Gaza Peace Plan | ಶಾಂತಿ ಯೋಜನೆಯ ಮೊದಲ ಹಂತಕ್ಕೆ ಇಸ್ರೇಲ್, ಹಮಾಸ್ ಒಪ್ಪಿಗೆ: ಡೊನಾಲ್ಡ್ ಟ್ರಂಪ್

Donald Trump
Published on

Gaza Peace Plan: ಗಾಜಾದಲ್ಲಿ ಹೋರಾಟವನ್ನು ನಿಲ್ಲಿಸಲು, ಒತ್ತೆಯಾಳುಗಳು ಮತ್ತು ಕೈದಿಗಳನ್ನು ಬಿಡುಗಡೆ ಮಾಡಲು ಅಮೆರಿಕದ ಮಧ್ಯಸ್ಥಿಕೆಯ ಶಾಂತಿ ಯೋಜನೆಯ ಮೊದಲ ಹಂತಕ್ಕೆ ಇಸ್ರೇಲ್ ಮತ್ತು ಹಮಾಸ್ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ (ಅ 9) ಘೋಷಿಸಿದರು.

ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಟ್ರಂಪ್​, ಎಲ್ಲಾ ಒತ್ತೆಯಾಳುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಮತ್ತು ಬಲವಾದ, ಬಾಳಿಕೆ ಬರುವ ಮತ್ತು ಶಾಶ್ವತ ಶಾಂತಿಯತ್ತ ಮೊದಲ ಹೆಜ್ಜೆಯಾಗಿ ಇಸ್ರೇಲ್ ತಮ್ಮ ಸೈನಿಕರನ್ನು ಹಿಂತೆಗೆದುಕೊಳ್ಳುತ್ತದೆ ಎಂದು ಬರೆದಿದ್ದಾರೆ.

ಈಜಿಪ್ಟ್‌ನಲ್ಲಿ ನಡೆದ ಪರೋಕ್ಷ ಮಾತುಕತೆಗಳು ಟ್ರಂಪ್‌ರ 20 ಅಂಶಗಳ ಶಾಂತಿ ಚೌಕಟ್ಟಿನ ಆರಂಭಿಕ ಹಂತದಲ್ಲಿ ಪ್ರಗತಿಯನ್ನು ಸಾಧಿಸಿದ್ದರಿಂದ, ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಎರಡು ವರ್ಷಗಳು ಪೂರ್ಣಗೊಂಡ ಒಂದು ದಿನದ ಬಳಿಕ ಈ ಒಪ್ಪಂದಕ್ಕೆ ಬರಲಾಗಿದೆ.

ಟ್ರಂಪ್​ ಇಸ್ರೇಲ್​​ ಭೇಟಿ..

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಾರ ಇಸ್ರೇಲ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಆಕ್ಸಿಯೋಸ್ ಜೊತೆ ಮಾತನಾಡಿದ ಟ್ರಂಪ್​, ತಮ್ಮ ಭೇಟಿಯ ಸಮಯದಲ್ಲಿ ನೆಸ್ಸೆಟ್ ಉದ್ದೇಶಿಸಿ ಮಾತನಾಡಬಹುದು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ನಾನು ಇಸ್ರೇಲ್‌ಗೆ ಆಗಮಿಸುವ ನಿರೀಕ್ಷೆಯಿದೆ. ಅಲ್ಲಿನವರು ನನ್ನನ್ನು ನೆಸ್ಸೆಟ್‌ನಲ್ಲಿ ಮಾತನಾಡಬೇಕೆಂದು ಬಯಸಿದರೆ ನಾನು ಖಂಡಿತವಾಗಿಯೂ ಅವರ ಆಸೆ ಈಡೇರಿಸುತ್ತೇನೆ ಎಂದು ಹೇಳಿದರು. ಇಸ್ರೇಲಿ ಮಾಧ್ಯಮ ವೈನೆಟ್ ಪ್ರಕಾರ, ಅಮೆರಿಕ ಅಧ್ಯಕ್ಷರು ಭಾನುವಾರ ಇಸ್ರೆಲ್​ಗೆ ತೆರಳುವ ಸಾಧ್ಯತೆಗಳಿವೆ.

ಎಲ್ಲಾ ಕಡೆಯಿಂದ ದೃಢೀಕರಿಸಲ್ಪಟ್ಟ ಒಪ್ಪಂದ

ಗಾಜಾ ಶಾಂತಿ ಒಪ್ಪಂದದ ಆರಂಭಿಕ ಹಂತವನ್ನು ಇಸ್ರೇಲಿ ಅಧಿಕಾರಿಗಳು, ಹಮಾಸ್ ಮತ್ತು ಮಧ್ಯವರ್ತಿ ಕತಾರ್ ದೃಢಪಡಿಸಿದರು.

ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಒಪ್ಪಂದಕ್ಕೆ ಬಂದಿರುವುದಾಗಿ ಹಮಾಸ್ ತನ್ನ ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಒಪ್ಪಂದದಲ್ಲಿ ಗಾಜಾ ಪ್ರದೇಶದಿಂದ ಇಸ್ರೇಲಿ ಸೈನಿಕರನ್ನು ಹಿಂತೆಗೆದುಕೊಳ್ಳುವುದು ಮತ್ತು ಒತ್ತೆಯಾಳು-ಕೈದಿಗಳ ವಿನಿಮಯವೂ ಸೇರಿದೆ ಎಂದು ಮೂಲಗಳು ತಿಳಿಸಿವೆ. ಒಪ್ಪಂದ ಜಾರಿಗೆ ಬಂದ 72 ಗಂಟೆಗಳ ಒಳಗೆ ಒತ್ತೆಯಾಳುಗಳು ಮತ್ತು ಪ್ಯಾಲೆಸ್ಟೀನಿಯನ್ ಕೈದಿಗಳ ವಿನಿಮಯ ನಡೆಯಲಿದೆ, ಎಲ್ಲಾ ಜೀವಂತ ಒತ್ತೆಯಾಳುಗಳನ್ನು ಸುಮಾರು 2,000 ಪ್ಯಾಲೆಸ್ಟೀನಿಯನ್ ಬಂಧಿತರೊಂದಿಗೆ ಬದಲಾಯಿಸಲಾಗುವುದು.

ಈ ವಾರಾಂತ್ಯದಲ್ಲಿ ಎಲ್ಲಾ 20 ಜೀವಂತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಸಂಧಾನಕಾರರು ಗಾಜಾದ ಭವಿಷ್ಯದ ಆಡಳಿತ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಇದು ಟ್ರಂಪ್​ರ ಶಾಂತಿ ಚೌಕಟ್ಟಿನ ಭಾಗದ ಪ್ರಮುಖ ಬೇಡಿಕೆಯಾಗಿದೆ. ಬಗೆಹರಿಯದ ವಿಷಯಗಳನ್ನು ಪರಿಹರಿಸಲು ಈಜಿಪ್ಟ್‌ನಲ್ಲಿ ಮಾತುಕತೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಇದು ಒಪ್ಪಂದದ ಮುಂದಿನ ಹಂತಗಳನ್ನು ರೂಪಿಸುವ ನಿರೀಕ್ಷೆಯಿದೆ.

ಅಮೆರಿಕ ಮತ್ತು ಕತಾರ್‌ನ ಉನ್ನತ ಅಧಿಕಾರಿಗಳು ಒತ್ತೆಯಾಳುಗಳ ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸಲು ಮಾತುಕತೆ ನಡೆಸಿದ ನಂತರ ಟ್ರಂಪ್ ಈ ವಾರಾಂತ್ಯದಲ್ಲಿ ಈಜಿಪ್ಟ್‌ಗೆ ಪ್ರಯಾಣಿಸಬಹುದು ಎಂದು ಹೇಳಿದರು. ಗಾಜಾ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವು ತುಂಬಾ ಹತ್ತಿರದಲ್ಲಿದೆ ಎಂದು ತಿಳಿಸಿದರು.

"ಇಸ್ರೇಲ್‌ಗೆ ಉತ್ತಮ ದಿನ"

ಇದೇ ವಿಷಯವಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ನೆತನ್ಯಾಹು, ನಾಳೆ ನಾನು ಒಪ್ಪಂದವನ್ನು ಅನುಮೋದಿಸಲು ಸರ್ಕಾರವನ್ನು ಆಹ್ವಾನಿಸುತ್ತೇನೆ ಮತ್ತು ನಮ್ಮ ಎಲ್ಲಾ ಪ್ರೀತಿಯ ಒತ್ತೆಯಾಳುಗಳನ್ನು ಮನೆಗೆ ಕರೆತರುತ್ತೇನೆ ಎಂದರು. ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಈ ಪವಿತ್ರ ಧ್ಯೇಯಕ್ಕಾಗಿ ಸಜ್ಜುಗೊಳಿಸಿದ್ದಕ್ಕಾಗಿ ಅಧ್ಯಕ್ಷ ಟ್ರಂಪ್ ಮತ್ತು ಅವರ ತಂಡಕ್ಕೆ ನನ್ನ ಹೃದಯದಾಳದಿಂದ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇಸ್ರೇಲ್ ತನ್ನ ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವ ನಿರೀಕ್ಷೆ ಇದೆ ಎಂದು ಸರ್ಕಾರದ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಜೀವಂತ ಮತ್ತು ಮೃತ 48 ಒತ್ತೆಯಾಳುಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಬೇಕೆಂದು ಸರ್ಕಾರ ನಿರೀಕ್ಷಿಸುತ್ತದೆಯೇ ಎನ್ನುವುದನ್ನು ವಕ್ತಾರರು ದೃಢಪಡಿಸಲಿಲ್ಲ.

2023 ರ ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದರು, ಅದರಲ್ಲಿ ಹೆಚ್ಚಿನವರು ಸಾಮಾನ್ಯ ನಾಗರಿಕರು. ಇಸ್ರೇಲ್‌ನ ಪ್ರತೀಕಾರದ ಮಿಲಿಟರಿ ಕಾರ್ಯಾಚರಣೆಯು ಹತ್ತಾರು ಸಾವಿರ ಪ್ಯಾಲೆಸ್ಟೀನಿಯನ್ನರನ್ನು ಕೊಂದು ಗಾಜಾವನ್ನು ಧ್ವಂಸಗೊಳಿಸಿದೆ. ಹಮಾಸ್‌ನ ಅಕ್ಟೋಬರ್ 7, 2023 ರಂದು ನಡೆದ ಇಸ್ರೇಲ್ ದಾಳಿಯ ನಂತರ ಭುಗಿಲೆದ್ದ ಸಂಘರ್ಷವನ್ನು ಕೊನೆಗೊಳಿಸುವ ಪ್ರಯತ್ನಗಳಲ್ಲಿ ಈ ಘೋಷಣೆಯು ಅತ್ಯಂತ ಮಹತ್ವದ ಪ್ರಗತಿಯಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net