

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಇಂದು ಬೆಂಗಳೂರು ಬಂದ್ ಆಚರಣೆ ಮಾಡುತ್ತಿದ್ದು, ವಿವಿಧ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಕೂಡ ಬಂದ್ಗೆ ಬೆಂಬಲ ನೀಡಿದ್ದು, ರಾಜಧಾನಿ ಇಂದು ಭಾಗಶಃ ಸ್ತಬ್ಧವಾಗಿದೆ.
ಹೊರ ರಾಜ್ಯಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ವಿಮಾನಗಳು ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರಿಲ್ಲದೆ ರದ್ದಾಗಿವೆ. ಕೊಚ್ಚಿ, ದೆಹಲಿ, ಮುಂಬೈ ಮತ್ತು ಮಂಗಳೂರು ವಿಮಾನಗಳು ರದ್ದಾಗಿವೆ. ಈ ವಿಮಾನಗಳು ಇಂದು ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿತ್ತು. ಒಟ್ಟು 13 ವಿಮಾನಗಳು ಕೊನೇ ಕ್ಷಣದಲ್ಲಿ ರದ್ದಾಗಿವೆ.
ಕಾವೇರಿಗಾಗಿ ಬೆಂಗಳೂರು ಬಂದ್ ಹಿನ್ನಲೆಯಲ್ಲಿ ಜೆಡಿಎಸ್ ನಾಯಕರು ನಗರದ ಜೆಡಿಎಸ್ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ನೀರನ್ನ ಬಿಡದಂತೆ ಒತ್ತಾಯ ಮಾಡಿದರು. ಮಹಿಳಾ ಕಾರ್ಯಕರ್ತೆಯರು ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು. ನಗರದಲ್ಲಿ 144 ಸೆಕ್ಷನ್ ಇರುವುದರಿಂದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಬೆಂಗಳೂರು ಬಂದ್ ಹತ್ತಿಕ್ಕಲು ಕೆಲಸ ಮಾಡಿದ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಇಂದು ಸಂಜೆ ರೈತ ಸಂಘಟನೆ ಮತ್ತು ಕನ್ನಡ ಪರ ಸಂಘಟನೆಯಿಂದ ಮತ್ತೊಂದು ಸಭೆ ನಡೆಯಲಿದೆ. ಸಭೆಯಲ್ಲಿ ಕುರುಬೂರು ಶಾಂತಕುಮಾರ್ ಹಾಗೂ ಮುಖ್ಯಮಂತ್ರಿ ಚಂದ್ರು ಸೇರಿ ಹಲವು ಸಂಘಟನೆಗಳ ನಾಯಕರು ಭಾಗಿಯಾಗಲಿದ್ದು, ಮುಂದಿನ ದಿನ ಸರ್ಕಾರದ ವಿರುದ್ಧ ಹೋರಾಟಕ್ಕೆ ತಯಾರಿ ನಡೆಸಲಿದ್ದಾರೆ. 29ಕ್ಕೆ ಕರ್ನಾಟಕ ಬಂದ್ ಬೆಂಬಲ ನೀಡಲು ಆಪ್ ಪಕ್ಷ ಮತ್ತು ರೈತ ಸಂಘಟನೆ ಮುಂದಾಗಿವೆ. ಸೆ. 29ಕ್ಕೆ ಸರ್ಕಾರಕ್ಕೆ ನಮ್ಮ ತಾಕತ್ತು ತೋರಿಸೋಣ ಎಂದು ನಿರ್ಧಾರ ಮಾಡಲಿದ್ದಾರೆ ಎನ್ನಲಾಗಿದೆ.