ಕ್ರಿಸ್​ಮಸ್​ಗೂ ಮುನ್ನ "ಎಲಿಯಟ್" ಶೀತ ಚಂಡಮಾರುತದಿಂದ ಕಂಗಾಲಾದ ಅಮೆರಿಕ!

Eliott
Published on
| ಬೆಂಕಿ ಬಸಣ್ಣ ನ್ಯೂಯಾರ್ಕ್

ಅಮೆರಿಕದ ಬಹುತೇಕ ಪ್ರದೇಶಗಳು ಭಯಾನಕ ಶೀತ ಚಂಡಮಾರುತ, ಹಿಮಪಾತ ಮತ್ತು ವರುಣನ ಆರ್ಭಟದಿಂದ ತತ್ತರಿಸಿವೆ. ಅಮೆರಿಕದ 10 ಕೋಟಿಗೂ ಹೆಚ್ಚು ಜನಸಂಖ್ಯೆ ಅಂದರೆ ಶೇ. 33ರಷ್ಟು ಜನಸಂಖ್ಯೆ ತೊಂದರೆಗೊಳಗಾಗಿದ್ದಾರೆ. ನ್ಯೂಯಾರ್ಕ್, ಕೆಂಟಕಿ, ಜಾರ್ಜಿಯ, ವೆಸ್ಟ್ ವರ್ಜಿನಿಯ, ಒಕ್ಲಹಾಮ, ನಾರ್ತ್ ಕೆರೋಲಿನ ಸೇರಿದಂತೆ ಅಮೆರಿಕದ ಅನೇಕ ರಾಜ್ಯಗಳಲ್ಲಿ ಎಮರ್ಜೆನ್ಸಿ ಘೋಷಿಸಲಾಗಿದೆ.

ಅಮೆರಿಕದಲ್ಲಿ ಬೀಸುತ್ತಿರುವ ಈ ಭೀಕರ ಬಾಂಬ್ ಸೈಕ್ಲೋನ್​ಗೆ "ಎಲಿಯಟ್" ( Elliott ) ಎಂದು ಹೆಸರಿಡಲಾಗಿದೆ. ಈ ತಲೆಮಾರಿನ ಅತ್ಯಂತ ಭೀಕರವಾದ ಹಿಮ ಚಂಡಮಾರುತ ಇದಾಗಿದ್ದು, ಮೈನಸ್ 20 ಡಿಗ್ರಿ ಸೆಲ್ಸಿಯಸ್ ಟೆಂಪರೇಚರ್ ಅರ್ಕಟಿಕ್ (arctic weather) ಸೃಷ್ಟಿ ಮಾಡಿದೆ. 1985ರ ನಂತರ ಸಂಭವಿಸಿದ ಅತಿ ಭಯಾನಕ ಹಿಮ ಮಾರುತ ಇದಾಗಿದೆ. ಕೆಲವು ಪ್ರದೇಶಗಳಲ್ಲಿ ಟೆಂಪರೇಚರ್ ಒಂದು ಗಂಟೆಯಲ್ಲಿಯೇ 40 ಡಿಗ್ರಿ ಸೆಲ್ಸಿಯಸ್​ಗಿಂತ ಒಮ್ಮೆಲೇ ಕಡಿಮೆಯಾಗಿದೆ.

ಅಮೆರಿಕದ ಉತ್ತರದ ಚಿಕಾಗೋ ನಗರಗಳಿಂದ ಹಿಡಿದು ದಕ್ಷಿಣದ ಅಟ್ಲಾಂಟಾ ಮತ್ತು ಟೆಕ್ಸಾಸ್​ವರೆಗೂ ವಿಪರೀತ ಚಳಿಯಾಗಲಿದೆ. ಕ್ರಿಸ್​ಮಸ್​ ರಜೆಗಳಿಗೆ ಹೋಗುತ್ತಿರುವ ಲಕ್ಷಾಂತರ ಪ್ರಯಾಣಿಕರು ಮಾರ್ಗ ಮಧ್ಯ ಸಿಕ್ಕಿಹಾಕಿಕೊಂಡು ಪರದಾಡುತಿದ್ದಾರೆ. ಒಂದೇ ದಿನದಲ್ಲಿ 2000ಕ್ಕೂ ಹೆಚ್ಚು ವಿಮಾನ ಪ್ರಯಾಣಗಳು ಕ್ಯಾನ್ಸಲ್ ಆಗಿವೆ.

ವಿಪರೀತ ಹವಾಮಾನದಿಂದಾಗಿ ಚಿಕಾಗೋ, ಡೆನ್ವರ್, ವಾಷಿಂಗ್ಟನ್, ಬೊಸ್ಟಾನ್ ಮತ್ತು ನ್ಯೂಯಾರ್ಕ್ ಹೀಗೆ ಅನೇಕ ನಗರದ ಬಹುತೇಕ ವಿಮಾನಗಳು ರದ್ದಾಗಿವೆ.

ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಜನರು ಅನವಶ್ಯಕವಾಗಿ ಪ್ರಯಾಣ ಮಾಡದಂತೆ, ಸಾಧ್ಯವಾದಷ್ಟು ಮನೆಯೊಳಗೇ ಇದ್ದು ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕಾಗಿ ಕರೆ ಕೊಟ್ಟಿದ್ದಾರೆ.

ಭಯಂಕರ ವಿಂಟರ್ ಸೈಕ್ಲೋನ್, ಮೂರು ಅಡಿಗೂ ಹೆಚ್ಚಿನ ಹಿಮಪಾತ ಮತ್ತು ಭಾರಿ ಮಳೆಗಳನ್ನು ಎದುರಿಸುವ ಸಲುವಾಗಿ ನ್ಯೂಯಾರ್ಕ್ ರಾಜ್ಯದ ಗವರ್ನರ್ ಕ್ಯಾತಿ ಹೋಕುಲ್ ಇಡೀ ರಾಜ್ಯಕ್ಕೆ ಎಮರ್ಜೆನ್ಸಿಯನ್ನು ಘೋಷಣೆ ಮಾಡಿದ್ದಾರೆ.

ಎಲಿಯಟ್ ಶೀತ ಚಂಡಮಾರುತವು ಗಂಟೆಗೆ 100ರಿಂದ 160 ಕಿ.ಮಿ. ವೇಗದಲ್ಲಿ ಬೀಸುತ್ತಿದೆ. ಇದರಿಂದ ಅನೇಕ ಪ್ರದೇಶಗಳಲ್ಲಿ ಮರಗಳು ಬಿದ್ದು, ವಿದ್ಯುತ್ ಶಕ್ತಿ ಕಡಿತಗೊಂಡಿದೆ, ಜನರು ವಿಪರೀತ ಚಳಿ ಮತ್ತು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ ಮತ್ತು ರಸ್ತೆಯ ಮೇಲಿನ ಸಂಚಾರ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿದೆ. ರಸ್ತೆಗಳ ಮೇಲೆ "ಬ್ಲ್ಯಾಕ್​ ಐಸ್" ಉಂಟಾಗಿದ್ದು ಇದು ಅತ್ಯಂತ ಅಪಾಯಕಾರಿಯಾಗಿದೆ. ಏಕೆಂದರೆ ಇದು ಪಾರದರ್ಶಕವಾಗಿದ್ದು, ತುಂಬಾ ಜಾರುವಂತಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net