ಪ್ರವಾಹದಿಂದ ಧುಮ್ಮಿಕ್ಕಿ ಹರಿಯುತ್ತಿದ್ದ ನದಿಯ ತೂಗು ಸೇತುವೆ ದಾಟಿದ ಭೂಪ! ವಿಡಿಯೋ ವೈರಲ್​​ | Assam

Assam
Published on

Assam: ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ, ರಾಜ್ಯದ 20 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ, 32 ಜನರು ಭೂಕುಸಿತದಿಂದ ಮೃತಪಟ್ಟಿದ್ದಾರೆ, ಏಳು ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ.

ಈ ಪ್ರವಾಹ ಮತ್ತು ಭೀಕರ ಭೂ ಕುಸಿತದ ನಡುವೆ ಉಕ್ಕಿ ಹರಿಯುತ್ತಿರುವ ನದಿಯನ್ನು ಒಬ್ಬ ವ್ಯಕ್ತಿ ಸಣ್ಣ ಟ್ರಿಕ್ ಬಳಸಿ ದಾಟುತ್ತಿರುವ ವಿಡಿಯೋ ಇದೀಗ ಸಖತ್​​ ವೈರಲ್​​ ಆಗುತ್ತಿದೆ.

ಚೀನಾ ಗಡಿಯಲ್ಲಿರುವ ಅಂಜ್ವಾ ಜಿಲ್ಲೆಯಲ್ಲಿ ಧುಮ್ಮಿಕ್ಕಿ ಹರಿಯುತ್ತಿದ್ದ ಹಳ್ಳದ ತೂಗು ಸೇತುವೆಯನ್ನು ದಾಟಲು ಹೋಗಿ ಯುವಕನೊಬ್ಬ ಪ್ರಾಣಾಪಾಯದಿಂದ ಬಚಾವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಅರುಣಾಚಲ ಸಂಸದ ಹಾಗೂ ಕೇಂದ್ರ ಸಚಿವ ಕಿರಣ್​​ ರಿಜಿಜು ಈ ವಿಡಿಯೋವನ್ನು ತಮ್ಮ Xನಲ್ಲಿ ಹಂಚಿಕೊಂಡು, "ದಯವಿಟ್ಟು ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ. ಸರ್ಕಾರ ಅಗತ್ಯ ಬೆಂಬಲವನ್ನು ನೀಡುತ್ತದೆ" ಎಂದು ಸಲಹೆ ನೀಡಿದ್ದಾರೆ.

ರಾಜ್ಯ ಮತ್ತು ನೆರೆಯ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಗ್ಗು ಪ್ರದೇಶ ಮತ್ತು ನದಿ ದಂಡೆ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರ ಪರಿಸ್ಥಿತಿ ಪ್ರವಾಹ ಮತ್ತು ಭೂಕುಸಿತಗಳಿಂದ ಇನ್ನಷ್ಟು ಹದಗೆಡುತ್ತಿರುವುದನ್ನು ತೋರಿಸಿದೆ.

ಈ ಸೇತುವೆ ಬಿದಿರು, ಹಗ್ಗ ಮತ್ತು ಮರದ ಹಲಗೆಗಳಿಂದ ಮಾಡಲ್ಪಟ್ಟಂತೆ ಕಂಡುಬರುತ್ತಿದ್ದು, ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅವುಗಳಲ್ಲಿ ಹಲವು ಕೊಚ್ಚಿ ಹೋಗಿವೆ.

ವಿಡಿಯೋದಲ್ಲಿ ಆ ವ್ಯಕ್ತಿ ಸೇತುವೆಯ ಮೇಲಿನ ಹಗ್ಗಗಳನ್ನು ಹಿಡಿದುಕೊಂಡಿದ್ದು, ಭಾರೀ ವೇಗದಲ್ಲಿ ಅವನ ಕೆಳಗೆ ನೀರು ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲಿಯೂ ಆತ ಕೊಚ್ಚಿ ಹೋಗುವ ರೀತಿ ಕಂಡುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net