Gaza peace deal | ಬೆಂಜಮಿನ್ ನೆತನ್ಯಾಹುಗೆ ಪ್ರಧಾನಿ ಮೋದಿ ಕರೆ; ಭಯೋತ್ಪಾದನೆಗೆ ಕ್ಷಮೆ ಇಲ್ಲ ಎಂದ ನಮೋ

Benjamin Netanyahu, modi
Published on

Gaza peace deal: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ 20 ಅಂಶಗಳ ಗಾಜಾ ಶಾಂತಿ ಯೋಜನೆಯಡಿ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದದ ಕುರಿತು ಚರ್ಚಿಸುತ್ತಿದ್ದ ಭದ್ರತಾ ಸಂಪುಟ ಸಭೆಯನ್ನು ಹಠಾತ್​​ ಸ್ಥಗಿತಗೊಳಿಸಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು, ಪ್ರಧಾನಿ ನರೇಂದ್ರ ಮೋದಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಅಧ್ಯಕ್ಷ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಯಡಿಯಲ್ಲಿ ಆಗಿರುವ ಪ್ರಗತಿಗೆ ಅಭಿನಂದನೆ ಸಲ್ಲಿಸಲು ನನ್ನ ಸ್ನೇಹಿತ ಪ್ರಧಾನಿ ನೆತನ್ಯಾಹು ಅವರಿಗೆ ಕರೆ ಮಾಡಿದೆ. ಗಾಜಾದ ಜನರಿಗೆ ಒತ್ತೆಯಾಳುಗಳ ಬಿಡುಗಡೆ ಮತ್ತು ಮಾನವೀಯ ನೆರವಿನ ವರ್ಧಿತ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ಭಯೋತ್ಪಾದನೆ ಯಾವುದೇ ದೇಶದಲ್ಲಿ ನಡೆದರು ಅದು ಖಂಡನೀಯ ಎಂದರು.

ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿಯೊಂದಿಗೆ ಮಾತನಾಡಿದ್ದಾರೆ. ಎಲ್ಲಾ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಂದ ಮಾಡಿಕೊಂಡಿದ್ದಕ್ಕಾಗಿ ನರೇಂದ್ರ ಮೋದಿ ಅವರು ಪ್ರಧಾನಿ ನೆತನ್ಯಾಹು ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ, ಇಸ್ರೇಲ್‌ಗೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ನೆತನ್ಯಾಹು, ಮೋದಿಗೆ ಧನ್ಯವಾದ ಅರ್ಪಿಸಿದರು ಎಂದು ಇಸ್ರೇಲ್ ಪ್ರಧಾನಿ ಕಚೇರಿಯು X ನಲ್ಲಿ ಪೋಸ್ಟ್ ಮಾಡಿದೆ. ಸಂಭಾಷಣೆಯ ಸಮಯದಲ್ಲಿ, ಗಾಜಾ ಶಾಂತಿ ಯೋಜನೆಯಡಿಯಲ್ಲಿ ಸಾಧಿಸಿದ ಪ್ರಗತಿಗೆ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿಯನ್ನು ಅಭಿನಂದಿಸಿದರು.

ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಪ್ರಧಾನಿ ಮೋದಿ, ಪ್ರಧಾನಿ ನೆತನ್ಯಾಹು ಅವರನ್ನು ಅಭಿನಂದಿಸಿದ್ದಾರೆ ಎಂದು ಇಸ್ರೆಲ್ ಪ್ರಧಾನಿ​​ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಗಾಜಾ ಶಾಂತಿ ಯೋಜನೆಯಡಿಯಲ್ಲಿ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದದ ಪರವಾಗಿ ಇಸ್ರೇಲ್ ಸರ್ಕಾರ ಮತ ಚಲಾಯಿಸಿದೆ ಎಂದು ಸಿಎನ್ಎನ್ ಗುರುವಾರ(ಅ 9) ವರದಿ ಮಾಡಿದ್ದು, ಅದರ ಪ್ರಕಾರ ಕದನ ವಿರಾಮ ತಕ್ಷಣವೇ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರವು ಈಗ ಎಲ್ಲಾ ಒತ್ತೆಯಾಳುಗಳನ್ನು, ಜೀವಂತ ಮತ್ತು ಸತ್ತವರನ್ನು ಬಿಡುಗಡೆ ಮಾಡುವ ರೂಪರೇಷೆಯನ್ನು ಅನುಮೋದಿಸಿದೆ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಕಚೇರಿ ಶುಕ್ರವಾರ ಬೆಳಿಗ್ಗೆ ಘೋಷಿಸಿತು ಎಂದು ದಿ ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಪ್ರಾಚ್ಯಕ್ಕೆ ವಿಶೇಷ ರಾಯಭಾರಿಯಾಗಿರುವ ಸ್ಟೀವ್ ವಿಟ್ಕಾಫ್ ಮತ್ತು ಅವರ ಅಳಿಯ ಜೇರೆಡ್ ಕುಶ್ನರ್ ಕೂಡ ಜೆರುಸಲೆಮ್‌ನಲ್ಲಿ ನಡೆದ ಇಸ್ರೇಲ್ ಸರ್ಕಾರದ ಸಭೆಯಲ್ಲಿ ಉಪಸ್ಥಿತರಿದ್ದರು, ಅಲ್ಲಿ ಸರ್ಕಾರವು ಅಮೆರಿಕ ಮಧ್ಯಸ್ಥಿಕೆಯ ಕದನ ವಿರಾಮ ಒಪ್ಪಂದದ ಮೇಲೆ ಮತ ಚಲಾಯಿಸಿತು.

ಟ್ರಂಪ್​ ಘೋಷಣೆ...

ಬುಧವಾರ (ಅ 8) ಅಮೆರಿಕ ಅಧ್ಯಕ್ಷ ಟ್ರಂಪ್ ಇಸ್ರೇಲ್ ಮತ್ತು ಹಮಾಸ್ ಶಾಂತಿ ಯೋಜನೆಯ ಮೊದಲ ಹಂತಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದರು, ಇದು ಗಾಜಾದಲ್ಲಿ ಯುದ್ಧವನ್ನು ಕದನ ವಿರಾಮ ಒಪ್ಪಂದದೊಂದಿಗೆ ಕೊನೆಗೊಳಿಸುತ್ತದೆ. ಇದರಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಈ ಬಳಿಕ ಉಭಯ ದೇಶಗಳ ನಡುವಿನ ಕದನ ವಿರಾಮ ಒಪ್ಪಂದದ ಮೊದಲ ಹಂತ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಘೋಷಿಸಿದ ನಂತರ, ಗುರುವಾರ ಬೆಳಿಗ್ಗೆ ಅಮೆರಿಕ ಅಧ್ಯಕ್ಷರು ಶ್ವೇತಭವನದಲ್ಲಿ ಕ್ಯಾಬಿನೆಟ್ ಸಭೆ ನಡೆಸಿದರು.

ಆ ಸಭೆಯಲ್ಲಿ, ನಾವು ಮಧ್ಯಪ್ರಾಚ್ಯದಲ್ಲಿ ಒಂದು ಮಹತ್ವದ ಪ್ರಗತಿಯನ್ನು ತಲುಪಿದ್ದೇವೆ, ಜನರು ಎರಡು ದೇಶಗಳ ಯುದ್ಧ ನಿಲ್ಲಿಸುವುದು ಅಸಾಧ್ಯ ಎನ್ನುತ್ತಿದ್ದರು, ನಾವು ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಿದ್ದೇವೆ ಮತ್ತು ಅದು ಶಾಶ್ವತ ಶಾಂತಿಯಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. ನಾವು ಉಳಿದ ಎಲ್ಲಾ ಒತ್ತೆಯಾಳುಗಳ ಸೋಮವಾರ ಅಥವಾ ಮಂಗಳವಾರ ಬಿಡುಗಡೆ ಮಾಡಬೇಕು. ಅವರನ್ನು ಕರೆದುಕೊಂಡು ಹೋಗುವುದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ನಾನು ಇಸ್ರೆಲ್​ಗೆ ಹೋಗುವ ಆಲೋಚನೆಯಲ್ಲಿದ್ದೇವೆ ಎಂದರು. ಜಾಗತಿಕ ಸಂಘರ್ಷಗಳನ್ನು ಪರಿಹರಿಸುವಲ್ಲಿ ತಮ್ಮ ಆಡಳಿತದ ಪಾತ್ರವನ್ನು ಸಮರ್ಥಿಸಿಕೊಂಡ ಟ್ರಂಪ್, ತಾವೂ ಅನೇಕ ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ನಂತರ ಭುಗಿಲೆದ್ದ ಈ ಯುದ್ಧದಲ್ಲಿ 67,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 170,000 ಜನರು ಗಾಯಗೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net