ನಿವೃತ್ತ ಕಾರ್ಮಿಕರಿಗೆ ನ್ಯಾಯ ಒದಗಿಸಿ

mpm workers
ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ.ಬಸವರಾಜಯ್ಯ ನೇತೃತ್ವದಲ್ಲಿ ನಿವೃತ್ತ ಕಾರ್ಮಿಕರು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಗೋವಿಂದಪ್ಪ, ಬಾಪು, ಶಿವಾನಂದ, ಸಿದ್ದಪ್ಪ, ತಿಮ್ಮಪ್ಪ, ವೆಂಕಟೇಶಮೂರ್ತಿ ಇತರರಿದ್ದರು.
Published on

ಭದ್ರಾವತಿ: ಎಂಪಿಎಂ ನಿವೃತ್ತ ಕಾರ್ಮಿಕರಿಗೆ ಭಾರತೀಯ ಜೀವವಿಮೆ ನಿವೃತ್ತಿ ಯೋಜನೆ ವಾರ್ಷಿಕ ಮೊತ್ತಕ್ಕೆ ಶೇಕಡವಾರು ಕಡಿಮೆ ಬಡ್ಡಿ ನೀಡುತ್ತಿದ್ದು ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ.ಬಸವರಾಜಯ್ಯ ನೇತೃತ್ವದಲ್ಲಿ ನಿವೃತ್ತ ಕಾರ್ಮಿಕರು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಕಾರ್ಖಾನೆ ನಿವೃತ್ತ ಕಾರ್ಮಿಕರಿಗೆ ಭಾರತೀಯ ಜೀವವಿಮೆ ನಿವೃತ್ತಿ ಯೋಜನೆ ವಾರ್ಷಿಕ ಮೊತ್ತಕ್ಕೆ ಕೇವಲ ಶೇ.5.1 ರಿಂದ ಶೇ.6.3ರಷ್ಟು ಬಡ್ಡಿ ಲೆಕ್ಕ ಹಾಕಿ ನೀಡಲಾಗುತ್ತಿದೆ. ಸರ್ಕಾರದ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಂ)ಯಲ್ಲಿ ಶೇ. 8.2ರಷ್ಟು ಬಡ್ಡಿ ಹಣ ನೀಡಲಾಗುತ್ತಿದೆ. ಇದರಿಂದ ಕಾರ್ಖಾನೆಯ 508 ನಿವೃತ್ತ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಪ್ರತಿ ತಿಂಗಳು ಸರಾಸರಿ ಕಾರ್ಮಿಕರಿಗೆ 436 ರೂ. ನಷ್ಟವಾಗುತ್ತಿದೆ. ಭಾರತೀಯ ಜೀವವಿಮೆ ನಿಗಮಕ್ಕೆ 508 ನಿವೃತ್ತ ಕಾರ್ಮಿಕರ ನಿವೃತ್ತಿ ಯೋಜನೆ ಹಣದಿಂದಲೇ 1.5 ಕೋಟಿ ರೂ. ಲಾಭವಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರ ಜೀವವಿಮೆ ನಿವೃತ್ತಿ ಯೋಜನೆ ಹಣ ಕಾರ್ಮಿಕರು ತಿಳಿಸುವ ಬ್ಯಾಂಕಿನಲ್ಲಿ ಠೇವಣಿ ಮಾಡಿಸಿಕೊಡಬೇಕು. ಈ ಮೂಲಕ ಕಾರ್ಮಿಕರಿಗೆ ಉಂಟಾಗುತ್ತಿರುವ ಅನ್ಯಾಯ ತಪ್ಪಿಸಬೇಕೆಂದು ಆಗ್ರಹಿಸಿದರು.
ಅಲ್ಲದೆ ಕಾರ್ಖಾನೆಯಲ್ಲಿ ಕನಿಷ್ಠ 20 ವರ್ಷ ಕಾಯಂ ನೌಕರರಾಗಿ ಸೇವೆ ಸಲ್ಲಿಸಿದ ಕಾರ್ಮಿಕರ ಪತ್ನಿ ಅಥವಾ ಪತಿ ಇವರಿಗೆ ಅವರ ಜೀವಿತಾವಧಿಯವರೆಗೂ ಎಂಪಿಎಂ ಮತ್ತು ವಿಐಎಸ್‌ಎಲ್ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂದು ತ್ರಿಪಕ್ಷೀಯ ಒಪ್ಪಂದವಿದ್ದರೂ ಕಂಪನಿಯು ಕಳೆದ 5 ವರ್ಷದಿಂದ ಇದನ್ನು ಪಾಲಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ನಿವೃತ್ತ ನೌಕರರಿಗೆ ಬಹಳ ತೊಂದರೆಯಾಗಿದ್ದು ತಕ್ಷಣ ಉಚಿತ ಚಿಕಿತ್ಸೆಗೆ ನಗರದ ಯಾವುದಾದರೂ ಎರಡು ಖಾಸಗಿ ಅಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಗೋವಿಂದಪ್ಪ, ಬಾಪು, ಶಿವಾನಂದ, ಸಿದ್ದಪ್ಪ, ತಿಮ್ಮಪ್ಪ, ವೆಂಕಟೇಶಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net