ಭದ್ರಾವತಿ ಗಣಪತಿ ವಿಸರ್ಜನೆ ಶಾಂತಿಯುತ

bdvt ganapa
ಭದ್ರಾವತಿ ಹಿಂದು ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ.
Published on

ಭದ್ರಾವತಿ: ನಗರದ ಹೊಸಮನೆಯಲ್ಲಿ ಹಿಂದು ಮಹಾಸಭಾ- ಹಿಂದು ರಾಷ್ಟ್ರಸೇನಾದಿಂದ ಪ್ರತಿಷ್ಠಾಪಿಸಿದ್ದ ಹಿಂದು ಮಹಾಸಭಾ ಗಣಪತಿಯನ್ನು ಭಾನುವಾರ ಅದ್ದೂರಿ ಮೆರವಣಿಗೆಯೊಂದಿಗೆ ನಗರಸಭೆ ಕಚೇರಿ ಎದುರು ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.

ಬೆಳಗ್ಗೆ 11ಕ್ಕೆ ನಗರಸಭೆ ಸದಸ್ಯ ಬಿ.ಕೆ.ಮೋಹನ್ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಹೊಸಮನೆ ಶಿವಾಜಿ ವೃತ್ತದವರೆಗೂ ತೆರಳಿ ನಂತರ ರಂಗಪ್ಪ ವೃತ್ತದ ಮೂಲಕ ಮಾಧವಾಚಾರ್ ವೃತ್ತ, ಹಾಲಪ್ಪ ವೃತ್ತ. ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮೂಲಕ ಲೋಯರ್ ಹುತ್ತಾ ಬಸ್ ನಿಲ್ದಾಣದವರೆಗೂ ತೆರಳಿತು. ನಂತರ ತರೀಕೆರೆ ರಸ್ತೆ ಗಾಂಧಿವೃತ್ತದ ಮೂಲಕ ಆಗಮಿಸಿ ನಗರಸಭೆ ಕಚೇರಿ ಎದುರು ಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೀಲುಕುದುರೆ. ವಾದ್ಯಮೇಳಗಳು ಭಾಗವಹಿಸಿ ಮೆರುಗು ನೀಡಿದವು. ಎಲ್ಲೆಲ್ಲೂ ಕೇಸರಿ ಬಾವುಟ ರಾರಾಜಿಸಿದವು. ನಿಧನರಾದ ಬಜರಂಗದಳದ ಕಾರ್ಯಕರ್ತ ಸುನಿಲ್‌ಕುಮಾರ್, ಶಿವಮೊಗ್ಗದ ಹರ್ಷ, ಖ್ಯಾತ ನಟ ಪುನೀತ್‌ರಾಜ್‌ಕುಮಾರ್ ಅವರ ಭಾವಚಿತ್ರಗಳನ್ನು ಹಿಡಿದು ಕೆಲ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವಿವಿಧ ಸಂಘ ಸಂಸ್ಥೆಗಳು ಹಾಗೂ ಪದಾಧಿಕಾರಿಗಳು , ಆಟೋರಿಕ್ಷಾ, ಟ್ಯಾಕ್ಸಿ ಚಾಲಕರು, ಖಾಸಗಿ ವಾಹನ ಮಾಲೀಕರು ಸೇಬು, ಮೂಸಂಬಿ ಹಣ್ಣಿನ ಹಾರಗಳು, ವಿವಿಧ ಬಗೆಯ ಹೂವಿನ ಹಾರಗಳನ್ನು ಗಣೇಶ ಮೂರ್ತಿಗೆ ಅರ್ಪಣೆ ಮಾಡಿದರು. ನಟ ದರ್ಶನ್ ಅಭಿಮಾನಿಗಳು ಸೇಬಿನ ಹಾರ ಹಾಕಿ ಪ್ರಾರ್ಥಿಸಿದರು. ಕೇಸರಿ ಶಾಲು ಹಾಗೂ ಟೋಪಿಗಳ ಮಾರಾಟವೂ ಇದರ ಮಧ್ಯೆ ನಡೆಯಿತು.
ಹೊಸಮನೆ ಮುಖ್ಯರಸ್ತೆಯಿಂದಲೂ ಈ ಬಾರಿ ಡಿ.ಜೆ. ಸೌಂಡ್ ಮೊಳಗಿತು. ಸೌಂಡ್ ಸಿಸ್ಟಂ ಅಬ್ಬರಕ್ಕೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು. ನಗರದ ಪ್ರಮುಖ ರಸ್ತೆಗಳು ಕೇಸರಿಮಯವಾಗಿದ್ದವು.
ಭರ್ಜರಿ ಭೋಜನ: ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ರಸ್ತೆಯುದ್ದಕ್ಕೂ ವಿವಿಧ ಸಂಘಟನೆಗಳು, ಯುವಪಡೆಗಳು ಉಪಾಹಾರ, ಊಟದ ವ್ಯವಸ್ಥೆ ಮಾಡಿದ್ದರು. ಬಿಸಿ ಬೇಳೆಬಾತ್, ಪುಲಾವ್, ಮೊಸರನ್ನ, ಚಿತ್ರಾನ್ನ, ಪುಳಿಯೊಗರೆ, ಲಾಡು, ಚಂಪಾಕಲಿ, ಬಾದಾಮಿ ಹಾಲು, ಮಜ್ಜಿಗೆ, ಅನ್ನ-ಸಾಂಬಾರ್, ಪಾನಕ ಮತ್ತಿತರ ತಿಂಡಿಗಳನ್ನು ಭಕ್ತರಿಗೆ ಉಣಬಡಿಸಿದರು. ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಮಕ್ಕಳು, ಮಹಿಳೆಯರು ಸೇರಿ ಎಲ್ಲ ನಾಗರಿಕರು ಸರದಿ ಸಾಲಿನಲ್ಲಿ ನಿಂತು ಹೊಟ್ಟೆ ತುಂಬಿಸಿಕೊಂಡರು.
ಬಿಗಿ ಬಂದೋಬಸ್ತ್: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಮೊದಲೇ ಎಚ್ಚರಿಕೆ ವಹಿಸಿದ್ದ ಪೊಲೀಸರು ಹಿಂದು ಮಹಾಸಭಾ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶಾಂತಿಯುತವಾಗಿ ಮೆರವಣಿಗೆ ನಡೆಸುವಂತೆ ಮನವಿ ಮಾಡಿದ್ದರು. ನಗರದ ಎಲ್ಲ ಅಡ್ಡರಸ್ತೆಗಳಿಗೂ ಬ್ಯಾರಿಕೇಡ್ ಅಳವಡಿಸಿ ಮುಖ್ಯರಸ್ತೆ ಮಾತ್ರ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜನಸ್ತೋಮದ ನಡುವೆ ಕೆಲ ಪೊಲೀಸರು ಸಾಮಾನ್ಯ ನಾಗರಿಕರಂತೆ ವಸ್ತ್ರ ಧರಿಸಿ ಸಾರ್ವಜನಿಕರೊಂದಿಗೆ ಬೆರೆತಿದ್ದರು. ತರೀಕೆರೆ ರಸ್ತೆ ಮಸೀದಿ ಮುಂಭಾಗದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 17 ಪೊಲೀಸ್ ಉಪಾಧೀಕ್ಷಕರು, 45 ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 65 ಪಿಎಸ್‌ಐ, 190 ಎಎಸ್‌ಐ, 1450 ಹೆಡ್‌ಕಾನ್‌ಸ್ಟೇಬಲ್ಸ್, 450 ಗೃಹರಕ್ಷಕ ದಳ ಸಿಬ್ಬಂದಿ, 1 ಆರ್‌ಎಎಫ್, 5 ಡಿಎಆರ್, ಒಂದು ಕ್ಯೂಆರ್‌ಟಿ ಹಾಗೂ 8 ಕೆಎಸ್‌ಆರ್‌ಪಿ ತುಕಡಿಗಳು ಸೇರಿ 3000ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net