

ತಿರುವಲ್ಲ: ಬಿಲೀವರ್ಸ್ ಈಸ್ಟರ್ನ್ ಚರ್ಚ್ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಕೋಟ್ಯಂತರ ರೂಪಾಯಿ ಹವಾಲಾ ವಹಿವಾಟು ನಡೆದಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳೂ ಲಭ್ಯವಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಕರ್ನಾಟಕವೂ ಸೇರಿ ಹಲವು ರಾಜ್ಯಗಳಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಪಂಜಾಬ್, ಪಶ್ಚಿಮ ಬಂಗಾಳ, ಛತ್ತೀಸ್ಗಢ, ದೆಹಲಿ ಸೇರಿ ದೇಶದ ಹಲವೆಡೆ ಬಿಲೀವರ್ಸ್ ಈಸ್ಟರ್ನ್ ಚರ್ಚ್ನ ಅಂಗ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಬಿಲೀವರ್ಸ್ ಚರ್ಚ್ನ ಕೇಂದ್ರ ಕಚೇರಿ ಮತ್ತು ಅದರ ಅಂಗಸಂಸ್ಥೆಗಳ ಮೇಲಿನ ಐಟಿ ದಾಳಿ ಗುರುವಾರ ಆರಂಭವಾಗಿದ್ದು, ಶನಿವಾರವೂ ಮುಂದುವರಿದಿದೆ. ದೇಶಾದ್ಯಂತ 66 ಸ್ಥಳಗಳಲ್ಲಿ ಬಿಲೀವರ್ಸ್ ಚರ್ಚ್ ಕಾರ್ಯಾಚರಿಸುತ್ತಿದ್ದು, ಅಲ್ಲೆಲ್ಲ ಐಟಿ ದಾಳಿ ಆಗಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ವಿವಿಧೆಡೆಗಳಲ್ಲಾಗಿ ಇದುವರೆಗೆ 14.5 ಕೋಟಿ ರೂಪಾಯಿ ನಗದು ಹಣ ಲಭ್ಯವಾಗಿದ್ದು, ಇದಕ್ಕೆ ದಾಖಲೆಗಳು ಇಲ್ಲ. ಆದಾಗ್ಯೂ, ಈ ವಿಚಾರವಾಗಿ ದಾಖಲೆಗಳ ತಪಾಸಣೆ ಮುಂದುವರಿದಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ನಿಯಮಗಳನ್ನು ಉಲ್ಲಂಘಿಸಿ ವಿದೇಶದಿಂದಲೂ ದೇಣಿಗೆ ಪಡೆದುಕೊಂಡಿರುವುದಕ್ಕೆ ನೀಡಲಾದ ರಸೀದಿ ಮತ್ತು ಇತರೆ ದಾಖಲೆಗಳೂ ಐಟಿ ಅಧಿಕಾರಿಗಳಿಗೆ ಸಿಕ್ಕಿದೆ.
ಈ ಚರ್ಚ್ ವಿವಿಧ ರಾಜ್ಯಗಳಲ್ಲಿ ಚಾರಿಟೆಬಲ್ ಟ್ರಸ್ಟ್ಗಳ ಮೂಲಕ ಹಣ ಲೇವಾದೇವಿ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಬಿಲೀವರ್ಸ್ ಚರ್ಚ್ನ ವಹಿವಾಟಿನಲ್ಲಿ ಪಾಲುದಾರರಾದವರೆಲ್ಲರ ಮೇಲೂ ನಿಗಾ ಇರಿಸಲಾಗಿದೆ. ಜಾರಿ ನಿರ್ದೇಶನಾಲಯವೂ ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಶೀಘ್ರವೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳೂ ಈ ವಿಚಾರಣೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)