

ಚಿಕ್ಕಮಗಳೂರು: ಠೇವಣಿದಾರ, ಷೇರುದಾರರ ಹಾಗೂ ಗ್ರಾಹಕರ ಸಹಕಾರದಿಂದ ಸಂಘವು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಸಂಘವು 35 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಮಾನ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ.ದೇವರಾಜ್ ತಿಳಿಸಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾನ ಪತ್ತಿನ ಸೌಹಾರ್ದ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ಮಹಾ ಸಭೆ ಉದ್ಘಾಟಿಸಿ ಮಾತನಾಡಿ, ಸಂಘದಲ್ಲಿ ಗ್ರಾಹಕರು ನಿರಂತರವಾಗಿ ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ಸಂಘ ಲಾಭದಲ್ಲಿದೆ. ಠೇವಣಿ ಹೆಚ್ಚಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ಸಂಘದ ಸದಸ್ಯರಿಗೆ ಸೂಕ್ತ ಸಮಯಕ್ಕೆ ಆಡಳಿತ ಮಂಡಳಿ 10 ಕೋಟಿ ರೂ. ಹೆಚ್ಚು ಸಾಲ ವಿತರಿಸಲಾಗಿದೆ. ಜತೆಗೆ 11 ಕೋಟಿ ರೂ. ಠೇವಣಿ ಹೊಂದಿದ್ದು 2022-23ನೇ ಸಾಲಿನಲ್ಲಿ 35.17 ಲಕ್ಷ ರೂ. ನಿವ್ವಳ ಲಾಭಗಳಿಸಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಸಂತಸವ್ಯಕ್ತಪಡಿಸಿದರು.
ನಿವ್ವಳ ಲಾಭದಲ್ಲಿ ಸದಸ್ಯರಿಗೆ ಶೇ.16ರಷ್ಟು ಡಿವಿಡೆಂಡ್ ನೀಡಲಾಗಿದೆ. ಕಳೆದ ಸಾಲಿಗಿಂತ ಹಣಕಾಸು ವ್ಯವಹಾರದಲ್ಲಿ ಶೇ.20 ಪ್ರಗತಿ ಸಾಧಿಸಿದೆ. ಮುಂದಿನ ದಿನಗಳಲ್ಲಿ 25 ಕೋಟಿ ರೂ.ಗೂ ಹೆಚ್ಚು ವ್ಯವಹಾರ ಹಾಗೂ ನಿವ್ವಳ ಲಾಭಾಂಶ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸಂಘದ ಸಿಇಒ ಬಿ.ವೈ.ವೆಂಕಟೇಶ್ ಮಾತನಾಡಿ, ತಾಲೂಕಿನ ಬ್ಯಾಗಡೆಹಳ್ಳಿ ಮತ್ತು ಬ್ಯಾರವಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ಸಂಘದಿಂದ ಶಾಲಾ ಬ್ಯಾಗ್, ಕ್ರೀಡಾ ಪರಿಕರ ಮತ್ತು ಪೀಠೋಪಕರಣಗಳನ್ನು ಒದಗಿಸುವ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಸಂಘದ ಪ್ರವರ್ತಕ ಎಚ್.ಎಂ.ನೀಲಕಂಠಪ್ಪ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಡಿ.ಪಿ.ಕೃಷ್ಣಮೂರ್ತಿ, ನಿರ್ದೇಶಕರಾದ ಕೆ.ಎನ್.ದೊಡ್ಡೇಗೌಡ, ಬಿ.ಜಿ.ಸೋಮಶೇಖರಪ್ಪ, ಯು.ಎಂ.ಜಯರಾಮೇಗೌಡ, ಬಿ.ಎ.ಬಾಲಕೃಷ್ಣ, ಚೇತನ್ ನಾಯಕ್, ಎಂ.ಎ.ರವಿಕುಮಾರ್, ಕೆ.ವಿ.ಮಮತಾ ಇತರರಿದ್ದರು.