ಬೆಳಗಾವಿ ಜಿಲ್ಲೆ ವಿಭಜನೆಗೆ ಮುಂದಾಗುತ್ತಾ ಸರ್ಕಾರ? ಸ್ಥಳೀಯ ಶಾಸಕ, ಸಚಿವರಿಂದಲೇ ಒತ್ತಡ!

belagavi
Published on

ಬೆಂಗಳೂರು: ಹಿಂದಿನಿಂದಲೂ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಚರ್ಚೆ ಪರ-ವಿರೋಧ ಅಭಿಪ್ರಾಯ ಕೇಳಿಬರುತ್ತಿವೆ. ಇದೀಗ ಮತ್ತೊಮ್ಮೆ ಈ ವಿಚಾರ ಮುನ್ನೆಲೆಗೆ ಬಂದಿದ್ದು ಆ ಭಾಗದ ಶಾಸಕರು, ಸಚಿವರು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ನಿರ್ಣಯಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ದಶಕಗಳಿಂದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೀಗ ಸರ್ಕಾರ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಲು ಮುಂದಾಗುತ್ತಾ ಎನ್ನುವ ಪ್ರಶ್ನೆ ಎದ್ದು ನಿಂತಿದೆ. ಮೂರು ವಿಭಾಗಗಳನ್ನಾಗಿ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದ್ದು, ಈ ಕುರಿತಾಗಿ ಆ ಭಾಗದ ಶಾಸಕರು ಹಾಗು ಸಚಿವರಿಂದ ಸಿಎಂ ಮೇಲೆ ಒತ್ತಡ ಇದೆ ಎನ್ನುವ ಮಾಹಿತಿ ದಿಗ್ವಿಜಯ ನ್ಯೂಸ್ ಚ್ಯಾನಲ್‍ಗೆ ಲಭಿಸಿದೆ.

ಬೆಳಗಾವಿ ಜಿಲ್ಲೆಯನ್ನು ಗೋಕಾಕ್, ಚಿಕ್ಕೋಡಿ ಹಾಗು ಬೆಳಗಾವಿ ಎಂಬ ಮೂರು ಜಿಲ್ಲೆಗಳನ್ನಾಗಿ ಮಾಡಲು ಒತ್ತಡ ಬರುತ್ತಿದ್ದು ಈ ವಿಚಾರ ಇತ್ತೀಚೆಗೆ ಸಿಎಂ ಜೊತೆ ನಡೆದ ಆ ಭಾಗದ ಶಾಸಕರ ಸಭೆಯಲ್ಲೂ ಮುನ್ನೆಲೆಗೆ ಬಂದಿತ್ತು. ಅದಷ್ಟೇ ಅಲ್ಲದೇ ವಿಭಜನೆ ಕುರಿತಾಗಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಒಲವು ಹೊಂದಿದ್ದಾರೆ. ಅವರು ಸಿಎಂ ಜೊತೆ ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಜಿಲ್ಲೆ ಎಷ್ಟು ದೊಡ್ಡದು?

ಬೆಳಗಾವಿಯು ರಾಜ್ಯದ ಅತೀ ದೊಡ್ಡ ಜಿಲ್ಲೆಯಾಗಿದ್ದು 14 ತಾಲೂಕುಗಳನ್ನು ಹೊಂದಿದೆ. ಬೆಳಗಾವಿ ಜಿಲ್ಲೆಯಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು 18 ವಿಧಾನಸಭೆ, 3 ಲೋಕಸಭೆ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿರುದೆ. ಇಲ್ಲಿ 14 ತಾಲೂಕು, 6 ಆರ್‍ಟಿಓ ಕಚೇರಿ, 506 ಗ್ರಾಮ ಪಂಚಾಯತ್, 345 ತಾಲೂಕು ಪಂಚಾಯತ್ ಸದಸ್ಯರು, 90 ಜಿಲ್ಲಾ ಪಂಚಾಯತ್ ಸದಸ್ಯರಿದ್ದಾರೆ.

ಈ ಹಿಂದೆ ಜೆಎಚ್ ಪಟೇಲ್, ಬೆಳಗಾವಿ ವಿಭಜನೆ ಮಾಡಿ ಚಿಕ್ಕೋಡಿ ಜಿಲ್ಲೆ ರಚಿಸಲು ಆದೇಶ ನೀಡಿದ್ದರು. ಈ ಕುರಿತಾಗಿ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಈ ಆದೇಶವನ್ನು ತಡೆಹಿಡಿದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net