ಭಾರಂಗಿ ಹೋಬಳಿಗೆ ಸಂಚಾರ ಆರೋಗ್ಯ ಘಟಕ

kgl (2)
ಕಾರ್ಗಲ್ ಸಮೀಪದ ಭಾನುಕುಳಿ ಗ್ರಾಪಂನಲ್ಲಿ ಏರ್ಪಡಿಸಿದ್ದ ಮಂಗನ ಕಾಯಿಲೆ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ಪ್ರಭಾವತಿ ಚಂದ್ರಕಾಂತ್, ಎಂ.ಪಿ.ಲೋಕರಾಜ್, ವಿದ್ಯಾ, ಯಮುನಾ ಇತರರಿದ್ದರು.
Published on

ಕಾರ್ಗಲ್: ಭಾರಂಗಿ ಹೋಬಳಿ ವ್ಯಾಪ್ತಿಯು ಮಂಗನ ಕಾಯಿಲೆ ಬಾಧಿತ ಪ್ರದೇಶ. ವೈದ್ಯರ ಸೇವೆ ಸೇರಿ ಅಗತ್ಯ ಎಲ್ಲ ನೆರವು ನೀಡಲು ಸರ್ಕಾರ ಸಿದ್ಧವಿದೆ. ಈ ಭಾಗದ ಕೃಷಿಕರು, ರೈತರು ಯಾವ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಭಾನುಕುಳಿ ಗ್ರಾಪಂನಲ್ಲಿ ಮಂಗಳವಾರ ಏರ್ಪಡಿಸಿದ್ದ ಮಂಗನ ಕಾಯಿಲೆ ನಿಯಂತ್ರಣಕ್ಕೆ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳ ಕುರಿತ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿದರು.

ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶೀಘ್ರವೇ ಕಾಯಂ ವೈದ್ಯರನ್ನು ನಿಯೋಜಿಸುವ ಜತೆಗೆ ತಾಲೂಕಿಗೆ ಹೊಸದಾಗಿ ಬರಲಿರುವ ಸಂಚಾರ ಆರೋಗ್ಯ ಘಟಕವನ್ನು (ಮೊಬೈಲ್ ಹೆಲ್ತ್ ಯೂನಿಟ್) ಭಾರಂಗಿ ಹೋಬಳಿಯ ಜನತೆಯ ಸೇವೆಗೆ ನೀಡಲಾಗುವುದು. ಮಂಗನ ಕಾಯಿಲೆ ಬಗ್ಗೆ ಭಯ ಬೇಡ, ಜಾಗರೂಕತೆ ಇರಲಿ ಎಂದು ತಿಳಿಸಿದರು.

ತಾಲೂಕಿಗೆ ನೂತನ ಸಂಚಾರ ಆರೋಗ್ಯ ಘಟಕದಲ್ಲಿ ಓರ್ವ ವೈದ್ಯ ಹಾಗೂ ಸ್ಟಾಫ್ ನರ್ಸ್ ಇರಲಿದ್ದಾರೆ. ಕಾರ್ಗಲ್‌ನಿಂದ ನಿತ್ಯವೂ ಭಾರಂಗಿ ಹೋಬಳಿಯ ಗ್ರಾಮೀಣ ಭಾಗದ ಆರೋಗ್ಯ ಸೇವೆ ನೀಡುವುದಕ್ಕಾಗಿ ನಿಯೋಜಿಸಲಾಗುವುದು. ಇದು ತುರ್ತು ಸಂದರ್ಭವನ್ನು ಎದುರಿಸಲು ಇದು ಸಹಾಯಕವಾಗಲಿದೆ ಎಂದರು.

ಕೆಎ್ಡಿಯಿಂದ ಈ ಹಿಂದೆ ಅರಳಗೋಡು ಭಾಗದಲ್ಲಿ 22 ಜನರನ್ನು ಕಳೆದುಕೊಂಡಿದ್ದೇವೆ. ಇದೀಗ ಉಷ್ಣಾಂಶ ದಿನೇದಿನೆ ಅಧಿಕವಾಗುತ್ತಿದೆ. ಇದರಿಂದ ಮಂಗನ ಕಾಯಿಲೆ ಸೋಂಕು ವೇಗವಾಗಿ ಹರಡುತ್ತದೆ. ಜನರು ಕಾಡಿಗೆ ತೆರಳದಂತೆ ಜಾಗರೂಕತೆಯಿಂದ ಇರಬೇಕು. ಅಗತ್ಯ ಸಂದರ್ಭದಲ್ಲಿ ಡಿಎಂಪಿ ತೈಲ ಲೇಪಿಸಿಕೊಂಡು ಹೋಗಬೇಕು. ಈ ಸೋಂಕಿಗೆ ಔಷಧ ಇದುವರೆಗೂ ಕಂಡುಹಿಡಿದಿಲ್ಲ. ಆದ್ದರಿಂದ ಹುಷಾರಾಗಿರಿ ಎಂದು ತಿಳಿಸಿದರು.

2026ಕ್ಕೆ ಔಷಧ ಸಿಗುವ ನಿರೀಕ್ಷೆ: ಮಲೆನಾಡು ಭಾಗದಲ್ಲಿ ಹೆಚ್ಚು ಕಾಡುತ್ತಿರುವ ಮಂಗನಕಾಯಿಲೆ ನಿಯಂತ್ರಣಕ್ಕೆ ಸರ್ಕಾರ ವಿಶೇಷ ಗಮನ ನೀಡಿದೆ. ಕೆಎ್ಡಿ ಬಾಧಿತರಿಗೆ ಚಿಕಿತ್ಸೆ ನೀಡಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಡಿ ನೋಂದಣಿ ಮಾಡಿಕೊಂಡಿರುವ ಆಸ್ಪತ್ರೆಗಳಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಸಂಬಂಧಿಸಿದ ಎಲ್ಲ ಕುಟುಂಬಗಳಿಗೂ ಉಚಿತ ಚಿಕಿತ್ಸೆ ನೀಡಲು ಯೋಜನೆ ವಿಸ್ತರಿಸಲಾಗಿದೆ ಎಂದು ಗೋಪಾಲಕೃಷ್ಣ ಬೇಳೂರು ಹೇಳಿದರು. ಮಣಿಪಾಲ್ ಸೇರಿ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲೂ ಕೆಎ್ಡಿಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು. ಕಾಯಿಲೆಗೆ ಔಷಧ ಕಂಡುಹಿಡಿಯಲು ಹೈದರಾಬಾದ್‌ನ ಸಂಸ್ಥೆ ಜತೆಗೆ ಮಾತುಕತೆ ನಡೆಸಿದೆ. ಅದು 2026ಕ್ಕೆ ನಮ್ಮ ಕೈಸೇರಲಿದೆ ಎಂದರು.

ಡಿಎಚ್‌ಒ ಕೆ.ಎಸ್.ನಟರಾಜ್, ಟಿಎಚ್‌ಒ ಡಾ. ಸುರೇಶ್, ಶಿವಮೊಗ್ಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜ್ಞಾನಾನಂದ, ಪ್ರಯೋಗಾಲಯ ವೈದ್ಯಾಧಿಕಾರಿ ಹರ್ಷವರ್ಧನ್, ಕೆಡಿಪಿ ಸದಸ್ಯೆ ಪ್ರಭಾವತಿ ಚಂದ್ರಕಾಂತ್, ಗ್ಯಾರಂಟಿ ಯೋಜನೆ ಸದಸ್ಯ ಎಂ.ಪಿ.ಲೋಕರಾಜ್, ಭಾನುಕುಳಿ ಗ್ರಾಪಂ ಅಧ್ಯಕ್ಷೆ ವಿದ್ಯಾ, ಉಪಾಧ್ಯಕ್ಷೆ ಯಮುನಾ, ಪಿಡಿಒ ಮುಕ್ತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net