More

    ಅಕ್ಕಿ ವಿತರಿಸಿದ್ದು ಪ್ರಧಾನಿ ಮೋದಿಯ ಅಕ್ಷಯ ಪಾತ್ರೆ

    ಶಾಸಕ ಯಶ್​ಪಾಲ್​ ಸುವರ್ಣ ಹೇಳಿಕೆ — ಕಾಂಗ್ರೆಸ್​ನಿಂದ ಖಾಲಿ ಚೊಂಬು ಮಾತ್ರ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಕೇಂದ್ರ ಬಿಜೆಪಿ ಸರ್ಕಾರ ಆಹಾರ ಭದ್ರತಾ ಕಾಯ್ದೆಯಡಿ ದೇಶದ 80 ಕೋಟಿ ಜನತೆಗೆ ಉಚಿತವಾಗಿ 5 ಕೆಜಿ ಅಕ್ಕಿ ವಿತರಿಸುತ್ತಿದ್ದು, ಅದು ಪ್ರಧಾನಿ ನರೇಂದ್ರ ಮೋದಿ ಅವರ ಅಕ್ಷಯ ಪಾತ್ರೆಯಿಂದ ಜನತೆಗೆ ದೊರಕುತ್ತಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

    ಉಡುಪಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸಂಜೆ ಉಡುಪಿ ನಗರ ಚುನಾವಣಾ ನಿರ್ವಹಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

    ಚೊಂಬು ಸರ್ಕಾರ

    ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ’10 ಕೆಜಿ ಉಚಿತ ಅಕ್ಕಿ ಬೇಕೋ ಬೇಡ್ವೋ’ ಎಂದು ಸಿದ್ದರಾಮಯ್ಯ ಪುಂಗಿ ಊದಿದ್ದರು. ಬಳಿಕ ಅವರ ಸರ್ಕಾರವೇ ಇದ್ದರೂ ಒಂದು ಕಾಳು ಅಕ್ಕಿಯನ್ನೂ ನೀಡದೆ ದ್ರೋಹವೆಸಗಿದ್ದಾರೆ. ಗ್ಯಾರಂಟಿ ಯೋಜನೆ ಹೆಸರಲ್ಲಿ ಜನತೆಗೆ ಖಾಲಿ ಚೊಂಬು ನೀಡಿದ್ದಾರೆ. ಅದೊಂದು ಚೊಂಬು ಸರ್ಕಾರ ಎಂದು ಟೀಕಿಸಿದರು.

    ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕಿದೆ

    ಚುನಾವಣಾ ಅಭಿಯಾನ ಪ್ರಮುಖ್​ ಬೈಕಾಡಿ ಸುಪ್ರಸಾದ್​ ಶೆಟ್ಟಿ ಮಾತನಾಡಿ, ಪ್ರಜಾಪ್ರಭುತ್ವದ ಆಶಯ ರಾಮ ರಾಜ್ಯ. ರಾಮ ರಾಜ್ಯ ಸಾಕಾರಗೊಳ್ಳಬೇಕಾದರೆ ಧರ್ಮಾಧಾರಿತ, ಸಾಂಸ್ಕೃತಿಕ, ವಿಕಸಿತ ಭಾರತ ನಿಮಾರ್ಣಗೊಳ್ಳಬೇಕು. ಅದಕ್ಕಾಗಿ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಬೆಂಬಲಿಸಬೇಕು. ಕಳೆದ 10 ವರ್ಷಗಳಲ್ಲಿ ‘ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​’ ತತ್ವದಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿಯ ಹೊಸ ಶಕೆಯೊಂದಿಗೆ, ದಾಖಲೆಯ ಸಾಧನೆಗಳೊಂದಿಗೆ ವಿಶ್ವದ ಮುಂದುವರಿದ ದೇಶಗಳಲ್ಲಿ 5ನೇ ಸ್ಥಾನ ಅಲಂಕರಿಸಿದೆ. ವಿಶ್ವದಲ್ಲಿ ಭಾರತ 3ನೇ ಸ್ಥಾನಕ್ಕೇರಿಸಲು ಶ್ರಮಿಸುತ್ತಿದ್ದು, ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕಿದೆ ಎಂದರು.

    ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣಕುಮಾರ್​ ಬೈಲೂರು, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್​ ರತ್ನಾಕರ ಹೆಗ್ಡೆ, ಗಿರೀಶ್​ ಎಂ. ಅಂಚನ್​, ದಿನೇಶ್​ ಅಮೀನ್, ಜಗದೀಶ್​ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ, ಪೃಥ್ವಿರಾಜ್​ ಶೆಟ್ಟಿ ಉಪಸ್ಥಿತರಿದ್ದರು.

    ಕಾಂಗ್ರೆಸ್​ ಅಭ್ಯರ್ಥಿಯಿಂದ ಬಿಟ್ಟಿ ಪ್ರಚಾರ

    ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಗ್ರಾಪಂ ಮಟ್ಟದಿಂದ ರಾಜ್ಯ ವಿಧಾನ ಪರಿಷತ್​ನ ವಿರೋಧ ಪಕ್ಷದ ನಾಯಕ ಸ್ಥಾನದವರೆಗೆ ಬೆಳೆದು ಬಂದಿದ್ದಾರೆ. ಅಲ್ಲದೆ, ಮುಜರಾಯಿ, ಮೀನುಗಾರಿಕೆ, ಬಂದರು, ಒಳನಾಡ ಜಲ ಸಾರಿಗೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ಅನೇಕ ಜನಪರ ಕಾರ್ಯ ಮಾಡಿದ್ದಾರೆ. ಇದರೊಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಸಾಧನೆಗಳನ್ನು ಜನತೆಯ ಮುಂದಿಟ್ಟು ಮತ ಕೇಳುತ್ತಿದ್ದೇವೆ. ಆದರೆ, ಕಾಂಗ್ರೆಸ್​ ಅಭ್ಯರ್ಥಿ ಬಿಜೆಪಿ ಸರ್ಕಾರದ ಅವಧಿಯ ಸಾಧನೆಗಳನ್ನೇ ತನ್ನ ಸಾಧನೆ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯ ತೇಜೋವಧೆ ಮಾಡುತ್ತ, ಬಿಟ್ಟಿ ಪ್ರಚಾರ ಪಡೆಯಲು ವಿಫಲ ಯತ್ನ ನಡೆಸುತ್ತಿರುವುದು ಶೋಚನೀಯ. ಸಾಮಾನ್ಯ ಜನರೊಂದಿಗೂ ಬೆರೆತು ಎಲ್ಲರನ್ನೂ ಸಮಭಾವದಲ್ಲಿ ಕಾಣುವ ಮಾದರಿ ಜನನಾಯಕ ಕೋಟ ಪೂಜಾರಿ ಅವರು ದಾಖಲೆಯ ಅಂತರದ ಮತಗಳಿಂದ ವಿಜಯಶಾಲಿಯಾಗುವುದು ಶತಸಿದ್ಧ ಎಂದು ಯಶ್​ಪಾಲ್​ ಹೇಳಿದರು.

    ಮನೆ ಮನೆ ಪ್ರಚಾರವನ್ನು ಪರಿಣಾಮಕಾರಿಯಾಗಿ ಮಾಡಬೇಕು. ಪ್ರತಿ ಬೂತ್​ಗಳಲ್ಲಿ ಗೆಲ್ಲುವಂತೆ ನೋಡಿಕೊಂಡು ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ದೊಡ್ಡ ಅಂತರದ ಮತಗಳಿಂದ ಗೆಲ್ಲಿಸಲು ಎಲ್ಲರೂ ಬದ್ಧತೆಯಿಂದ ಶ್ರಮಿಸಬೇಕು.

    ಕುತ್ಯಾರು ನವೀನ್​ ಶೆಟ್ಟಿ
    ಚುನಾವಣಾ ಸಂಚಾಲಕ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts