ಕೆರಗೋಡು ಧ್ವಜ ವಿವಾದ: ಶಾಸಕರು ಧ್ವಜಾರೋಹಣ ಮಾಡದಂತೆ ಗ್ರಾಮಸ್ಥರ ಆಗ್ರಹ

meting
Published on

ಮಂಡ್ಯ:  ಹನುಮ ಧ್ವಜ ವಿವಾದದಿಂದಾಗಿ ಗಮನಸೆಳೆದಿದ್ದ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮಾಡುವವರು ಯಾರು ಎನ್ನುವ ತೀರ್ಮಾನ ಮಾಡುವ ಸಂಬಂಧ ಬುಧವಾರ ಸಭೆ ಆಯೋಜಿಸಲಾಗಿತ್ತು.

ಅದರಂತೆ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಧ್ವಜಾರೋಹಣ ಮಾಡಿದರೆ ವಿರೋಧ ಮಾಡಲಾಗುವುದು. ಅಧಿಕಾರಿಗಳು ಅಥವಾ ರೈತರಿಂದ ಮಾಡಿಸಿದರೆ ಯಾವುದೇ ತಕರಾರಿಲ್ಲ ಎನ್ನುವುದು ಗ್ರಾಮಸ್ಥರು ಸ್ಪಷ್ಟಪಡಿಸಿದರು. ಈ ಹಿನ್ನಲೆಯಲ್ಲಿ ಸುಮಾರು ಗಂಟೆ ಚರ್ಚಿಸಿ ಅಂತಿಮವಾಗಿ ಉಪವಿಭಾಗಾಧಿಕಾರಿ ಶಿವಮೂರ್ತಿ ಅವರು ಧ್ವಜಾರೋಹಣ ಮಾಡುವುದಕ್ಕೆ ಒಪ್ಪಿಗೆ ನೀಡಲಾಯಿತು.

ಮನವಿ ಸಲ್ಲಿಸಿದ್ದ ಗ್ರಾಮಸ್ಥರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜಾರೋಹಣಕ್ಕೆ ಅನುಮತಿ ಕೋರಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಉಪವಿಭಾಗಾಧಿಕಾರಿ ಶಿವಮೂರ್ತಿ ನೇತೃತ್ವದಲ್ಲಿ ಗ್ರಾಮದಲ್ಲಿಯೇ ಸಭೆ ಆಯೋಜಿಸಿ ಗ್ರಾಮಸ್ಥರೊಂದಿಗೆ ಚರ್ಚೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಗ್ರಾಮಸ್ಥರು, ಸಾರ್ವಜನಿಕರು ಹಣ ಸಂಗ್ರಹಿಸಿ 108 ಅಡಿ ಎತ್ತರದ ಧ್ವಜಸ್ತಂಭ ಮಾಡಿಸಿ ಹನುಮ ಧ್ವಜ ಹಾರಿಸಲಾಗಿತ್ತು. ಆದರೆ ರಾಜಕೀಯ ಕಾರಣಕ್ಕೆ ಹನುಮ ಧ್ವಜ ತೆರವು ಮಾಡಲಾಗಿದೆ. ಆದ್ದರಿಂದ ಗ್ರಾಮಕ್ಕೆ ಬಂದು ಶಾಸಕರು ಧ್ವಜಾರೋಹಣ ಮಾಡಲು ವಿರೋಧವಿದೆ. ಒಂದು ವೇಳೆ ಶಾಸಕರು ಭಾಗವಹಿಸಿದರೆ ಮತ್ತೆ ಶಾಂತಿ ಕದಲುವ ಪರಿಸ್ಥಿತಿ ಬರಲಿದೆ. ಅಧಿಕಾರಿಗಳು ಧ್ವಜಾರೋಹಣ ಮಾಡಿದರೆ ನಮ್ಮ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ ಎಸಿ ಧ್ವಜಾರೋಹಣ ಮಾಡಲು ಒಪ್ಪಿಗೆ ನೀಡಲಾಯಿತು.

ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಜಿಪಂ ಉಪ ಕಾರ್ಯದರ್ಶಿ ಬಾಬು, ತಾಪಂ ಇಒ ವೀಣಾ, ಡಿವೈಎಸ್ಪಿ ರಮೇಶ್, ಗ್ರಾಪಂ ಅಧ್ಯಕ್ಷ ನವೀನ್‌ಕುಮಾರ್, ಸದಸ್ಯರಾದ ಮಹೇಶ್, ಯೋಗೇಶ್, ವಿರೂಪಾಕ್ಷ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net