ಸೂಸೈಡ್​ ನಾಟಕವಾಡಿ ಮದುವೆಯಾದ; ಹೆಂಡತಿಯ ಒಡವೆಯನ್ನೆಲ್ಲ ಕದ್ದು ಓಡಿಹೋದ!

marriage
Published on

ಕೋಲ್ಕತ: ಫೇಸ್​ಬುಕ್​ನಲ್ಲಿ ಫ್ರೆಂಡ್​ ಆದ ವ್ಯಕ್ತಿಯೊಬ್ಬ, ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ನಾಟಕವಾಡಿ, ಮದುವೆಯಾದ ನಂತರ ಯುವತಿಯ ಬಂಗಾರವನ್ನೆಲ್ಲ ಕದ್ದು ಓಡಿ ಹೋಗಿರುವ ಘಟನೆ ಕೋಲ್ಕತದಲ್ಲಿ ನಡೆದಿದೆ.

ಕೋಲ್ಕತ ಮೂಲದ ಮಹಿಳೆಯೊಬ್ಬಳಿಗೆ ಹಿಮಾಚಲ ಮೂಲದ ವ್ಯಕ್ತಿಯ ಪರಿಚಯ ಫೇಸ್​ಬುಕ್​ ಮೂಲಕ ಆಗಿದೆ. ಈ ವಿಚಾರ ಯುವತಿಯ ಮನೆಯವರಿಗೂ ತಿಳಿದಿತ್ತು. ಅದಾದ ನಂತರ ಆತ ಇದ್ದಕ್ಕಿದ್ದಂತೆ ಮದುವೆ ಮಾಡಿಕೋ ಎಂದು ಹಟ ಹಿಡಿದಿದ್ದಾನೆ. ನೀನು ಮದುವೆಯಾಗದಿದ್ದರೆ ನಾನು ಬ್ಲೇಡ್​ನಿಂದ ಕತ್ತು ಕೊಯ್ದುಕೊಂಡು ಸಾಯುತ್ತೇನೆ ಎಂದು ಹೆದರಿಸಿದ್ದಾನೆ. ಅದಕ್ಕೂ ಆಕೆ ಒಪ್ಪದಿದ್ದಾಗ, ನೇರವಾಗಿ ಕೋಲ್ಕತಕ್ಕೆ ಬಂದು ಯುವತಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿದ್ದಾನೆ. ಅದಾದ ನಂತರ ಯುವತಿಯ ಮನೆಯವರು ಇಬ್ಬರ ಮದುವೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.

ಮದುವೆಯಾದ ವ್ಯಕ್ತಿ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಒಂದು ವರ್ಷ ಸಂಸಾರ ಚೆನ್ನಾಗಿಯೇ ನಡೆದಿದೆ. ಅದಾದ ಮೇಲೆ ಇದ್ದಕ್ಕಿದ್ದಂತೆ ಒಂದು ದಿನ ಆತ ಮನೆಯಲ್ಲಿದ್ದ ಒಂದು ಲಕ್ಷ ರೂಪಾಯಿ ಮತ್ತು ಹೆಂಡತಿಯ ಆಭರಣವನ್ನು ತೆಗೆದುಕೊಂಡು ಓಡಿ ಹೋಗಿದ್ದಾನೆ. ಅದಾದ ಮೇಲೆ ಆಕೆಯೊಂದಿಗಿನ ಸಂಪರ್ಕ ಸಂಪೂರ್ಣವಾಗಿ ಕಡಿದುಕೊಂಡಿದ್ದಾನೆ. ಈ ವಿಚಾರವಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಯುವತಿ ಆತನ ತಂದೆ ತಾಯಿಯ ಮನೆಗೂ ಹೋಗಿದ್ದಾಳೆ. ಆದರೆ ಅವರೂ ಕೂಡ ಅಲ್ಲಿಂದ ಪರಾರಿಯಾಗಿದ್ದು, ಮನೆಗೆ ಬೀಗ ಹಾಕಿರುವುದು ಕಂಡು ಬಂದಿದೆ.

ಇದೀಗ ಹಿಮಾಚಲ ಪ್ರದೇಶ ಪೊಲೀಸರು ಮತ್ತು ಕೋಲ್ಕತ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net