

ಬೆಂಗಳೂರು: ವೃದ್ಧನನ್ನು ಸ್ಕೂಟರ್ನಲ್ಲಿ ಎಳೆದೊಯ್ದ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬ ಸಿಲುಕಿದ್ದರೂ ಕಾರು ನಿಲ್ಲಿಸದ ಮಹಿಳೆ ಹಾಗೇ ಚಲಾಯಿಸಿಕೊಂಡು ಹೋದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ ನಡೆದಿದೆ. ಗಮನಾರ್ಹವೆಂದರೆ, ಈ ಪ್ರಕರಣದಲ್ಲಿ ಮಹಿಳಾ ಚಾಲಕಿ ಮತ್ತು ಕಾರಿನ ಬಾನೆಟ್ ಮೇಲೆ ಸಿಲುಕಿದ ವ್ಯಕ್ತಿ, ಇಬ್ಬರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ.
ಎರಡು ಕಾರಿನ ನಡುವೆ ಸಣ್ಣ ಅಪಘಾತ ಸಂಭವಿಸಿತು. ಪ್ರಿಯಾಂಕಾ ಎಂಬುವರು ಟಾಟಾ ನಿಕ್ಸಾನ್ ಕಾರನ್ನು ಚಲಾಯಿಸುತ್ತಿದ್ದರು. ಮಾರುತಿ ಸ್ವಿಫ್ಟ್ ಕಾರನ್ನು ದರ್ಶನ್ ಎಂಬುವರು ಚಲಾಯಿಸುತ್ತಿದ್ದರು. ಅಪಘಾತದ ಬೆನ್ನಲ್ಲೇ ಪ್ರಿಯಾಂಕಾ ಅವರು ದರ್ಶನ್ಗೆ ಮಧ್ಯದ ಬೆರಳನ್ನು ತೋರಿಸಿ ಕೆಟ್ಟದಾಗಿ ವರ್ತಿಸಿದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ದರ್ಶನ್, ಪ್ರಿಯಾಂಕಾ ಅವರ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ.
ಮಂಗಳೂರು ಪಿಯು ಕಾಲೇಜ್ ಬಳಿ ಕಾರನ್ನು ಅಡ್ಡಗಟ್ಟಿ ದರ್ಶನ್, ಪ್ರಶ್ನಿಸಲು ಹೋದಾಗ ಕೋಪಗೊಂಡ ಪ್ರಿಯಾಂಕಾ, ಕಾರನ್ನು ಮುಂದೆ ಚಲಾಯಿಸಲು ಹೋಗುತ್ತಿದ್ದಂತೆ, ದರ್ಶನ್, ಕಾರಿನ ಬಾನೆಟ್ ಮೇಲೆ ಹತ್ತಿ ಕುಳಿತ್ತಿದ್ದಾರೆ. ಪ್ರಿಯಾಂಕಾ ಅವರು ಕಾರನ್ನು ಸುಮಾರು ಒಂದು ಕಿ.ಮೀ. ವರೆಗೂ ಚಲಾಯಿಸಿಕೊಂಡು ಹೋಗಿದ್ದಾರೆ.
ದರ್ಶನ್ ಕಡೆಯ ಹುಡುಗರು ಬಂದು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಕಾರಿನ ಗಾಜುಗಳನ್ನು ಹೊಡೆದು ಹಾಕಿರುವುದಲ್ಲದೆ, ಪ್ರಿಯಾಂಕಾ ಅವರ ಗಂಡ ಪ್ರಮೋದ್ವರಿಗೆ ಕೈನಿಂದ ಗುದ್ದಿ ಗಾಯಪಡಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಪ್ರಿಯಾಂಕಾ ಅವರ ವಿರುದ್ಧ ದರ್ಶನ್ ಕೂಡ ದೂರು ದಾಖಲಿಸಿದ್ದು, ಎರಡು ಪ್ರಕರಣ ಜ್ಞಾನ ಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾನೆಟ್ ಮೇಲೆ ಕುಳಿತಿದ್ದ ದರ್ಶನ್ ಹಾಗೂ ಸ್ನೇಹಿತರ ಮೇಲೆ ಲೈಂಗಿಕ ದೌರ್ಜನ್ಯ 354, 506, ಸೇರಿ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಬಾನೆಟ್ ಮೇಲಿದ್ದ ದರ್ಶನ್, ಸ್ನೇಹಿತರಾದ ಸುಜಯ್, ಯಶವಂತ್ ಹಾಗೂ ವಿನಯ್ ಎಂಬುವರನ್ನು ಬಂಧಿಸಲಾಗಿದೆ. ಪ್ರಿಯಾಂಕಾ ಹಾಗೂ ಪ್ರಮೋದ್ ಹಾಗೂ ನಿತೀಶ್ ಮೇಲೆ 307 ಕೊಲೆ ಮಾಡಲು ಯತ್ನ 506 ಸೇರಿ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್)