

ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗ ಮೃತಪಟ್ಟ ಘಟನೆ ಬೆಂಗಳೂರಿಗರನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತನಿಖೆ ಪೂರ್ಣಗೊಳಿಸಿ, ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಗೋವಿಂದಪುರ ಪೊಲೀಸರಿಂದ ನ್ಯಾಯಾಲಯಕ್ಕೆ 1100 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಈ ಘಟನೆ ನಡೆದು ಐದು ತಿಂಗಳ ಬಳಿಕ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ನಿರ್ಮಾಣ ಕಂಪನಿಯ ಇಂಜಿನಿಯರ್ಸ್ ಹಾಗೂ ಬಿಎಂಆರ್ಸಿಎಲ್ ಇಂಜಿನಿಯರ್ಸ್ ಸೇರಿ 11 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ತಜ್ಞರ ವರದಿಗಳು, ಪೊಲೀಸರ ತನಿಖೆ ಹಾಗೂ ಎಫ್ಎಸ್ಎಲ್ ರಿಪೋರ್ಟ್ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದರು. ಐಐಟಿ ರಿಪೋರ್ಟ್ ಮತ್ತು ಎಫ್ಎಸ್ಎಲ್ ರಿಪೋರ್ಟ್ ಅನ್ನು ಚಾರ್ಜ್ಶೀಟ್ನಲ್ಲಿ ಸೇರಿಸಲಾಗಿದೆ. ಅಧಿಕಾರಿಗಳ ಲೋಪ ಹಾಗೂ ಪಿಲ್ಲರ್ ನಿರ್ಮಾಣ ವೇಳೆ ಕೈಗೊಂಡ ಸುರಕ್ಷತಾ ಕ್ರಮಗಳ ವೈಫಲ್ಯದ ಬಗ್ಗೆ ಉಲ್ಲೇಖಿಸಲಾಗಿದೆ.
ತನಿಖೆ ವೇಳೆ ತನಿಖಾಧಿಕಾರಿಗಳು ಪ್ರಾಜೆಕ್ಟ್ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಪಿಲ್ಲರ್ ಡಿಸೈನ್ ಹೇಗೆ ಮಾಡಲಾಗಿತ್ತು? ಸುರಕ್ಷತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕಿತ್ತು? ಪ್ರರಕಣದಲ್ಲಿ ಲೋಪ ಯಾರದು? ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸಿದ್ದರು. ಐಐಟಿ ರಿಪೋರ್ಟ್ ಮತ್ತು ಬಳಕೆಯಾದ ಮೆಟಿರಿಯಲ್ಸ್ ಬಗ್ಗೆ ಎಫ್ಎಸ್ಎಲ್ ರಿಪೋರ್ಟ್ ಪಡೆದು ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಗದಗ ಮೂಲದ ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ ದಂಪತಿ ಇಬ್ಬರೂ ಬೆಂಗಳೂರಿನಲ್ಲಿ 10 ವರ್ಷಗಳಿಂದ ವಾಸವಿದ್ದರು. ಇಬ್ಬರೂ ಸಿವಿಲ್ ಇಂಜಿನಿಯರ್ ಆಗಿದ್ದರು. ಮಕ್ಕಳಿಬ್ಬರನ್ನೂ ಬೇಬಿ ಸಿಟ್ಟಿಂಗ್ಗೆ ಬಿಟ್ಟು, ಪತ್ನಿಯನ್ನ ಕಂಪನಿ ಬಳಿ ಡ್ರಾಪ್ ಮಾಡಿ ಬಳಿ ತಾನೂ ಕೆಲಸಕ್ಕೆ ಹೋಗಲೆಂದು ಪತ್ನಿ-ಮಕ್ಕಳನ್ನು ಬೈಕ್ನಲ್ಲಿ ಲೋಹಿತ್ ಕರೆದುಕೊಂಡು ಜನವರಿ 10ರ ಮಂಗಳವಾರ ಬೆಳಗ್ಗೆ ಹೋಗುತ್ತಿದ್ದರು. ದುರಾದೃಷ್ಟವಶಾತ್ ಚಲಿಸುತ್ತಿದ್ದ ಬೈಕ್ ಮೇಲೆ ಅಂದು 10.30ರ ಸುಮಾರಿಗೆ ಮೆಟ್ರೋ ಪಿಲ್ಲರ್ ಕುಸಿದಿದ್ದು, ನಾಲ್ವರೂ ಗಂಭೀರ ಗಾಯಗೊಂಡರು. ಕೂಡಲೇ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ತೇಜಸ್ವಿನಿ ಮತ್ತು ಎರಡೂವರೆ ವರ್ಷದ ಮಗ ಮೃತಪಟ್ಟರು. ಲೋಹಿತ್ ಮತ್ತು ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. (ದಿಗ್ವಿಜಯ ನ್ಯೂಸ್)