

ವಿಶಾಖಪಟ್ಟಣ: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಆತಿಥೇಯ ಭಾರತ ತಂಡ ಐಸಿಸಿ ಮಹಿಳಯರ ಏಕದಿನ ವಿಶ್ವಕಪ್ ಟೂರ್ನಿಯ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸವಾಲು ಎದುರಿಸಲಿದೆ. ಗುರುವಾರ ವೈಎಸ್ಆರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ಲಯ ಕಾಯ್ದುಕೊಳ್ಳುವ ತವಕದಲ್ಲಿವೆ.
ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ, ಹಿಂದಿನ ಎರಡು ಪಂದ್ಯಗಳಲ್ಲಿ ನೀಡಿದ ಪ್ರದರ್ಶನಕ್ಕಿಂತ ಸುಧಾರಿತ ನಿರ್ವಹಣೆ ತೋರಬೇಕಿದೆ. ಫೀಲ್ಡಿಂಗ್ ಹಾಗೂ ಅಗ್ರ ಕ್ರಮಾಂಕ ಬ್ಯಾಟರ್ಗಳಿಂದ ಉತ್ತಮ ಪ್ರದರ್ಶನ ಮೂಡಿಬರಬೇಕಿದೆ. ಉಪನಾಯಕಿ ಸ್ಮೃತಿ ಮಂದನಾ, ಹರ್ಮಾನ್ಪ್ರೀತ್ ಕೌರ್ ಹಾಗೂ ಜೆಮೀಮಾ ರೋಡ್ರಿಗಸ್ ರನ್ಗಳಿಸದ ಹೊರತಾಗಿಯೂ ಭಾರತ ತಂಡ ತನ್ನ ಆರಂಭಿಕ ಪಂದ್ಯಗಳಲ್ಲಿ ಮೇಲುಗೈ ಸಾಧಿಸಿರುವುದು ಪ್ಲಸ್ ಪಾಯಿಂಟ್. ದ. ಆಫ್ರಿಕಾ ಜತೆಗೆ ಹಾಲಿ ಚಾಂಪಿಯನ್ ಆಸ್ಟ್ರೆಲಿಯಾ ವಿರುದ್ಧವೂ ತನ್ನ ಮುಂದಿನ ಪಂದ್ಯವನ್ನು ಇದೇ ಮೈದಾನದಲ್ಲಿ ಭಾರತ ಆಡಲಿದೆ. ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದರೆ ಸೆಮಿಫೈನಲ್ ಹಾದಿ ಭಾರತಕ್ಕೆ ಸುಲಭವಾಗಲಿದೆ.
ವಿಶ್ವಕಪ್ಗೂ ಮುನ್ನ 2025ರಲ್ಲಿ 4 ಶತಕ ಬಾರಿಸಿದ್ದ ಸ್ಮೃತಿ, ಹಾಲಿ ಟೂರ್ನಿಯಲ್ಲಿ ವೈಫಲ್ಯ ಕಂಡಿದ್ದಾರೆ. ಪ್ರತಿಕಾ ರಾವಲ್ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾಗಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಹರ್ಲೀನ್ ಡಿಯೋಲ್, ಅಮನ್ಜೋತ್ ಕೌರ್, ರಿಚಾ ಘೋಷ್ ಹಾಗೂ ದೀಪ್ತಿ ಶರ್ಮ ನೆರವಾಗಿದ್ದರು. ಅನಾರೋಗ್ಯದಿಂದ ಹಿಂದಿನ ಪಂದ್ಯ ತಪ್ಪಿಸಿಕೊಂಡಿದ್ದ ಆಲ್ರೌಂಡರ್ ಅಮನ್ಜೋತ್ ಫಿಟ್ ಆಗುವ ನಿರೀಕ್ಷೆ ಇದೆ. ದೀಪ್ತಿ ಶರ್ಮ ಇದುವರೆಗೆ ಆರು ವಿಕೆಟ್ ಪಡೆದು ಟೂರ್ನಿಯ ಗರಿಷ್ಠ ವಿಕೆಟ್ ಟೇಕರ್ ಎನಿಸಿದ್ದಾರೆ.
ಗುವಾಹಟಿ ಹಾಗೂ ಕೊಲಂಬೊದ ಪಿಚ್ ಬೌಲರ್ಗಳಿಗೆ ನೆರವು ನೀಡಿತ್ತು. ವಿಶಾಖಪಟ್ಟಣದ ಪಿಚ್ ಕೊಂಚ ಭಿನ್ನ ಎನಿಸಿದ್ದು, ದ. ಆಫ್ರಿಕಾ ಎದುರು ಬೌಲರ್ಗಳಿಗೆ ಕಠಿಣ ಸವಾಲು ಎದುರಾಗಬಹುದು. ಅಮನ್ಜೋತ್ ಫಿಟ್ ಆದರೆ ಶ್ರೀಚರಣಿ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಹಾಲಿ ವರ್ಷ ಐದು ಶತಕ ಬಾರಿಸಿರುವ ತಜ್ಮಿನ್ ಬ್ರಿಟ್ಸ್ ಭರ್ಜರಿ ಫಾರ್ಮ್ನಲ್ಲಿದ್ದು, ಲೌರಾ ವೊಲ್ವಾರ್ಡ್, ಮಾರಿಜಾನ್ನೆ ಕಾಪ್ ಬಲವಿದೆ. ಇಂಗ್ಲೆಂಡ್ ಎದುರು 10 ವಿಕೆಟ್ಗಳ ಸೋಲಿನ ನಂತರ ನ್ಯೂಜಿಲೆಂಡ್ ವಿರುದ್ಧದ 6 ವಿಕೆಟ್ ಗೆಲುವಿನೊಂದಿಗೆ ಆಫ್ರಿಕಾ ಕಂಬ್ಯಾಕ್ ಮಾಡಿದೆ.
ಮುಖಾಮುಖಿ: 33
ಭಾರತ: 20
ದ.ಆಫ್ರಿಕಾ: 12
ರದ್ದು: 1
ವಿಶ್ವಕಪ್ನಲ್ಲಿ: 5
ಭಾರತ: 3
ದ.ಆಫ್ರಿಕಾ: 2
ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.