ವಿಭಿನ್ನ ಶಿಕ್ಷಣ ಸ್ಕೌಟ್ಸ್ ಗೈಡ್ಸ್‌ನ ಉದ್ದೇಶ

KDR PARISARA
ಕಡೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪರಿಸರ ಅಧ್ಯಯನ ಶಿಬಿರವನ್ನು ಎ.ಎನ್.ಮಹೇಶ್ ಉದ್ಘಾಟಿಸಿದರು. ಡಾ. ರಾಜಣ್ಣ, ಸಂಧ್ಯಾರಾಣಿ, ಮಂಜುನಾಥ್, ತಿಮ್ಮರಾಜು ಇದ್ದರು.
Published on

ಕಡೂರು: ಪಠ್ಯೇತರ ಚಟುವಟಿಕೆಗಳಿಗಿಂತ ಭಿನ್ನವಾದ ಶಿಕ್ಷಣ ನೀಡುವುದೇ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯ ಉದ್ದೇಶ ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ತಾಲೂಕು ಉಪಾಧ್ಯಕ್ಷ ಎ.ಎನ್.ಮಹೇಶ್ ತಿಳಿಸಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪರಿಸರ ಜಾಗೃತಿ ಮತ್ತು ಪ್ರಕೃತಿ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸ್ಕೌಟ್ಸ್ ಗೈಡ್ಸ್ ಒಂದು ಬೃಹತ್ ಚಳವಳಿಯಾಗಿದೆ. 1907ರಲ್ಲಿ ಲಂಡನ್‌ನಲ್ಲಿ ಓರ್ವ ಸೈನಿಕ ಸ್ಥಾಪಿಸಿದ ಈ ಆಂದೋಲನ 256 ದೇಶಗಳಲ್ಲಿ 50 ಮಿಲಿಯನ್ ಜನರು ಚಳವಳಿಯಲ್ಲಿ ಭಾಗವಹಿಸಿದ್ದಾರೆ. ಪ್ರಪಂಚದಲ್ಲಿ ಅತಿ ದೊಡ್ಡ ಯುವ ಸಂಘಟನೆಯಾಗಿ ಹೊರಹೊಮ್ಮಿದೆ. ಪರಿಸರದಲ್ಲಿ ಅಸಮತೋಲನ ಕಂಡುಬಂದರೆ ಮನುಷ್ಯ ಸೇರಿದಂತೆ ಪ್ರಾಣಿ, ಪಕ್ಷಿಗಳ ಜೀವನ ನಶಿಸುವುದರಲ್ಲಿ ಸಂಶಯವಿಲ್ಲ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಇಂತಹ ಚಳವಳಿಗೆ ಸೇರುವುದರಿಂದ ಸಾಮಾಜಿಕ ಕಾಳಜಿ, ಪರಿಸರ ಕಾಪಾಡುವುದು, ಶಿಸ್ತು, ಸಂಯಮಗಳನ್ನು ಕಲಿಯಲು ಸಾಧ್ಯ. ಸ್ವಚ್ಛ ಪರಿಸರ ನಿರ್ಮಾಣಕ್ಕೆ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ. ಕೆ.ಎ.ರಾಜಣ್ಣ ಮಾತನಾಡಿ, ಪರಿಸರ ಜಾಗೃತಿ ಅಧ್ಯಯನ ಶಿಬಿರವನ್ನು ಸ್ಕೌಟ್ಸ್ ಗೈಡ್ಸ್ ಸಹಕಾರದಿಂದ ಕೆಮ್ಮಣ್ಣುಗುಂಡಿಯಲ್ಲಿ ಆಯೋಜಿಸಲಾಗಿದೆ. ಇದು ಪ್ರವಾಸ ಅಲ್ಲ, ಪರಿಸರ ಅಧ್ಯಯನ ಶಿಬಿರ ಎಂಬುದನ್ನು ಅರಿತಿರಬೇಕು. ಲಿಂಗದಹಳ್ಳಿಯಲ್ಲಿ ಪರಿಸರ ಜಾಥಾ ನಡೆಸಿ ಮತ್ತೊಂದು ಗ್ರಾಮದಲ್ಲಿ ಸಸಿಗಳನ್ನು ನಡೆಸಲಾಗುವುದು. ಪರಿಸರದ ಬಗ್ಗೆ ಅಧ್ಯಯನ, ಸ್ವಚ್ಛತಾ ಕಾರ್ಯಕ್ರಮಗಳು ಆಯೋಜಿಸಲಾಗುವುದು ಎಂದರು.
ಭಾರತ್ ಸ್ಕೌಟ್ಸ್ ಗೈಡ್ಸ್‌ನ ಜಿಲ್ಲಾ ತರಬೇತಿ ಆಯುಕ್ತೆ ಸಿ.ಸಂಧ್ಯಾರಾಣಿ, ಸಮಾಜಶಾಸ ಮುಖ್ಯಸ್ಥ ಎಸ್.ಬಿ.ಮಂಜುನಾಥ್, ಭೌತಶಾಸ್ತ್ರದ ಮುಖ್ಯಸ್ಥೆ ಬಿ.ಹಮೀದಾ ಬಾನು ಬೇಗಂ ಪರಿಸರ ಅಧ್ಯಯನ ಶಿಬಿರದ ಮಾಹಿತಿ ನೀಡಿದರು. ಕಾಲೇಜಿನ ರೋವರ್ಸ್ ಸ್ಕೌಟ್ಸ್ ಲೀಡರ್ ಜಿ.ತಿಮ್ಮರಾಜು ಮತ್ತು ಎಚ್.ಆರ್.ಜ್ಯೋತಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net