

ಕಡೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ಜಿಲ್ಲಾದ್ಯಂತ ಶಾಲೆ ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಬಹುತೇಕ ಶೈಕ್ಷಣಿಕ ವಲಯಗಳಲ್ಲಿ ಮಕ್ಕಳ ಪಠ್ಯಪುಸ್ತಕ, ಸಮವಸ ವಿತರಣೆ ಮಾಡಲಾಗಿದೆ. ಜತೆಗೆ ಪರಿಹಾರ ಬೋಧನಾ ತರಗತಿಗಳನ್ನು ಆರಂಭಿಸಲು ಶಿಕ್ಷಕರು ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಬುಧವಾರ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಜೂನ್‌ನಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಜತೆಗೆ ಪರಿಹಾರ ಬೋಧನೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಕೆಲ ಖಾಸಗಿ ಶಾಲೆಗಳಲ್ಲಿ ತರಗತಿಗಳನ್ನು ಆರಂಭಿಸಿದ್ದು ಕೆಲ ಶಾಲೆಗಳು ಶಾಲಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಶಾಲೆಗಳಲ್ಲಿ ಮೇ 31ರಂದು ಮಕ್ಕಳನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದ್ದು ಮತ್ತೆ ಶಾಲೆಗಳಲ್ಲಿ ಮಕ್ಕಳ ಕಲರವ ಶುರುವಾಗಲಿದೆ.
ಜಿಲ್ಲೆಯಲ್ಲಿ ಸರ್ಕಾರಿ 1402, ಅನುದಾನಿತ 122 ಮತ್ತು ಖಾಸಗಿ ಶಾಲೆ 301 ಹಾಗೂ ಮುರಾರ್ಜಿ ದೇಸಾಯಿ ಇತರ ವಸತಿ ಶಾಲೆಗಳು 99 ಸೇರಿದಂತೆ ಒಟ್ಟು 1924 ಶಾಲೆಗಳಲ್ಲಿ 142380 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಜೂನ್‌ನಲ್ಲಿ ಜಿಲ್ಲಾದ್ಯಂತ ಪರಿಹಾರ ಬೋಧನೆಯ ತರಗತಿಗಳು ನಡೆಯಲಿದ್ದು ಹಿಂದಿನ ತರಗತಿಯ ವಿಷಯವನ್ನು ಮಕ್ಕಳಿಗೆ ಪುನರಾವರ್ತನೆಯನ್ನು ಶಿಕ್ಷಕರು ಮಾಡಲಿದ್ದಾರೆ. ನಂತರ ಆ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗುತ್ತದೆ. ಇದರ ಲಿತಾಂಶದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯದ ಬಗ್ಗೆ ತಿಳಿದು ಅದರನುಸಾರ ಮಕ್ಕಳ ಕಲಿಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ.
2023-24ರ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಪಠ್ಯಪುಸ್ತಕ ವಿತರಣೆ ಕಾರ್ಯ ನಡೆಸಲಾಗಿದೆ. ಜಿಲ್ಲೆಯಲ್ಲಿ ಶೇ.64 ಪಠ್ಯಪುಸ್ತಕಗಳು ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಶೈಕ್ಷಣಿಕ ವಲಯಗಳಲ್ಲಿ ಬೇಡಿಕೆ ಅನುಸಾರ ಪುಸ್ತಕಗಳನ್ನು ನೀಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಬಾಕಿ ಉಳಿದ ಪುಸ್ತಕಗಳು ಶಾಲೆಗಳಿಗೆ ನೀಡಲಾಗುತ್ತದೆ. ಸಮವಸಗಳ ವಿತರಣೆ ನಡೆಯುತ್ತಿದೆ. ಶಾಲಾರಂಭದ ಮೊದಲ ದಿನವೇ ಪುಸ್ತಕಗಳು ಮಕ್ಕಳ ಕೈ ಸೇರುವ ಸಾಧ್ಯತೆ ಇದೆ.