು

ಕರ್ನಾಟಕ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಾಡದೇವಿ ಭುವನೇಶ್ವರಿ ಪ್ರತಿಮೆಯನ್ನು ಕನ್ನಡ ಭವನದ ಆವರಣದ ಬದಲು ವಿಧಾನಸೌಧ ಎದುರು ಸ್ಥಾಪಿಸಲು ಸರ್ಕಾರ ಆಲೋಚಿಸಿದೆ.

ಪ್ರತಿಮೆ ನಿರ್ಮಾಣ ಕುರಿತು ಸರ್ಕಾರ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಕನ್ನಡ ಭವನದ ಆವರಣದಲ್ಲಿ ಸುಮಾರು 25 ಅಡಿ ಎತ್ತರದ ಕನ್ನಡಾಂಬೆಯ ಕಂಚಿನ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ ಪ್ರತಿಮೆಯನ್ನು ವಿಧಾನಸೌಧದ ಸಮೀಪ ಸ್ಥಾಪಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದು, ಅದರಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಾನಸೌಧದ ಎದುರು (ಕಬ್ಬನ್ ಉದ್ಯಾನ) ಸ್ಥಳ ಪರಿಶೀಲನೆಗೆ ಮುಂದಾಗಿದೆ.

ಕನ್ನಡ ಭವನ ಬಳಿಯ ರವೀಂದ್ರ ಕಲಾಕ್ಷೇತ್ರದ ಕಲಾವನದಲ್ಲಿ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಲಾಗಿತ್ತು. ಆದರೆ ನಗರದ ಪುರಭವನದ ಮುಂಭಾಗ ಈಗಾಗಲೇ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಇದೆ. ಅಲ್ಲದೆ ನಾಡದೇವಿ ಭುವನೇಶ್ವರಿ ಪ್ರತಿಮೆಯನ್ನು ಹೆಚ್ಚಿನ ಜನರು ನೋಡುವಂತಹ ಸ್ಥಳದಲ್ಲಿ ನಿರ್ಮಿಸಬೇಕು. ವಿಧಾನಸೌಧ, ಕಬ್ಬನ್ ಉದ್ಯಾನ ನಗರದ ಕೇಂದ್ರ ಭಾಗದಲ್ಲಿದ್ದು, ಇದನ್ನು ನೋಡಲು ದೇಶ ವಿದೇಶಗಳಿಂದ ಜನರು ಆಗಮಿಸುತ್ತಾರೆ. ಹಾಗಾಗಿ ವಿಧಾನಸೌಧದ ಎದುರಿನಲ್ಲೇ ಪ್ರತಿಮೆ ನಿರ್ಮಿಸುವುದು ಸೂಕ್ತ ಎಂದು ನಿರ್ಧರಿಸಲಾಗಿದೆ. ಸದ್ಯದಲ್ಲೇ ಯಾವ ಸ್ಥಳದಲ್ಲಿ ಸ್ಥಾಪಿಸಬೇಕು ಎನ್ನುವುದರ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪದೆಪದೆ ಸ್ಥಳಾಂತರ: ಮೊದಲ ಬಾರಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ ನಗರದ ಹೆಬ್ಬಾಳ ಕೆರೆ ಮಧ್ಯದಲ್ಲಿ ಭುವನೇಶ್ವರಿ ಪ್ರತಿಮೆ ನಿರ್ಮಿಸಲು ಘೋಷಿಸಲಾಗಿತ್ತು. ನಂತರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಬಳಿಯ ಕಲಾಗ್ರಾಮದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಈಗಿನ ಸರ್ಕಾರ ಕನ್ನಡ ಭವನದಲ್ಲಿ ನಿರ್ಮಿಸಲು ಯೋಚಿಸಿತ್ತು. ಆದರೆ ಈಗ ವಿಧಾನಸೌಧದ ಎದುರು ನಿರ್ಮಿಸಲಾಗುತ್ತಿದೆ.

ಒಂದು ವರ್ಷದಲ್ಲಿ ಪ್ರತಿಮೆ ಸ್ಥಾಪನೆ: ಒಂದು ವರ್ಷದಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡು 2024ರ ನ.1ರಂದು ಅನಾವರಣಗೊಳಿಸಬೇಕು. ಮೊದಲು 2 ಅಡಿ ಕನ್ನಡಾಂಬೆಯ ಮಾದರಿ ಪ್ರತಿಮೆ ನಿರ್ಮಿಸಬೇಕು. ನಂತರ ‘3ಡಿ’ ಮಾದರಿಯ ಪ್ರತಿಮೆ ನಿರ್ಮಿಸಬೇಕು. ಈ ಕುರಿತು ಈಗಾಗಲೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿ ಸೂಚನೆ ಸಹ ನೀಡಿದ್ದಾರೆ.

25 ಅಡಿಯ ಪ್ರತಿಮೆ: ಕಲಾವಿದ ಕೆ.ಸೋಮಶೇಖರ್ ಸಿದ್ಧಪಡಿಸಿರುವ ನಾಡದೇವಿಯ ಚಿತ್ರವನ್ನು ಅಧಿಕೃತಗೊಳಿಸುವಂತೆ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಅಧ್ಯಕ್ಷತೆಯ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದರಂತೆ ಸುಮಾರು 3ಕೋಟಿ ರೂ. ವೆಚ್ಚದಲ್ಲಿ 25ಅಡಿ ಎತ್ತರದ ನಾಡದೇವಿ ಪ್ರತಿಮೆ ನಿರ್ಮಿಸಲು ನಿರ್ಧರಿಸಲಾಗಿದೆ. ಇದರ ಜತಗೆ ಕನ್ನಡ ನಾಡಿನ ಸಾಂಸ್ಕೃತಿಕ ವೈಭವವನ್ನೂ ಪ್ರತಿಬಿಂಬಿಸುವ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net