

| ಅವಿನಾಶ ಮೂಡಂಬಿಕಾನ ಬೆಂಗಳೂರು
ನಿರ್ಗತಿಕರು ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಭಿಕ್ಷಾಟನೆ ಈಗ ದಂಧೆಯಾಗಿ ಮಾರ್ಪಟ್ಟಿದೆ. ಭಿಕ್ಷಾಟನೆ ಮಾಫಿಯಾದಿಂದ ವಾರ್ಷಿಕ 260 ಕೋಟಿ ರೂ. ವ್ಯವಹಾರ ನಡೆಯುವ ಅಂದಾಜು ಮಾಡಲಾಗಿದೆ. ಬಡವರು ಹಾಗೂ ಅನಾಥ ಮಕ್ಕಳನ್ನು ಪಡೆದು, ಅವರಿಗೆ ನಿದ್ದೆ ಮಾತ್ರೆ ಅಥವಾ ಮಂಪರಿನ ಚುಚ್ಚು ಮದ್ದು ಕೊಟ್ಟು ಭಿಕ್ಷೆ ಬೇಡಲು ಬಳಸಿಕೊಳ್ಳುತ್ತಿರುವ ವಿಚಾರ ಬಹಿರಂಗವಾಗಿದೆ.
ಹಸುಗೂಸುಗಳನ್ನು ದಿನ ಬಾಡಿಗೆಗೆ ಪಡೆದು, ನಿದ್ದೆ ಮಾತ್ರೆ, ಗಾಂಜಾ ಸೊಪ್ಪಿನ ಹೊಗೆ, ಮದ್ಯ ಕುಡಿಸಿ ಅಥವಾ ಚುಚ್ಚು ಮದ್ದು ಕೊಟ್ಟು ಮಲಗಿಸಿ ಭಿಕ್ಷಾಟನೆ ನಡೆಸುವ ದಂಧೆ ಸಕ್ರಿಯವಾಗಿರುವ ವಿಚಾರವನ್ನು ರಾಜ್ಯ ಸರ್ಕಾರವೇ ಅಂಕಿ-ಅಂಶಗಳ ಸಮೇತ ಒಪ್ಪಿಕೊಂಡಿದೆ. ಕರ್ನಾಟಕ, ಮಹಾರಾಷ್ಟ್ರ, ಹೈದರಾಬಾದ್, ತಮಿಳುನಾಡು, ದೆಹಲಿ ರಾಜ್ಯಗಳಲ್ಲಿ ಭಿಕ್ಷಾಟನೆ ದಂಧೆ ಹೆಚ್ಚಿದೆ.
ಕರ್ನಾಟಕದಲ್ಲಿ ಭಿಕ್ಷಾಟನೆ ಮಾಫಿಯಾದಲ್ಲಿ ಸಿಲುಕಿದ್ದ 1,220 ಮಕ್ಕಳನ್ನು ಪೊಲೀಸರು ಪತ್ತೆಹಚ್ಚಿ, ಪುನರ್ವಸತಿ ಕಲ್ಪಿಸಿದ್ದಾರೆ. ಬೀದರ್, ಕಲಬುರಗಿ, ಮೈಸೂರು, ಬೆಂಗಳೂರು, ಹಾವೇರಿ, ಚಿತ್ರದುರ್ಗ, ರಾಮನಗರ, ಬಳ್ಳಾರಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. 2012ರಲ್ಲಿ ರಾಜ್ಯದಲ್ಲಿ ನಡೆಸಿರುವ ಭಿಕ್ಷುಕರ ಗಣತಿಯ ಪ್ರಕಾರ, 20,758 ಮಂದಿ ಭಿಕ್ಷುಕರಿರುವುದು ಗೊತ್ತಾಗಿದೆ. ರಾಜ್ಯ ರಾಜಧಾನಿಯೊಂದರಲ್ಲೇ 6 ಸಾವಿರಕ್ಕೂ ಅಧಿಕ ಭಿಕ್ಷುಕರಿರುವ ಮಾಹಿತಿ ಇದೆ. ಅನುಕಂಪ ಹೆಚ್ಚಾದಂತೆ ಹಣ ಹೆಚ್ಚು ಕೊಡುತ್ತಾರೆಂಬ ಕಾರಣಕ್ಕೆ 3ರಿಂದ 9 ವರ್ಷದೊಳಗಿನ ಚೆನ್ನಾಗಿರುವ ಮಕ್ಕಳ ಕೈ-ಕಾಲುಗಳನ್ನು ಊನಗೊಳಿಸುವುದು, ಮೈ-ಕೈಗೆ ಆಸಿಡ್ ಸುರಿಯುವುದು, ಅಂಗಾಂಗಗಳನ್ನೇ ಕತ್ತರಿಸಿ ಭಿಕ್ಷಾಟನೆಗೆ ತಳ್ಳಲಾಗುತ್ತಿದೆ.
ಮಾನವ ಕಳ್ಳಸಾಗಾಣೆ: ಉತ್ತರ ಪ್ರದೇಶ, ಒಡಿಶಾ, ಬಿಹಾರ್, ಪ.ಬಂಗಾಳ, ಜಾರ್ಖಂಡ್, ಅಸ್ಸಾಂ, ಆಂಧ್ರಪ್ರದೇಶ, ತಮಿಳುನಾಡಿನ ಗ್ರಾಮೀಣ ಭಾಗದ ಬಡ ಕುಟುಂಬಸ್ಥರನ್ನು ಸಂರ್ಪಸುವ ಏಜೆಂಟ್ಗಳು, ಕರ್ನಾಟಕದಲ್ಲಿರುವ ಗಾರ್ವೆಂಟ್ಸ್, ಕಾರ್ಖಾನೆಗಳಲ್ಲಿ ಕೆಲಸ ಕೊಡಿಸುವುದಾಗಿ ಮನವೊಲಿಸಿ ಮಹಿಳೆಯರನ್ನು ರೈಲಿನಲ್ಲಿ ಕರೆತರುತ್ತಾರೆ. ಇನ್ನು ಬಡ ಪಾಲಕರಿಗೆ ತಿಂಗಳಿಗೆ ಇಂತಿಷ್ಟು ಬಾಡಿಗೆ ಕೊಟ್ಟು ಹಸುಗೂಸುಗಳನ್ನೂ ಪಡೆಯುತ್ತಾರೆ. ಏಜೆಂಟ್ಗಳು ತಾವು ಕರೆತಂದ ಹಸುಗೂಸು ಮತ್ತು ಮಹಿಳೆಯರನ್ನು ದಂಧೆಕೋರರ ಸುಪರ್ಧಿಗೆ ಒಪ್ಪಿಸಿ ಕಮೀಷನ್ ಪಡೆದು ಮಾಯವಾಗುತ್ತಾರೆ. ಇತ್ತ ದಂಧೆಕೋರರು ಇವರಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸಿ ಭಿಕ್ಷಾಟನೆಗೆ ಬಿಡುತ್ತಾರೆ ಎಂದು ಮಾಹಿತಿ ನೀಡುತ್ತಾರೆ ಪೊಲೀಸ್ ಅಧಿಕಾರಿಗಳು.
ಭಿಕ್ಷಾಟನೆ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ. ಮಕ್ಕಳು ಹಾಗೂ ಮಹಿಳೆಯರನ್ನು ಭಿಕ್ಷಾಟನೆ ದಂಧೆಗೆ ದೂಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ಪೊಲೀಸರಿಗೆ ಮಾಹಿತಿ ನೀಡಬಹುದು. | ಕಮಲ್ ಪಂತ್ ಪೊಲೀಸ್ ಆಯುಕ್ತ, ಬೆಂಗಳೂರು
ನಿಮೂಲನೆಗೆ ಕ್ರಮವೇನು?: ಭಿಕ್ಷಾಟನಾ ನಿಷೇಧ ಕಾಯ್ದೆ 1975ರ ಅಡಿ ಭಿಕ್ಷೆಬೇಡುವ 16 ವರ್ಷ ಮೇಲ್ಪಟ್ಟ ಹುಡುಗ ಹಾಗೂ 18 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಬಂಧಿಸಿ, ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ರಕ್ಷಣೆ ನೀಡಲಾಗುತ್ತದೆ. 6 ವರ್ಷ ಮೇಲ್ಪಟ್ಟ ಮಕ್ಕಳಿದ್ದರೆ ಮಕ್ಕಳ ಕಲ್ಯಾಣ ಪಾಲನಾ ಕೇಂದ್ರಗಳಲ್ಲಿ ಆಶ್ರಯ ನೀಡಲಾಗುತ್ತದೆ. ಕಾಣೆಯಾಗಿರುವ ಮಕ್ಕಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ರಾಜ್ಯದಲ್ಲಿ 30 ಮಾನವ ಕಳ್ಳಸಾಗಾಣಿಕೆ ನಿಷೇಧ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆ, ಮಕ್ಕಳ ಉಚಿತ ಸಹಾಯವಾಣಿ 1098 ಸಹಯೋಗದೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳಿಂದ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ರಕ್ಷಣೆ ಮಾಡಲಾಗುತ್ತದೆ. ಸ್ಥಳೀಯ ಸಂಸ್ಥೆಗಳಿಂದ ಕಳೆದ 10 ವರ್ಷಗಳಿಂದ ಕೇಂದ್ರ ಪರಿಹಾರ ಸಮಿತಿ ನಿಧಿಗೆ 399.40 ಕೋಟಿ ರೂ. ಭಿಕ್ಷುಕರ ಸೆಸ್ ಜಮೆ ಮಾಡಲಾಗಿದೆ.