ಭಕ್ತಿಯೆಂದರೆ ನೀರು ತುಂಬಿದ ಮಡಕೆ ನೀರಿನಲ್ಲಿಟ್ಟ ಹಾಗಿರಬೇಕು

swami japananda
Published on

| ಸ್ವಾಮಿ ಜಪಾನಂದ
ಧ್ಯಾನದ ಸಮಯದಲ್ಲಿ ಮಾತ್ರ ದೇವರ ಆಲೋಚನೆ ಮಾಡಿ ಉಳಿದ ಸಮಯದಲ್ಲಿ ಅವನನ್ನು ಮರೆಯ ಬಾರದು ಎಂಬ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಉಪದೇಶದ ಗೂಢಾರ್ಥ ಭಗವನ್ನಾಮ ಸ್ಮರಣೆ ನಿರಂತರವಾಗಿ ನಡೆಯುತ್ತಿರಬೇಕು ಎಂಬುದೇ ಆಗಿದೆ. ಇದು ಹೇಗೆ ಸಾಧ್ಯ? ಮನಸ್ಸು ಏಕಾಗ್ರತೆಗೆ ಅಂತಃಸ್ಪುರಣವಾದೊಡೆ ಈ ಮಹತ್ತರವಾದ ಸ್ತರವನ್ನು ಯಾರು ಬೇಕಾದರೂ ತಲುಪಬಹುದು. ಹಾಗಾದರೆ ನಿರಂತರ ಮನಸ್ಸು ಚಂಚಲವಾಗಿರುವಾಗ ಪ್ರಾಪಂಚಿಕ ಕೆಲಸ ಕಾರ್ಯಗಳ ಮಧ್ಯೆಯೂ ಭಗವನ್ನಾಮ ಸ್ಮರಣೆ ನಡೆಯುತ್ತಿರಬೇಕು ಎಂದರೆ ಸಾಧ್ಯವೇ? ಎಂಬ ಸಂದೇಹ ಸಹಜ. ಅದಕ್ಕೆ ರಾಮಕೃಷ್ಣರು ಮತ್ತೊಂದು ಸರಳವಾದ, ವೈಜ್ಞಾನಿಕವಾದ ಹಾಗೂ ಸರ್ವರೂ ಅರ್ಥೈಸಿಕೊಳ್ಳುವಂತಹ ಉದಾಹರಣೆಯನ್ನು ನೀಡಿದ್ದಾರೆ. ಆ ಮೂಲಕ ಸಾಧಕರಿಗೆ ಅರಿವಾಗುವಂತೆ ತಿಳಿಸುತ್ತಾರೆ. ಅದೇನೆಂದರೆ:

ಒಂದು ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿ ಗೂಡಿನಲ್ಲಿಟ್ಟರೆ ಕೆಲವು ದಿನಗಳ ಬಳಿಕ ನೀರೆಲ್ಲಾ ಆವಿಯಾಗಿ ಹೋಗುವುದು. ಆದರೆ ನೀರುತುಂಬಿದ ಮಡಿಕೆಯನ್ನು ನೀರಿನಲ್ಲಿಯೇ ಇಟ್ಟರೆ ನೀರಿನಲ್ಲಿರುವ ತನಕವೂ ಸದಾ ಭರ್ತಿಯಾಗಿರುತ್ತದೆ. ನಿಮ್ಮ ಭಕ್ತಿಯೂ ಕೂಡ ಇದರಂತೆಯೇ. ಕೆಲವು ಕಾಲ ದೇವರನ್ನು ಹೃನ್ಮನದಲ್ಲಿ ಪ್ರೀತಿಯಿಂದ, ಭಕ್ತಿಯಿಂದ ಅರ್ಚಿಸಿ ನಂತರ ಕ್ರಮೇಣ ಮರೆತು ಇತರ ಪ್ರಾಪಂಚಿಕ ಕೆಲಸಗಳಲ್ಲಿ ನಿರತನಾದರೆ, ಇದ್ದ ಭಕ್ತಿ, ಭಗವತ್ಪ್ರೀತಿ ಮಾಯವಾಗುವುದನ್ನು ನೀನು ಕಾಣಬಹುದು. ಆದರೆ ಸದಾ ಭಕ್ತಿಯಲ್ಲಿಯೇ ಮನಸ್ಸನ್ನು ಮುಳುಗಿಸಿ ದಲ್ಲಿ ಯಾವಾಗಲೂ ನಿನ್ನ ಹೃದಯ ಭಕ್ತಿಯಿಂದ ತುಂಬಿರುವುದು. ಎಂತಹ ಸರಳ ಹಾಗೂ ಸರ್ವರಿಗೂ ಅನ್ವಯಿ ಸುವ ಉಪದೇಶಾಮೃತ ಇದು. ನಿಜ, ಕೆಲಸಕಾರ್ಯಗಳ ಒತ್ತಡದಿಂದ ಹೃದಯಾಂತರಾಳ ಬರಿದಾ ಗುವುದು ಸಹಜ. ಆದರೆ ಅದೇ ಹೃದಯಾಂತರಾಳ ಅಹರ್ನಿಶಿ ಭಗವನ್ನಾಮ ಸ್ಮರಣೆಯೊಂದಿಗೆ ಕೆಲಸ, ಕರ್ತವ್ಯಗಳಲ್ಲಿ ನಿರತನಾದಾಗ ಹಾಗಾಗುವುದಿಲ್ಲ. ಹೇಗೆ ನೀರಿನಲ್ಲಿ ಮುಳುಗಿದ ಗಡಿಗೆ ಆವಿಯಾಗದೆ, ತುಂಬಿರುತ್ತದೆಯೋ ಅದೇ ತೆರನಾಗಿ ಮನಸ್ಸು, ಹೃದಯ ನಾಮಸ್ಮರಣೆಯ ಅಮೃತದಿಂದ ತುಂಬಿರುತ್ತದೆ ಹಾಗೂ ಇತರ ಕೆಲಸಕಾರ್ಯಗಳಲ್ಲಿ ಮಗ್ನವಾದಾಗ್ಯೂ ಹೃದಯಾಂತರಾಳ ಭಕ್ತಿಯ ಬಲದಿಂದ ತುಂಬಿರುತ್ತದೆ ಎಂಬುದೇ ಈ ನುಡಿಯ ಅರ್ಥ.

ಹಾಗಾದರೆ ಬನ್ನಿ, ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಬೋಧಿಸಿದಂತೆ ಮೊದಲು ಹೃದಯ, ಮನಸ್ಸುಗಳಲ್ಲಿ ಭಗವನ್ನಾಮ ಸ್ಮರಣೆಯನ್ನು ಏಕಪ್ರಕಾರವಾಗಿ ತುಂಬಿಕೊಳ್ಳೋಣ. ಹಾಗೆ ಮಾಡದೆ ಈ ಪ್ರಾಪಂಚಿಕ ವ್ಯವಹಾರಗಳಲ್ಲಿ ನಿರತನಾದರೆ ಹೃದಯ ಭಕ್ತಿಯ ರಸಾಮೃತವಿರದೆ ಶುಷ್ಕವಾಗುತ್ತದೆ. ಆಗ ಕೇವಲ ನೆಪಮಾತ್ರ ಜೀವನ ನಡೆಸಿದಂತಾಗಿ ಮತ್ತೆ ಮತ್ತೆ ಈ ಜಗತ್ತಿನಲ್ಲಿ ಜನ್ಮವೆತ್ತಬೇಕಾಗುತ್ತದೆ. ಈ ಕಾರಣದಿಂದ ನಿರಂತರ ನಾಮಸ್ಮರಣೆಯನ್ನು ಮಾಡುತ್ತ್ತ ಇದ್ದಲ್ಲಿ ಪವಿತ್ರ ಸ್ಮರಣೆಯಿಂದ ಹೃದಯದಲ್ಲಿ ಭಗವಂತನ ಇರುವಿಕೆಯ ಅರಿವಾಗುತ್ತದೆ. ಈ ವಿಷಯವನ್ನು ಮತ್ತೂ ಸ್ಪಷ್ಟವಾಗಿ ತಿಳಿಸಬೇಕಾದರೆ ರಾಮಕೃಷ್ಣ ಪರಮಹಂಸರ ಈ ಉದಾಹರಣೆಯನ್ನು ತಿಳಿಯಬೇಕು. ಆ ಉದಾಹರಣೆ ಹೀಗಿದೆ:

ಅರಣ್ಯದಲ್ಲಿ ಸೀತೆಯನ್ನು ಹುಡುಕಿಕೊಂಡು ಹೋಗುತ್ತಿರುವಾಗ ಅದೊಂದು ನದಿಯ ತೀರದಲ್ಲಿ ಶ್ರೀರಾಮಚಂದ್ರ ಹಾಗೂ ಲಕ್ಷ್ಮಣರು ಒಂದು ಆಶ್ಚರ್ಯಕರವಾದ ದೃಶ್ಯವನ್ನು ಕಾಣುತ್ತಾರೆ. ಅದೇನೆಂದರೆ, ಅದೊಂದು ಪಕ್ಷಿ ನೀರಿನ ಬಳಿ ಹೋಗುತ್ತದೆ, ಆದರೆ ನೀರು ಕುಡಿಯದೆ ವಾಪಸ್ಸು ತಾನಿರುವಲ್ಲಿಗೆ ಬಂದು ಕುಳಿತುಕೊಳ್ಳುತ್ತದೆ. ಈ ತೆರನಾಗಿ ಅನೇಕ ಬಾರಿ ನಡೆಯುತ್ತಿರುವಾಗ ಲಕ್ಷ್ಮಣನು ರಾಮಚಂದ್ರನಿಗೆ ಆ ಕುರಿತು ಪ್ರಶ್ನಿಸುತ್ತಾನೆ. ಅಷ್ಟೊಂದು ಬಾಯಾರಿದ್ದಾಗ್ಯೂ ಈ ಪಕ್ಷಿ ನೀರಿನ ಬಳಿ ಹೋಗಿ ಮತ್ತೆ ಬರುವುದೇಕೆ?. ರಾಮಚಂದ್ರನು ಆ ಪಕ್ಷಿಗೆ ಕರುಣೆ ತೋರಿ ಆ ಪಕ್ಷಿಯ ಮುಕ್ತಿಗೆ ದಾರಿ ಮಾಡಿ ಇದೇ ಸಂದರ್ಭದಲ್ಲಿ ಏತಕ್ಕೆ ನೀರು ಕುಡಿಯದೆ ದಡಕ್ಕೆ ಬರುತ್ತಿರುವೆ? ಎಂದು ಪ್ರಶ್ನಿಸುತ್ತಾನೆ. ಪಕ್ಷಿಯು ‘ದಯಾಮಯನಾದ ರಾಮಚಂದ್ರ, ನಿನಗೆ ತಿಳಿಯದ ವಿಚಾರವೇನಿದೆ? ನಾನು ನೀರು ಕುಡಿಯುವ ಆ ಘಳಿಗೆಗಳಲ್ಲಿಯೂ ನಿನ್ನ ಪವಿತ್ರ ನಾಮಸ್ಮರಣೆಯನ್ನು ನಿರಂತರವಾಗಿ ನೆನೆಯದೆ ಆ ಕೆಲವು ಕ್ಷಣಗಳು ಬಿಟ್ಟು ಹೋಗುತ್ತದಲ್ಲ ಎಂಬ ಚಿಂತೆಯಿಂದ ಏಕಪ್ರಕಾರವಾಗಿ ನಿನ್ನ ನಾಮಸ್ಮರಣೆಯನ್ನು ಮಾಡುತ್ತಾ ಬರುತ್ತಿದ್ದೇನೆ. ಹಾಗಾಗಿ ಅದರ ಫಲವೇ ನಿನ್ನ ಕೃಪೆ ನನಗೆ ದೊರೆತಿದ್ದು’ ಎಂದು ತಿಳಿಸಿತಂತೆ. ಅಂದರೆ ಇದರರ್ಥ: ಹೃದಯ ಬಡಿತ ನಮಗರಿವಿಲ್ಲದೆ ಹೇಗೆ ಕಾರ್ಯನಿರ್ವಹಿಸುತ್ತದೋ ಹಾಗೆಯೇ ನಮ್ಮ ಎಲ್ಲ ಕೆಲಸ ಕಾರ್ಯಗಳ ನಡುವೆಯೂ ಸಹ ಭಗವಂತನ ತದೇಕ ಸ್ಮರಣೆ ನಿರಂತರವಾಗಿ ನಡೆಯುತ್ತಿದ್ದಲ್ಲಿ ಭಗವಕೃಪೆ ಖಂಡಿತಾ ದೊರೆಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net