More

    ಸಚಿವರಿಗೆ ಬೆಳಗಾವಿ ಜಿಲ್ಲಾ ವಿಭಜನೆ ಬಿಸಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಹಠಕ್ಕೆ ಬಿದ್ದು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಸಕ್ಕರೆ ಜಿಲ್ಲೆಯ ನಾಲ್ವರು ಸಚಿವರಿಗೆ ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಸವಾಲಾಗಿ ಪರಿಣಮಿಸಿದೆ. ಜತೆಗೆ ಹೊಸಪೇಟೆ ಜಿಲ್ಲೆ ರಚನೆಗಾಗಿ ಸಚಿವ ಆನಂದ ಸಿಂಗ್ ನಡೆಸುತ್ತಿರುವ ಹೋರಾಟ ಗಡಿಜಿಲ್ಲೆಯ ಸಚಿವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ರಾಜ್ಯದ ಗಡಿಭಾಗದ ಕಾಗವಾಡ, ಅಥಣಿ, ನಿಪ್ಪಾಣಿ ಹಾಗೂ ಗೋಕಾಕ ವಿಧಾನಸಭಾ ಕ್ಷೇತ್ರಗಳ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದಶಕಗಳ ಕೂಗಾದ ಬೆಳಗಾವಿ ಜಿಲ್ಲೆ ವಿಭಜನೆಗೆ ಜೀವ ಬಂದಂತಾಗಿದೆ. ಈ ಹಿಂದೆ ನಡೆಯುತ್ತಿದ್ದ ಪ್ರತ್ಯೇಕ ಜಿಲ್ಲಾ ಹೋರಾಟಗಳಿಗೆ ದನಿಗೂಡಿಸಿದವರು ಇದೀಗ ಸಚಿವರಾಗಿದ್ದರಿಂದ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಚುರುಕು ಬಂದಂತಾಗಿದೆ.
    ಚಿಕ್ಕೋಡಿಯನ್ನು ಹೊಸ ಜಿಲ್ಲಾ ಕೇಂದ್ರವಾಗಿಸಿಕೊಂಡು ಬೆಳಗಾವಿ ಜಿಲ್ಲೆ ವಿಭಜಿಸುವ ಪ್ರಸ್ತಾವನೆಗೆ ದಶಕಗಳ ಇತಿಹಾಸವಿದೆ. 1997ರಲ್ಲಿ ಜಿಲ್ಲೆಗಳ ವಿಭಜನೆಗೆ ಸರ್ಕಾರ ರಚಿಸಿದ್ದ ಹುಂಡೇಕರ್ ಸಮಿತಿ ಸಹ ಬೆಳಗಾವಿ ಜಿಲ್ಲೆ ವಿಭಜನೆಗೆ ಶಿಫಾರಸು ಮಾಡಿತ್ತು. ಆಗಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವಧಿಯಲ್ಲಿ ಏಳು ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದವು. ಆದರೆ, ಜಿಲ್ಲಾ ಕೇಂದ್ರ ಸ್ಥಾನದ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದ ಜತೆ ಕೆಲ ರಾಜಕೀಯ ಕಾರಣಗಳಿಂದ ಬೆಳಗಾವಿ ಜಿಲ್ಲಾ ವಿಭಜನೆ ಕೈ ಬಿಡಲಾಗಿತ್ತು.

    2014ರ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಗೆ ಬಂದು ಚಿಕ್ಕೋಡಿ ಕೇಂದ್ರಿಕೃತ ಹೊಸ ಜಿಲ್ಲೆ ರಚನೆ ಬಗ್ಗೆ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಂದಿನ, ಸಂಸದ ಪ್ರಕಾಶ ಹುಕ್ಕೇರಿ ಸಹಿತ ಹಲವರು ಸಮರ್ಥಿಸಿದ್ದರೂ ಗೋಕಾಕ ತಾಲೂಕಿನಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಜಿಲ್ಲಾ ಕೇಂದ್ರವಾಗಲು ಚಿಕ್ಕೋಡಿಗಿಂತ ಗೋಕಾಕ ಸೂಕ್ತ ಎಂಬ ಪ್ರತಿಪಾದನೆ ಆ ಭಾಗದಿಂದ ಕೇಳಿಬಂದಿತ್ತು.

    ಹೆಚ್ಚುತ್ತಿರುವ ವಿಭಜನೆ ಕೂಗು: ಈಗಾಗಲೇ ರಾಜ್ಯ ಸರ್ಕಾರವು ಹಳ್ಳಿಗಳ ಸಮಗ್ರ ಅಭಿವೃದ್ಧಿ, ಅಧಿಕಾರ ವಿಕೇಂದ್ರೀಕರಣ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಮೂಡಲಗಿ, ನಿಪ್ಪಾಣಿ, ಕಾಗವಾಡ, ಕಿತ್ತೂರು ಹಾಗೂ ಯರಗಟ್ಟಿಯನ್ನು ಹೊಸ ತಾಲೂಕುಗಳನ್ನಾಗಿ ಘೋಷಣೆ ಮಾಡಿದ್ದರಿಂದ ಜಿಲ್ಲೆಯಲ್ಲಿನ ತಾಲೂಕುಗಳ ಸಂಖ್ಯೆ 10 ರಿಂದ 15ಕ್ಕೆ ಏರಿಕೆಯಾಗಿದೆ. ಗಡಿಭಾಗದಲ್ಲಿರುವ ಬೆಳಗಾವಿ ಜಿಲ್ಲೆಯು 35.68 ಲಕ್ಷ ಜನಸಂಖ್ಯೆ ಹೊಂದಿದ್ದು 18 ವಿಧಾನಸಭಾ ಕ್ಷೇತ್ರ, ಮೂರು ಲೋಕಸಭಾ ಕ್ಷೇತ್ರ ಹಾಗೂ 90 ಜಿಪಂ ಕ್ಷೇತ್ರ, 1265 ಗ್ರಾಮ, 506 ಗ್ರಾಪಂ ಒಳಗೊಂಡಿದೆ. ಇದೀಗ ಸರ್ಕಾರವು ತಾಲೂಕುಗಳ ಸಂಖ್ಯೆಯನ್ನು 15ಕ್ಕೆ ಏರಿಸಿದೆ.

    ಈ ಹಿನ್ನಲೆಯಲ್ಲಿ ಆಡಳಿತಾತ್ಮಕ ಅನುಕೂಲಕ್ಕಾಗಿ ಬೆಳಗಾವಿ ಹೊಸ ಜಿಲ್ಲೆ ರಚನೆಗೆ ಅರ್ಹತೆ ಪಡೆದುಕೊಂಡಿದೆ. ಹಾಗಾಗಿ ಸಚಿವರು ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಪ್ರತ್ಯೇಕ ಜಿಲ್ಲೆ ಹೋರಾಟಗಾರರು ಆಗ್ರಹಿಸಿದ್ದಾರೆ.

    ಹಲವು ಆಯೋಗಗಳ ವರದಿಯಲ್ಲಿಯೂ ಉಲ್ಲೇಖ

    ಭೌಗೋಳಿಕ ವಿಸ್ತೀರ್ಣ ಮತ್ತು ಆಡಳಿತಾತ್ಮಕ ಅಗತ್ಯತೆಗೆ ಹಾಗೂ ಕೇಂದ್ರ ಸ್ಥಾನದಿಂದ ಗ್ರಾಮಗಳ ಅಂತರ ಕಡಿಮೆ ಇರಬೇಕು ಎಂಬ ಉದ್ದೇಶದಿಂದ ಸ್ವಾತಂತ್ರೃ ನಂತರ ಬಂದ ಎಲ್ಲ ಸರ್ಕಾರಗಳು ಜಿಲ್ಲಾ ಹಾಗೂ ತಾಲೂಕು ಮರು ವಿಂಗಡಣೆಗೆ ಆಯೋಗಗಳನ್ನು ನೇಮಿಸಿದ್ದವು. ಅದರಲ್ಲಿ 1973-74ನೇ ಸಾಲಿನಲ್ಲಿ ನೇಮಿಸಿದ ವಾಸುದೇವರಾವ, 1984-85 ಸಾಲಿನಲ್ಲಿ ಟಿ.ಎಂ.ಹುಂಡೇಕರ್, 1986-27ರಲ್ಲಿ ಪಿ.ಸಿ.ಗದ್ದಿಗೌಡರ ಹಾಗೂ 2007-08ರಲ್ಲಿ ಎಂ.ಪಿ. ಪ್ರಕಾಶ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕು ಮರುರಚನಾ ಸಮಿತಿಗಳ ಶಿಫಾರಸ್ಸಿನಲ್ಲಿ ಬೆಳಗಾವಿ ಜಿಲ್ಲೆ ವಿಭಜಿಸಿ ಹೊಸ ಜಿಲ್ಲೆ ರಚನೆ ಕುರಿತು ಉಲ್ಲೇಖಿಸಿದೆ. ಆದರೂ, ಸರ್ಕಾರಗಳು ಜಿಲ್ಲಾ ವಿಭಜನೆಗೆ ಮುಂದಾಗುತ್ತಿಲ್ಲ ಎಂಬುದು ಹೋರಾಟಗಾರರ ದೂರು.

    ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮರುದಿನವೇ ಚಿಕ್ಕೋಡಿ ಜಿಲ್ಲೆ ರಚನೆ ಮಾಡುವುದಾಗಿ ಮಾತು ನೀಡಿತ್ತು. ಆದರೆ, ಇಲ್ಲಿಯವರೆಗೆ ಒಬ್ಬರೂ ಪ್ರತ್ಯೇಕ ಜಿಲ್ಲೆ ಕುರಿತು ಮಾತನಾಡುತ್ತಿಲ್ಲ. ಒಂದು ವಾರ ಕಾಲಾವಕಾಶ ನೀಡಲಾಗಿದ್ದು, ಬಳಿಕ ಹೋರಾಟ ಆರಂಭಿಸಲಾಗುವುದು.
    | ಬಿ.ಆರ್.ಸಂಗಪ್ಪಗೋಳ ಚಿಕ್ಕೋಡಿ ಜಿಲ್ಲಾ ಹೋರಾಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts