ಹಣದಿಂದ ಎಲ್ಲವನ್ನು ಖರೀದಿಸಲಾಗದು! 54 ಲಕ್ಷ ಸಂಬಳದ ಉದ್ಯೋಗಕ್ಕೆ ಗುಡ್​ಬೈ, ಈತನ ಕತೆಯೇ ಎಲ್ಲರಿಗೂ ಸ್ಫೂರ್ತಿ

Parantap Chowdhury
Published on

ಬೆಂಗಳೂರು: ರಿಯಲ್​ ಎಸ್ಟೇಟ್​ ವೆಬ್​ಸೈಟ್​ನಲ್ಲಿ ಅಸಿಸ್ಟೆಂಟ್​ ವೈಸ್​ ಪ್ರೆಸಿಡೆಂಟ್ ಆಗಿದ್ದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ತನ್ನಿಷ್ಟದ ಕೆಲಸ ಮಾಡಲು ವರ್ಷಕ್ಕೆ ಬರೋಬ್ಬರಿ 54 ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಉದ್ಯೊಗಕ್ಕೆ ಗುಡ್​ಬೈ ಹೇಳಿದ್ದಾರೆ. ಈ ಕುರಿತು ಲಿಂಕ್​ಡಿನ್​ನಲ್ಲಿ ಬರೆದುಕೊಂಡಿದ್ದು, ಇದೀಗ ಎಲ್ಲರ ಗಮನ ಸೆಳದಿದೆ.

ಬದಲಾವಣೆಗೆ ಇದು ಸೂಕ್ತ ಸಮಯ ಅಂದುಕೊಂಡ ಪರಂತಪ್ ಚೌಧರಿ, ಅತ್ಯಧಿಕ ಸಂಬಳದ ಉದ್ಯೋಗಕ್ಕೆ ಗುಡ್​ಬೈ ಹೇಳಿ ತಮ್ಮಿಷ್ಟದ ಕೆಲಸವನ್ನು ಮಾಡುತ್ತಿದ್ದಾರೆ. ನನ್ನ ಈ ಒಂದು ನಿರ್ಧಾರವೂ ಸಂಪೂರ್ಣ ಯೋಗ್ಯವಾಗಿದೆ. ಏಕೆಂದರೆ, ಹಣವು ಹೆಚ್ಚಿನ ವಸ್ತುಗಳನ್ನು ಖರೀದಿಸಬಹುದು, ಆದರೆ ಎಲ್ಲವನ್ನೂ ಅಲ್ಲ ಎಂದು ಚೌಧರಿ ಲಿಂಕ್​ಡಿನ್​ನಲ್ಲಿ ಬರೆದುಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ನನ್ನದೇಯಾದ ಜೀವನವನ್ನು ಹೊಂದಲು, ನಾನು ಪ್ರೀತಿಸುವ ಜನರೊಂದಿಗೆ ಸಮಯ ಕಳೆಯಲು ಮತ್ತು ರಿಮೋಟ್, ಡಿಜಿಟಲ್ ಮತ್ತು ಲಾಭದಾಯಕ ವ್ಯಾಪಾರವನ್ನು ನಿರ್ಮಿಸಲು 6 ತಿಂಗಳ ಹಿಂದೆ ನಾನು ಕೆಲಸವನ್ನು ಬಿಟ್ಟೆ. ಬರವಣಿಗೆ ಅಂದರೆ ನನಗೆ ತುಂಬಾ ಇಷ್ಟ. ಆದರೆ, ಏನು ಬರೆಯಬೇಕೆಂಬ ಪ್ರಶ್ನೆ ನನ್ನಲ್ಲಿ ಮೂಡಿತು. ಒಂದು ತಿಂಗಳು ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ. ನನ್ನ ಅನುಭವಕ್ಕೆ ತಕ್ಕಂತೆ ಸ್ಥಾಪಿತ ಮತ್ತು ಅಧಿಕೃತ ವಿಷಯದ ಮೇಲೆ ಕೇಂದ್ರೀಕರಿಸಿದೆ. ದಿನೇ ದಿನೇ ಬೆಳೆಯುತ್ತಿರುವ ಸ್ಟಾರ್ಟಪ್​ಗಳನ್ನು ಗಮನದಲ್ಲಿಟ್ಟುಕೊಂಡು ಬರೆಯಲು ಆರಂಭಿಸಿದೆ ಎಂದರು.

ಆರಂಭದಲ್ಲಿ ನಾನು ತುಂಬಾ ಕಷ್ಟಪಟ್ಟೆ. ಆದರೆ, ನನ್ನ ಅನುಭವ ಕೊನೆಯಲ್ಲಿ ಕೈಹಿಡಿಯಿತು. ಇದೀಗ ಎಲ್ಲವೂ ಬದಲಾಗಿದೆ. ನನ್ನ ಹಳೆಯ ಕೆಲಸದಲ್ಲಿ 90 ದಿನಗಳಲ್ಲಿ ನಾನು 9.81 ಲಕ್ಷ ರೂ. ಗಳಿಸುತ್ತಿದ್ದೆ. ಆದರೆ, ಈಗ ಅದಕ್ಕಿಂತ ಶೇ. 10 ರಷ್ಟು ಕಡಿಮೆ ಸಂಪಾದಿಸುತ್ತಿದ್ದೇನೆ. ಆದರೆ, ಇದು ನನಗೆ ಯೋಗ್ಯ ಅನಿಸುತ್ತದೆ. ಏಕೆಂದರೆ, ಕಳೆದ ಮೂರು ವರ್ಷಗಳಲ್ಲಿ ನಾನು ಬದುಕಿದ್ದಕ್ಕಿಂತ ಈ ಮೂರು ತಿಂಗಳಲ್ಲಿ ಹೆಚ್ಚು ಬದುಕಿದ್ದೇನೆ ಎಂದು ಚೌಧರಿ ಹೇಳಿದರು.

ಪ್ರತಿದಿನ ಸಮರ್ಪಣಾ ಮನೋಭಾವದಿಂದ ಚೌಧರಿ ಕೆಲಸ ಮಾಡುತ್ತಾರೆ. ನಿತ್ಯವೂ ಮೂಲ ವಿಷಯವನ್ನು ಪೋಸ್ಟ್ ಮಾಡುವುದು, ಇತರರಿಗೆ ಉಚಿತವಾಗಿ ಸಹಾಯ ಮಾಡುವುದು ಮತ್ತು ನಿರಂತರವಾಗಿ ಕಲಿಯುವುದನ್ನು ಅಳವಡಿಸಿಕೊಂಡಿದ್ದಾರೆ. ಪರಂತಪ್ ಚೌಧರಿಯವರ ಈ ಪ್ರಯಾಣವು ಆನ್‌ಲೈನ್‌ನಲ್ಲಿ ಹಲವಾರು ಬಳಕೆದಾರರನ್ನು ಪ್ರೇರೇಪಿಸಿದೆ, ಯಶಸ್ಸು ಕೇವಲ ಸಂಖ್ಯೆಗಳು ಅಂದರೆ ಸಂಬಳದ ಬಗ್ಗೆ ಅಲ್ಲ, ಅದು ಬದುಕಿನ ಈಡೇರಿಕೆಯಲ್ಲಿರುತ್ತದೆ ಎಂದು ಕಂಡುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net