ಬಿಕಾಂ ಓದುವಾಗಲೇ ‘ಅಪ್ರೆಂಟಿಸ್‌ಶಿಪ್’: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

skill MOU
Published on

ಬೆಂಗಳೂರು ಬಿ.ಕಾಂ ಪದವಿ ವ್ಯಾಸಂಗ ಮಾಡುವ ವೇಳೆಯಲ್ಲಿಯೇ ವಿದ್ಯಾರ್ಥಿಗಳಿಗೆ ‘ಅಪ್ರೆಂಟಿಸ್‌ಶಿಪ್’ ಒದಗಿಸುವ ಉದ್ದೇಶದಿಂದ ರಾಜ್ಯದ 45 ಕಾಲೇಜುಗಳಲ್ಲಿ 2024-25ನೇ ಸಾಲಿನಲ್ಲಿ ನಾಲ್ಕು ಕೋರ್ಸ್‌ಗಳನ್ನು ಆರಂಭಿಲಾಗಿದೆ.

ಈ ಸಂಬಂಧ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಕ್ರಿಸ್ಪ್ ಆಡಳಿತಾಧಿಕಾರಿ ವಿಎಲ್‌ವಿಎಸ್‌ಎಸ್ ರಾವ್ ಸಹಿ ಮಾಡಿದರು.

ಸರ್ಕಾರಿ ಕಾಲೇಜುಗಳಲ್ಲಿ ‘ಶಿಷ್ಯವೃತ್ತಿ ಆಧಾರಿತ ಪದವಿ ಕೋರ್ಸ್’ ಆರಂಭಿಸಲು ಉನ್ನತ ಶಿಕ್ಷಣ ಇಲಾಖೆಯು, ಕೇಂದ್ರ ಯೋಜನೆ ಮತ್ತು ನೀತಿಗಳ ಸಂಶೋಧನಾ ಕೇಂದ್ರ(ಕ್ರಿಸ್ಪ್) ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ 21 ಜಿಲ್ಲೆಗಳ 45 ಕಾಲೇಜುಗಳಲ್ಲಿ 1,336 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಒಡಂಬಡಿಕೆಗೆ ಸಹಿಯಾದ ಬಳಿಕ ಮಾತನಾಡಿದ ಸಚಿವ ಡಾ. ಸುಧಾಕರ್, ಬಿ.ಕಾಂ. ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಮತ್ತು ೈನಾನ್ಸ್, ಇ- ಕಾಮರ್ಸ್, ಲಾಜಿಸ್ಟಿಕ್ಸ್ ಮತ್ತು ರೀಟೇಲ್ ಕೋರ್ಸ್‌ಗಳನ್ನು ಈ ವರ್ಷದಿಂದ ಆರಂಭಿಸಲಾಗಿದೆ. 3 ವರ್ಷದ ಪದವಿಯಲ್ಲಿ ಮೊದಲ ನಾಲ್ಕು ಸೆಮಿಸ್ಟರ್‌ಗಳಲ್ಲಿ ವಿದ್ಯಾರ್ಥಿಗಳು ಆಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾರೆ. 5 ಮತ್ತು 6ನೇ ಸೆಮಿಸ್ಟರ್‌ಗಳಲ್ಲಿ ಸಂಬಂಧಪಟ್ಟ ‘ಸೆಕ್ಟರ್ ಸ್ಕಿಲ್ ಕೌನ್ಸೆಲ್’ ವತಿಯಿಂದ ನಿಗದಿಯಾದ ಕೈಗಾರಿಕೆ, ಸಂಸ್ಥೆಗಳಲ್ಲಿ ಈ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.

ಹಾಲಿ ಇರುವ ಕೋರ್ಸ್‌ಗಿಂತ ಹೊಸ ಕೋರ್ಸ್‌ಗಳು ವಿಭಿನ್ನವಾಗಿದೆ. ಇದರ ಬೋಧನೆಗಾಗಿ ಪ್ರಾಧ್ಯಾಪಕರಿಗೆ ಸಹ ತರಬೇತಿ ನೀಡಲಾಗುತ್ತದೆ. ಅಪ್ರೆಂಟಿಸ್‌ಶಿಪ್‌ಗಾಗಿ ಕೈಗಾರಿಕೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಕನಿಷ್ಠ 8 ಸಾವಿರ ರೂ.ಗಳಿಂದ ಗರಿಷ್ಠ 20 ಸಾವಿರ ರೂ.ಗಳವರೆಗೆ ಶಿಷ್ಯವೇತನ ಪಡೆಯಲಿದ್ದಾರೆ ಎಂದು ತಿಳಿಸಿದರು.

ಕ್ರಿಸ್ಪ್ ಆಡಳಿತಾಧಿಕಾರಿ ವಿಎಲ್‌ವಿಎಸ್‌ಎಸ್ ರಾವ್ ಮಾತನಾಡಿ, ಇದು ಉತ್ತಮವಾದ ಕೋರ್ಸ್‌ಗಳಾಗಿವೆ. ಇಂದು ಸಾಮಾನ್ಯ ಪದವಿ ಕೋರ್ಸ್ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಈ ರೀತಿಯ ಕೋರ್ಸ್‌ಗಳು ತುಂಬಾ ಉಪಯೋಗಕ್ಕೆ ಬರುತ್ತವೆ. ಅಪ್ರೆಂಟಿಸ್‌ಶಿಪ್ ಬಳಿಕ ವಿದ್ಯಾರ್ಥಿಗಳು ಅದೇ ಕಂಪನಿಯಲ್ಲಿ ಉದ್ಯೋಗವಕಾಶ ಸಹ ದೊರೆಯಲಿದೆ ಎಂದರು.

ಈ ವೇಳೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶ್ರೀಕರ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ. ಜಗದೀಶ್, ನಿರ್ದೇಶಕಿ ಶೋಭಾ ಹಾಗೂ ವಿವಿಧ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net