

ಬೆಂಗಳೂರು: ಕರೊನಾ ಸಂಕಷ್ಟ-ಸವಾಲುಗಳ ನಡುವೆಯೇ 23ನೇ ಆವೃತ್ತಿಯ ಪ್ರತಿಷ್ಠಿತ ‘ಬೆಂಗಳೂರು ಟೆಕ್ ಶೃಂಗ-2020’ ಗುರುವಾರದಿಂದ 3 ದಿನ ನಡೆಯಲಿದೆ. ಬದಲಾದ ಪರಿಸ್ಥಿತಿ, ಮನಸ್ಥಿತಿ, ಡಿಜಿಟಲ್ ಕ್ರಾಂತಿಗೆ ಅನುಗುಣವಾಗಿ ಇದೇ ಮೊದಲ ಬಾರಿಗೆ ವರ್ಚುವಲ್ ವೇದಿಕೆಯಲ್ಲಿ ಶೃಂಗ ಸಭೆ ನಡೆಯಲಿದ್ದು, ನ.19ರ ಬೆಳಗ್ಗೆ 11ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸುವರು. ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಹಾಗೂ ಸಂಜೆ 6.30ಕ್ಕೆ ನಾಸ್ಕಾಮ್ ಅಧ್ಯಕ್ಷೆ ದೇಬ್ಜನಿ ಘೋಷ್ ಪ್ರಧಾನ ಭಾಷಣ ಮಾಡಲಿದ್ದಾರೆ.
ಆತ್ಮನಿರ್ಭರ್ ಭಾರತ, ಕೃಷಿ, ಆರೋಗ್ಯ, ಕೃತಕ ಬುದ್ಧಿಮತ್ತೆ, ರೊಬಾಟಿಕ್ಸ್, ವ್ಯವಹಾರದಲ್ಲಿ ಡಿಜಿಟಲ್ ರೂಪಾಂತರ, ಎ-ಕಾಮರ್ಸ್, ಬಾಹ್ಯಾಕಾಶ ತಂತ್ರಜ್ಞಾನ, ಸುಸ್ಥಿರ ಭವಿಷ್ಯ ಹಾಗೂ ಹಸಿರು ಪುನರುಜ್ಜೀವನ, ಔಷಧವಾಗಿ ಪೌಷ್ಟಿಕಾಂಶ ಮತ್ತು ಆಹಾರ, ಜೈವಿಕ ಆರ್ಥಿಕತೆಯಲ್ಲಿ ಹೂಡಿಕೆ, ನಾವೀನ್ಯತೆಯಲ್ಲಿ ನಮ್ಯತೆ ಮುಂತಾದ ವಿಷಯಗಳು ಮಂಡನೆಯಾಗಲಿವೆ.
ಇದನ್ನೂ ಓದಿ: ಮರಾಠ ಸಮುದಾಯದ ಅಭಿವೃದ್ಧಿ ನಿಗಮ: ಸಿ.ಟಿ.ರವಿ ಸಮರ್ಥನೆ
ಪಾಲುದಾರ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಜರ್ಮನಿ, ಇಸ್ರೇಲ್, ನೆದರ್ಲ್ಯಾಂಡ್ಸ್, ಸ್ವಿಟ್ಜರ್ಲೆಂಡ್ ಮತ್ತು ಯುಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿ ಹಾಗೂ ಆವಿಷ್ಕಾರಗಳನ್ನು ಈ ಶೃಂಗದಲ್ಲಿ ಅನಾವರಣಗೊಳಿಸಲಿವೆ. ನ.21ರ ಸಂಜೆ ಸಮಾರೋಪ ನಡೆಯಲಿದ್ದು, ಐಟಿ-ಬಿಟಿ ಇಲಾಖೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಮಾರೋಪ ಭಾಷಣ ಮಾಡುವರು.