ಭೇದಿಗೂ ಕಾಲಗಳಿಗೂ ಬಲವಾದ ನಂಟು

ol
Published on
ಧನ್ವಂತರಿ
 ಎಣ್ಣೆಯಲ್ಲಿ ಕರಿದು ತಯಾರಿಸಿದ ಹಲವಾರು ತಿಂಡಿಗಳು ನಮ್ಮ ನಾಲಿಗೆಗೆ ರುಚಿಯಾಗಿರುತ್ತವೆ. ತುಂಬಾ ರುಚಿಕರವಾಗಿದೆಯೆಂದು ಬೇಸಿಗೆಯಲ್ಲಿ ಅಪ್ಪಿತಪ್ಪಿ ಸ್ವಲ್ಪ ಹೆಚ್ಚು ತಿಂದರೆ ಭೇದಿಯಾಗುವುದು ನಿಶ್ಚಿತ. ಅದೇ ತಿಂಡಿಯನ್ನು ಚಳಿಗಾಲದಲ್ಲಿ ಸ್ವಲ್ಪ ಹೆಚ್ಚು ತಿಂದರೂ ಹೊಟ್ಟೆ ಕೆಡುವುದಿಲ್ಲ! ತಿಂಡಿ ಒಂದೇ, ಭೇದಿಯಲ್ಲಿ ಭೇದ! ಚಳಿಗಾಲದಲ್ಲಿ ಪ್ರಬಲವಾಗಿರುವ ಹಾಗೂ ಬೇಸಿಗೆಯಲ್ಲಿ ದುರ್ಬಲವಾಗಿರುವ ಪಚನಶಕ್ತಿಯು ಒಂದೇ ಆಹಾರವಾದರೂ ವಿಭಿನ್ನ ವರ್ತನೆಗೆ ಕಾರಣವಾಗುತ್ತದೆ ಎಂದಿದೆ ಆಯುರ್ವೆದ. ಮದುವೆ ಮನೆಯಲ್ಲಿ ಊಟ ತಯಾರಿಕೆಯಲ್ಲಿ ಉಂಟಾದ ವ್ಯತ್ಯಾಸಗಳಿಂದ ಭೋಜನಗೈದ ಹಲವರಿಗೆ ವಾಂತಿಭೇದಿ ಆಗುವುದಿದೆ. ಫುಡ್ ಇನ್ಪೆಕ್ಷನ್, ಫುಡ್ ಪಾಯಿಸನ್ ಎಂಬಿತ್ಯಾದಿ. ಇಲ್ಲೂ ಅದೇ ಊಟವನ್ನು ಜೊತೆಯಲ್ಲೇ ಮಾಡಿದ ಹಲವರಿಗೆ ತೊಂದರೆಯೇ ಆಗಿರುವುದಿಲ್ಲ. ಯಾಕೆ ಹೀಗೆ ಎಂಬ ಪ್ರಶ್ನೆಗೆ ಉತ್ತರ ಮತ್ತದೇ ಜೀರ್ಣಶಕ್ತಿ! ಜಠರದ ಅಗ್ನಿಯು ಪ್ರಬಲವಾಗಿದ್ದಾಗ ಕಾಯಿಲೆಯನ್ನೇ ದಹಿಸುವ ಅಗಾಧ ಬಲ ಅದಕ್ಕಿರುತ್ತದೆ. ಮಂದಾಗ್ನಿಯು ಕಾಯಿಲೆಗಳ ಹುಟ್ಟಿಗೆ ಮೂಲಕಾರಣವಾಗುತ್ತದೆ.

ಪಚನಶಕ್ತಿಯು ದುರ್ಬಲವಾದಾಗ ಭೇದಿಗೂ ಕಾರಣವಾಗುತ್ತದೆ. ಭೇದಿಗೆ ಆಯುರ್ವೆದದಲ್ಲಿ ಅತಿಸಾರ ಎನ್ನುತ್ತೇವೆ. ಅತಿಯಾಗಿ ದ್ರವಮಲ ವಿಸರ್ಜನೆ ಆಗುವುದೇ ಅತಿಸಾರ. ಇದರಲ್ಲಿ ವಾತಜ, ಪಿತ್ತಜ, ಕಫಜ, ತ್ರಿದೋಷ, ಆಮಜ, ಭಯಜ, ಶೋಕಜ ಎಂಬ ವಿಧಗಳಿವೆ. ಬಾಯಿಯಿಂದ ಸೇವಿಸಿದ ಆಹಾರವು ಗುದದ್ವಾರದ ತನಕ ತಲುಪಲು ಪ್ರಾಕೃತ ಆಹಾರವಸ್ತು ಚಲನೆಯಲ್ಲಿ ಸಮಾನ ಹಾಗೂ ಅಪಾನ ವಾತಗಳ ಪಾತ್ರವಿದೆ. ಸೇವಿಸಲಾದ ಆಹಾರವನ್ನು ವಾತವು ಜೀರ್ಣಕ್ರಿಯೆಗೆ ಪೂರಕವಾಗಿ ಆಯಾ ಸ್ಥಳಗಳಿಗೆ ಹೊತ್ತೊಯ್ಯುತ್ತದೆ. ಜೀರ್ಣಕಾರಿ ದ್ರವಗಳ ಉತ್ಪತ್ತಿಯಲ್ಲಿ ಪಾಚಕ ಪಿತ್ತದ ಭೂಮಿಕೆಯಿದೆ. ಉಷ್ಣತೆಯು ಜೀರ್ಣಕ್ರಿಯೆಯನ್ನು ನಡೆಸಿಕೊಡುತ್ತದೆ. ಇದರೊಂದಿಗೆ ಜೀರ್ಣಾಂಗಗಳನ್ನು ಬಾಧಿಸದೆ ಸಹಜವಾದ ರೀತಿಯಲ್ಲಿ ಆಹಾರವು ಜೀರ್ಣಗೊಳ್ಳುವ ಪ್ರಕ್ರಿಯೆಗೆ ಅವಸ್ಥಾಪಾಕ ಎಂದು ಹೆಸರು. ಕ್ಲೇದಕ ಕಫವು ಸರಿಯಾಗಿ ಜೀರ್ಣಕ್ರಿಯೆ ನಡೆಯಲು ಬೇಕಾದ ದ್ರವತ್ವವನ್ನು ಒದಗಿಸುವುದರ ಮೂಲಕ ವಿಭಜಿಸಲು ನೆರವಾಗುತ್ತದೆ. ಆಹಾರದಲ್ಲಿರುವ ದ್ರವಾಂಶವು ಅಂಟುಗುಣದಿಂದ ಮೆದುಗೊಳಿಸುತ್ತದೆ. ನಿರ್ದಿಷ್ಟ ಕಾಲದೊಂದಿಗೆ ಜೀರ್ಣಗೊಂಡು ದೇಹದಿಂದ ಮಲರೂಪದಲ್ಲಿ ಹೊರಹಾಕಲು ಅಪಾನವಾತವು ಸಹಕರಿಸುತ್ತದೆ. ಇವುಗಳಲ್ಲಿ ವ್ಯತ್ಯಯವಾಗಿ ಹಳಿ ತಪ್ಪಿದಾಗ ಭೇದಿ ಉಂಟಾಗುತ್ತದೆ.

ಜೀರ್ಣಕ್ಕೆ ಕಷ್ಟಕರವಾದ, ಶುಷ್ಕ ಆಹಾರ, ಅತಿ ಬಿಸಿ, ದ್ರವಾಹಾರ, ಅತಿಯಾಗಿ ತಣ್ಣಗಿರುವ, ವಿರುದ್ಧಾಹಾರ ಸೇವನೆ, ಆಗಾಗ ಆಹಾರ ಸೇವಿಸುವುದು, ಮೊದಲು ಸೇವಿಸಿರುವ ಆಹಾರ ಜೀರ್ಣಗೊಳ್ಳದೆ ಇದ್ದಾಗ ಮತ್ತೆ ಆಹಾರ ತೆಗೆದುಕೊಳ್ಳುವುದು, ಯಾವ್ಯಾವುದೋ ಹೊತ್ತಿನಲ್ಲಿ ಊಟ, ಅತಿಯಾಗಿ ಜಿಡ್ಡಿನಿಂದ ಕೂಡಿದ, ಸರಿಯಿಲ್ಲದ, ವಿಷಮಯ ಆಹಾರ ಸ್ವೀಕಾರ, ನಾನಾ ಕಾರಣಗಳಿಂದ ಭಯಗ್ರಸ್ಥರಾಗಿರುವುದು, ಚಿಂತೆಯಿಂದ ಕೂಡಿರುವುದು, ಮಲಿನಗೊಂಡ ನೀರಿನ ಬಳಕೆ, ಮಿತಿಮೀರಿದ ಮದ್ಯಪಾನ, ಋತುಕಾಲಕ್ಕೆ ವಿರುದ್ಧವಾಗಿ ಆಹಾರ ಸೇವನೆ, ನೀರಿನಲ್ಲಿ ಈಜುವಾಗ ಮಲಮೂತ್ರಾದಿ ವೇಗಗಳನ್ನು ತಡೆಹಿಡಿಯುವುದು, ಹೊಟ್ಟೆಯ ಕ್ರಿಮಿದೋಷಗಳು - ಹೀಗೆ ಹಲವು ತಪ್ಪು ಹೆಜ್ಜೆಗಳಿಂದ ಭೇದಿ ಉಂಟಾಗುತ್ತದೆಂಬ ವಿವರಣೆ ಸುಶ್ರುತ ಸಂಹಿತೆಯಲ್ಲಿದೆ. ಭೇದಿಯು ಕಾಣಿಸಿಕೊಳ್ಳುವ ಪೂರ್ವಭಾವಿಯಾಗಿ ಹೃದಯ ಪ್ರದೇಶ, ಹೊಕ್ಕುಳ ಪ್ರದೇಶ, ಮಧ್ಯ ಹಾಗೂ ಕೆಳಹೊಟ್ಟೆ ಹಾಗೂ ಗುದದ್ವಾರ ಮುಂತಾದ ಭಾಗದಲ್ಲಿ ನೋವು, ಮೈಕೈ ನೋವು, ಹೊಟ್ಟೆಯುಬ್ಬರ,ತಿಂದಿರುವ ಆಹಾರ ಅತಿಬೇಗನೆ ಜೀರ್ಣಗೊಳ್ಳುವುದು ಇವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುವುದು.

ವಾತಜ ಅತಿಸಾರದಲ್ಲಿ ಕೆಂಪು ಮಿಶ್ರಿತ ಬಣ್ಣ, ನೊರೆಯುಕ್ತ, ಸರಿಯಾಗಿ ಜೀರ್ಣಗೊಳ್ಳದೆ, ನೋವು ಹಾಗೂ ಶಬ್ದದಿಂದ ಕೂಡಿ ಬಹಳ ಬಾರಿ ಅಲ್ಪ ಪ್ರಮಾಣದ ಒಣ ಮಲ ವಿಸರ್ಜನೆ ಆಗುತ್ತದೆ. ಪಿತ್ತಜ ಭೇದಿಯಲ್ಲಿ ಹಳದಿ, ನೀಲ ಅಥವಾ ಕೆಂಪು ಮಿಶ್ರಿತ ಬಣ್ಣದ, ಉರಿಯಿಂದ ಕೂಡಿದ, ಬಾಯಾರಿಕೆ, ಎಚ್ಚರ ತಪ್ಪುವಂತಹ ಲಕ್ಷಣಗಳಿರುತ್ತವೆ. ಕಫಜ ಭೇದಿಯಲ್ಲಿ ಮಲವು ಬೆಳ್ಳಗಿದ್ದು, ಲೋಳೆಯೊಂದಿಗೆ, ಅಜೀರ್ಣದ ವಾಸನೆಯಿಂದ ಕೂಡಿರುತ್ತದೆ. ರೋಮಗಳು ಎದ್ದಿರುತ್ತವೆ. ತ್ರಿದೋಷದಿಂದಾಗುವ ಭೇದಿಯಲ್ಲಿ ಎಲ್ಲಾ ಲಕ್ಷಣಗಳು ಮಿಳಿತಗೊಂಡಿರುತ್ತವೆ. ಕಣ್ಣೀರು, ಗಂಟಲಿನ ಸ್ರಾವಗಳು ಜಠರದ ಅಗ್ನಿ ಹಾಗೂ ರಕ್ತವನ್ನು ದೂಷಿಸಿ ಮಲವು ಗುಲಗುಂಜಿಯ ಬಣ್ಣದಿಂದ ಅಥವಾ ರಕ್ತವಿಲ್ಲದೆ, ದುರ್ವಾಸನೆ ಇದ್ದು ಅಥವಾ ಇಲ್ಲದೆ, ನೋವಿನಿಂದ ಕೂಡಿ ಕಷ್ಟದಿಂದ ಭೇದಿಯಾಗುವುದು ಶೋಕಾತಿಸಾರ. ಆಹಾರವು ಸರಿಯಾಗಿ ಜೀರ್ಣವಾಗದೆ ಸೇವಿಸಿದ ಆಹಾರದ ವಿವಿಧ ಬಣ್ಣ ಹಾಗೂ ದುರ್ನಾತದಿಂದಿದ್ದು ನೋವಿನಿಂದ ಆಗುವ ಭೇದಿಯೇ ಆಮಾತಿಸಾರ. ಅಂಟುಗುಣದಿಂದ ಕೂಡಿದ್ದು ಮಲವು ನೀರಿನಲ್ಲಿ ಮುಳುಗುತ್ತದೆ. ಭಯವಿದ್ದಾಗಲೂ ಹಲವಾರು ಬಾರಿ ಭೇದಿಯಾಗುವುದಿದ್ದು ಶೋಕಾತಿಸಾರವನ್ನು ಹೋಲುತ್ತದೆ. ಬೇರೆ ರೋಗಗಳ ಲಕ್ಷಣವಾಗಿ ಕೂಡಾ ಭೇದಿಯು ಕಾಣಿಸಿಕೊಳ್ಳುವುದಿದೆ. ಅತಿಸಾರಗಳ ಪರಿಹಾರಗಳನ್ನು ಅರಿಯುವುದು ಅವಶ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net