ಬೆಂಕಿಚೆಂಡು ಸಾಧ್ವಿ; ಜೈಲಿನ ಯಮಯಾತನೆಗೂ ಜಗ್ಗಲಿಲ್ಲ

Untitled design (1)
Published on

ಯುಪಿಎ ಆಡಳಿತಾವಧಿಯಲ್ಲಿ ‘ಕೇಸರಿ ಭಯೋತ್ಪಾದನೆ’ ಎಂಬ ಸಂಕಥನ ಭಾರಿ ವಿವಾದವನ್ನೂ, ಚರ್ಚೆಯನ್ನೂ ಹುಟ್ಟುಹಾಕಿತ್ತು. ಇದಕ್ಕೆ ಕಾರಣವೇ ಮಾಲೆಗಾಂವ್ ಸ್ಫೋಟ ಪ್ರಕರಣ. ಆರೋಪಿಗಳು ಹಿಂದುಗಳಾಗಿದ್ದರಿಂದ, ಇದಕ್ಕೆ ಧರ್ಮದ ಲೇಪನ ಮಾಡಿ, ರಾಜಕೀಯ ಅಸ್ತ್ರವನ್ನಾಗಿ ಬಳಸಲಾಯಿತು. ಇಸ್ಲಾಂ ಭಯೋತ್ಪಾದನೆಯ ವಿರುದ್ಧ ಹಿಂದು ಭಯೋತ್ಪಾದನೆ ಎಂಬ ಸಂಕಥನ ಹರಿಬಿಡಲಾಯಿತು. ಆದರೆ, ಆರೋಪಿಗಳಿಗೆ ಮಹಾರಾಷ್ಟ್ರದ ಎಟಿಎಸ್ ಭಾರಿ ಕಿರುಕುಳ ನೀಡಿದ್ದು ಬಹಿರಂಗವಾಗುತ್ತಿದ್ದಂತೆ ತನಿಖೆಯನ್ನು ಎನ್​ಐಎಗೆ ವಹಿಸಲಾಯಿತು. ಕೊನೆಗೂ 17 ವರ್ಷಗಳ ದೀರ್ಘಾವಧಿಯ ನಂತರ ಅಂತಿಮ ತೀರ್ಪು ಬಂದಿದ್ದು, ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಸೇರಿದಂತೆ ಎಲ್ಲ ಏಳು ಆರೋಪಿಗಳು ಖುಲಾಸೆಗೊಂಡಿದ್ದಾರೆ. ಈ 17 ವರ್ಷಗಳಲ್ಲಿ ಸಾಧ್ವಿ ಅನುಭವಿಸಿದ ಯಾತನೆ, ನಡೆಸಿದ ಹೋರಾಟದ ಅವಲೋಕನ ಇಲ್ಲಿದೆ.

ಸಾಧ್ವಿ ಪ್ರಜ್ಞಾ ಸಿಂಗ್ ಮೊದಲಿನಿಂದಲೂ ದಿಟ್ಟೆ. ಅನ್ಯಾಯವನ್ನು ಕಂಡರೆ ಉರಿದು ಬೀಳುವ ಸ್ವಭಾವ. ಅದರಲ್ಲೂ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಸಹಿಸುತ್ತಲೇ ಇರಲಿಲ್ಲ. ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ಸದಾ ಗುಡುಗು. ವೇದಿಕೆಯಿಂದ ಅವರು ಭಾಷಣ ಮಾಡುತ್ತಿದ್ದರೆ ಮಾತು ಸಿಡಿಲಿನಂತೆ ಬಂದಪ್ಪಳಿಸುತ್ತಿತ್ತು. ಅವರ ವಾಗ್ಝರಿ ಎಂಥವರನ್ನೂ ಮೋಡಿಗೊಳಿಸುವಂಥದ್ದು. ಸಾವಿರ-ಸಾವಿರ ಜನರು ಸೇರಿದ ಸಭೆಗಳನ್ನು ಉದ್ದೇಶಿಸಿ ಪ್ರಖರವಾಗಿ ಮಾತನಾಡುತ್ತಿದ್ದರು. ಆಗಿನಿಂದಲೇ ಅವರನ್ನು ಹೇಗಾದರೂ ಹಣಿಯಬೇಕು ಎಂದು ರಾಷ್ಟ್ರವಿರೋಧಿ ಶಕ್ತಿಗಳು ಹೊಂಚು ಹಾಕುತ್ತಿದ್ದವು. ಆದರೂ, ಪ್ರಜ್ಞಾ ತಲೆ ಕೆಡಿಸಿಕೊಳ್ಳಲಿಲ್ಲ. ಜಿಹಾದಿ ಶಕ್ತಿಗಳ ವಿರುದ್ಧ ಕೆಂಡ ಕಾರುತ್ತಿದ್ದ ಸಾಧ್ವಿ ಗೋರಕ್ಷಣೆ, ಧರ್ಮರಕ್ಷಣೆಯ ಬಗ್ಗೆ ಹೋದಲೆಲ್ಲ ಮಾತನಾಡಿದರು. ನಿರಂತರ ಪ್ರವಾಸ, ಓಡಾಟ, ಭಾಷಣ, ಸಭೆಗಳಲ್ಲಿ ಬಿಜಿಯಾಗಿರುತ್ತಿದ್ದ ಅವರು ರಾಷ್ಟ್ರೀಯತೆ ವಿಚಾರ ಪ್ರತಿಪಾದನೆಯಿಂದ ಬಹುಬೇಗ ಪ್ರವರ್ಧಮಾನಕ್ಕೆ ಬಂದರು.

ಅದೆಷ್ಟೋ ಜನ ಪ್ರಜ್ಞಾರನ್ನು ಅನುಸರಿಸಲು ಆರಂಭಿಸಿದರು. ಅವರ ಭಾಷಣಕ್ಕೆ ಭಾರಿ ಬೇಡಿಕೆ ಬರತೊಡಗಿ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಾದ್ಯಂತ ಸಭೆಗಳು ಆಯೋಜಿತವಾದವು. ಸಾವಿರಾರು ಜನರು ಈ ಸಭೆಗಳಿಗೆ ಸೇರುತ್ತಿದ್ದದ್ದರಿಂದ ಹಿಂದುತ್ವದ ವಿಚಾರಧಾರೆಯನ್ನು ವಿರೋಧಿಸುತ್ತಿದ್ದವರ ಕಣ್ಣು ಕೆಂಪಾಯಿತು. ಯಾವುದಕ್ಕೂ ಕ್ಯಾರೆ ಎನ್ನದೆ ಬಿಂದಾಸ್ ಆಗಿ ಬದುಕಿದ ಸಾಧಿ್ವ ಜೈಲು ಸೇರಿದ ಮೇಲೆ ಮಾತ್ರ ಕೃಶರಾಗಿ ಹೋದರು. ಜೈಲಿನಲ್ಲಿನ ಕಿರುಕುಳ, ಹಿಂಸೆಗೆ ಆರೋಗ್ಯ ಪೂರ್ತಿ ಕ್ಷೀಣಿಸಿತು. ಎದ್ದು ಓಡಾಡಲೂ ಆಗದ ಸ್ಥಿತಿ ತಲುಪಿದ ಸಾಧ್ವಿ ಗಾಲಿಕುರ್ಚಿಯನ್ನೇ ಆಶ್ರಯಿಸಿದರು. ಆದರೂ, ಮನದಲ್ಲಿನ ಆಶಾವಾದದ ಕಿಡಿ ಆರಿರಲಿಲ್ಲ. ಈ ಎಲ್ಲ ಸ್ಥಿತಿಯಿಂದ ಗೆದ್ದು ಬರುತ್ತೇನೆ ಎಂಬ ವಿಶ್ವಾಸ ಹೊಂದಿದ್ದರು. ಈ ನಡುವೆ ಕ್ಯಾನ್ಸರ್ ಕಾಯಿಲೆ ಅಪ್ಪಳಿಸಿ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಿತು. ಭೋಪಾಲ್​ನ ಆಸ್ಪತ್ರೆಯಲ್ಲಿ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದುಕೊಂಡರು. ಅಂದಹಾಗೆ, ಪ್ರಜ್ಞಾ ಬೈಕ್ ಪ್ರಿಯೆ. ಊರಿನಲ್ಲಿ ಬೈಕ್ ಓಡಿಸುವ ಹೆಣ್ಣುಮಗಳೆಂದೇ ಖ್ಯಾತರಾದವರು.

ಸಂನ್ಯಾಸ ಸ್ವೀಕರಿಸುವ ಮುನ್ನ ತಾವೇ ಬೈಕ್​ನ್ನು ಓಡಿಸುತ್ತಿದ್ದರು. ಸಂನ್ಯಾಸ ಸ್ವೀಕರಿಸಿದ ಬಳಿಕ ಅನೇಕ ಸಂತ-ಮಹಂತರು, ಶಂಕರಾಚಾರ್ಯರು ಹಾಗೂ ಅಖಾಡಾಗಳ ಮುಖ್ಯಸ್ಥರ ಸಂಪರ್ಕಕ್ಕೆ ಬಂದ ಸಾಧ್ವಿ ಧಾರ್ವಿುಕ ನಗರಿ ಉಜ್ಜೈಯಿನಿ ಸೇರಿದಂತೆ ಹಲವು ನಗರಗಳಲ್ಲಿ ಪ್ರವಚನ ನೀಡಿದರು. ಅವರ ಪ್ರವಚನವೂ ಕ್ರಾಂತಿಕಾರಕ ವಿಚಾರಗಳಿಂದ ಕೂಡಿರುತ್ತಿತ್ತು. ಅಲ್ಲದೆ ಹಿಂದು ಧರ್ಮ ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆ-ಎಳೆಯಾಗಿ ವಿವರಿಸುತ್ತ, ‘ಹಿಂದುಗಳು ಒಗ್ಗಟ್ಟಾಗದಿದ್ದರೆ ಯಾವುದೇ ದೇವರು ಬಂದರೂ ಹಿಂದುಗಳನ್ನು ರಕ್ಷಿಸಲಾರ’ ಎಂದು ಎಚ್ಚರಿಸುತ್ತಿದ್ದರು. ಸಂತ-ಮಹಂತರೊಡನೆಯೂ ಧರ್ಮರಕ್ಷಣೆ ಕುರಿತು ಗಹನ ಚರ್ಚೆ ನಡೆಸುತ್ತಿದ್ದ ಸಾಧ್ವಿ ಗೋರಕ್ಷಣೆ ನಿಟ್ಟಿನಲ್ಲಿ ಸಹಕರಿಸುವಂತೆ ಕೋರುತ್ತಿದ್ದರು.

ಮದುವೆ ಪ್ರಸ್ತಾಪ ತಿರಸ್ಕರಿಸಿದ್ದರು

14ನೇ ವರ್ಷಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದ ಪ್ರಜ್ಞಾ ಮುಂದೆ ಸಂಘದ ವಿಚಾರಧಾರೆಗಳನ್ನು ಒಪ್ಪಿಕೊಂಡು, ಅದರ ಪ್ರಸಾರದಲ್ಲಿ ತೊಡಗಿಕೊಂಡರು. ವಿದ್ಯಾರ್ಥಿ ಸಂಘಟನೆಯಲ್ಲೂ ಸಕ್ರಿಯವಾಗಿ ಕೆಲಸ ಮಾಡಿದರು. ಕಾಲೇಜ್ ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನಲ್ಲಿ ತೊಡಗಿಸಿಕೊಂಡು ಆಗಲೇ ತಮ್ಮಲ್ಲಿನ ನಾಯಕತ್ವದ ಸಾಮರ್ಥ್ಯವನ್ನು ಪರಿಚಯಿಸಿದ್ದರು. ಪ್ರಜ್ಞಾರಿಂದ ಪ್ರಭಾವಿತರಾದ ಮಧ್ಯಪ್ರದೇಶದ ಮಾಜಿ ಶಾಸಕರೊಬ್ಬರು ಅವರ ಮುಂದೆ ವಿವಾಹದ ಪ್ರಸ್ತಾಪ ಇಟ್ಟಿದ್ದರು. ಆದರೆ, ಸಂಸಾರದ ಜಂಜಾಟಗಳಿಗೆ ಸಿಲುಕಿ ಹಾಕಿಕೊಳ್ಳದೆ ಅಧ್ಯಾತ್ಮ ಹಾಗೂ ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸಾಧ್ವಿ ಮದುವೆ ಪ್ರಸ್ತಾಪವನ್ನು ಸ್ಪಷ್ಟವಾಗಿ ಹಾಗೂ ಅಷ್ಟೇ ಸೌಜನ್ಯಯುತವಾಗಿ ತಳ್ಳಿಹಾಕಿದರು.

ಬಲವಾದ ಪುರಾವೆ ಇರಲೇ ಇಲ್ಲ!

ಮಹಾರಾಷ್ಟ್ರದ ಎಟಿಎಸ್ ಸಾಧ್ವಿ ಪ್ರಜ್ಞಾರನ್ನು ಬಂಧಿಸಿದಾಗ ಅವರ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯವಿರಲಿಲ್ಲ. ಬಾಂಬ್​ಗಳು ಇರಿಸಿದ್ದ ಎಲ್​ಎಮ್​ಲ್ ಫ್ರಿಡಂ ಬೈಕ್ ಪ್ರಜ್ಞಾರಿಗೆ ಸೇರಿದ್ದು, ಹಾಗಾಗಿ ಪ್ರಕರಣದಲ್ಲಿ ಅವರ ಕೈವಾಡ ಇದೆಯೆಂದು ಎಟಿಎಸ್ ವಾದಿಸಿತ್ತು. ಆದರೆ, ಈ ಬಾಂಬ್​ಸ್ಪೋಟ ಘಟಿಸುವ ನಾಲ್ಕು ವರ್ಷಗಳ ಮುನ್ನವೇ ಅಂದರೆ 2004ರಲ್ಲಿ ಸಾಧ್ವಿ ಈ ಬೈಕ್​ನ್ನು 24 ಸಾವಿರ ರೂಪಾಯಿಗೆ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು. 2006ರಿಂದ ಈ ಬೈಕ್​ನ್ನು ರಾಮಚಂದ್ರ ಕಲಸಂದ್ರಾ ಎಂಬಾತ ನಡೆಸುತ್ತಿದ್ದ. ವರ್ಷಗಳ ಹಿಂದೆಯೇ ಮಾರಾಟ ಮಾಡಿದ್ದ ಬೈಕ್​ಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಜ್ಞಾ ವಿಚಾರಣೆ ವೇಳೆ ಹಲವು ಬಾರಿ ಸ್ಪಷ್ಟಪಡಿಸಿದ್ದರು. ಆದರೂ, ಸ್ಪಷ್ಟ ಸಾಕ್ಷ್ಯಾಧಾರಗಳು ಇಲ್ಲದಿದ್ದಾಗಲೂ ಎಂಟು ವರ್ಷಕ್ಕೂ ಅಧಿಕ ಅವಧಿಗೆ ಅವರನ್ನು ಜೈಲಿನಲ್ಲಿ ಇರಿಸಲಾಯಿತು. ಜುಲೈ 31ರಂದು ತೀರ್ಪು ನೀಡಿರುವ ಎನ್​ಐಎ ವಿಶೇಷ ನ್ಯಾಯಾಲಯವು ಸಾಧಿ್ವ ವಿರುದ್ಧ ಯಾವುದೇ ಸ್ಪಷ್ಟ ಸಾಕ್ಷ್ಯಾಧಾರಗಳಿಲ್ಲ ಎಂದಿದೆ.

ಸೂರತ್​ನಲ್ಲಿ ಆಶ್ರಮ

ಮಧ್ಯಪ್ರದೇಶದಲ್ಲಿ ಹುಟ್ಟಿ ಬೆಳೆದರೂ ಸಾಧಿ್ವ ಆಶ್ರಮ ಸ್ಥಾಪಿಸಿಕೊಂಡಿದ್ದು ಗುಜರಾತ್​ನ ಸೂರತ್​ನಲ್ಲಿ. ತಮ್ಮ ತವರು ರಾಜ್ಯದ ಹಲವು ಶಿಷ್ಯಂದಿರಿಗೆ ಇದೇ ಆಶ್ರಮದಲ್ಲಿ ಆಶ್ರಯ ನೀಡಿದ್ದಾರೆ.

ಜೈಲಿನಿಂದ ಪತ್ರ

ಸಾಧ್ವಿ ಪ್ರಜ್ಞಾ ಸಿಂಗ್ 2009ರ ಜುಲೈ 19ರಂದು ಮಾಧ್ಯಮಗಳಿಗೆ ಪತ್ರ ಬರೆದು ಜೈಲಿನಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ವಿವರಣೆ ನೀಡಿದ್ದರು. ಆದರೆ, ರಾಷ್ಟ್ರೀಯ ಮಾಧ್ಯಮಗಳು ಸಾಧಿ್ವು ಆಕ್ರಂದನಕ್ಕೆ ಸ್ಪಂದಿಸಲಿಲ್ಲ. ‘ನನ್ನನ್ನು ಅತ್ಯಂತ ದಾರುಣವಾಗಿ ಹಿಂಸಿಸಲಾಗುತ್ತಿದೆ. ಎಟಿಎಸ್ ಪೊಲೀಸರು ಕೈಯಿಂದ, ಬೆಲ್ಟಿನಿಂದ ಹಲ್ಲೆ ಮಾಡಿದ್ದಾರೆ. ಕಾಲಿನಿಂದ ಒದ್ದಿದ್ದಾರೆ. ನನ್ನ ಅನುಮತಿ ಇಲ್ಲದೆಯೇ ಸುಳ್ಳು ಪತ್ತೆ ಪರೀಕ್ಷೆ, ನಾಕೋ ಟೆಸ್ಟ್ ಮಾಡಿದ್ದಾರೆ. ಹೀಗೇ ಆದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದಿದ್ದರು. ಆದರೆ, ಈ ಇಡೀ ಪ್ರಕರಣದ ಬಗ್ಗೆ ಮಾನವ ಹಕ್ಕು ಹೋರಾಟಗಾರರು ಕೂಡ ಮೌನವಹಿಸಿದ್ದರು. ಮಾತ್ರವಲ್ಲ, 2010ರಲ್ಲಿ ಪ್ರಜ್ಞಾ ತೀವ್ರ ಅನಾರೋಗ್ಯ ಪೀಡಿತರಾದರು. ‘ಒಂದು ವಾರ ಕಾಲ ಊಟ ನಿರಾಕರಿಸಿ ಅನಾರೋಗ್ಯಪೀಡಿತರಾಗಿದ್ದರಿಂದ ಆಸ್ಪತ್ರೆಗೆ ಸೇರಿಸಿ ಆತ್ಮಹತ್ಯೆಯ ಆರೋಪ ಹೊರಿಸಲಾಗಿದೆ’ ಎಂದು ಸಾಧ್ವಿ ಆರೋಪಿಸಿದರು.

ಕೌಟುಂಬಿಕ ಹಿನ್ನೆಲೆ

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಕಛ್ವಾಹಾ ಗ್ರಾಮದಲ್ಲಿ 1970ರ ಫೆಬ್ರವರಿ 2ರಂದು ಜನಿಸಿದ ಪ್ರಜ್ಞಾರ ಮೂಲ ಹೆಸರು ಪ್ರಜ್ಞಾ ಸಿಂಗ್ ಠಾಕೂರ್. (ಶಿಕ್ಷಣ ಎಂ.ಎ, ಬಿ.ಎಡ್) ಇವರ ತಂದೆ ಡಾ.ಚಂದ್ರಪಾಲ್ ಸಿಂಗ್ ಠಾಕೂರ್ ಆಯುರ್ವೆದ ವೈದ್ಯರು. ಇವರು ಕಛ್ವಾಹಾ ಗ್ರಾಮದ ಗಲ್ಲಾ ಮಂಡಿ ರಸ್ತೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಠಾಕೂರ್ ಆರ್​ಎಸ್​ಎಸ್ ಸ್ವಯಂಸೇವಕರಾಗಿದ್ದರು. ತಂದೆಯಿಂದಲೇ ಮಗಳಿಗೆ ಹಿಂದುತ್ವ ವಿಚಾರಧಾರೆಯ ಶಿಕ್ಷಣ ದೊರೆತಿದ್ದು. ಚಂದ್ರಪಾಲ್ ಅವರಿಗೆ ನಾಲ್ವರು ಹೆಣ್ಣುಮಕ್ಕಳು, ಒಬ್ಬ ಗಂಡುಮಗ. ಈ ಪೈಕಿ ಪ್ರಜ್ಞಾ 2ನೇ ಪುತ್ರಿ. 1993ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದ ಪ್ರಜ್ಞಾ ಸಂಘಟನೆಯಲ್ಲಿ ಹಂತ-ಹಂತವಾಗಿ ಬೆಳೆದು ಮಧ್ಯಪ್ರದೇಶ ರಾಜ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವ ಹಿಸಿದರು. 1997ರಲ್ಲಿ ಹಿಂದು ಜಾಗರಣ್ ಮಂಚ್​ನೊಂದಿಗೆ ಕೆಲಸ ಆರಂಭಿಸಿದರು.

ಭಯೋತ್ಪಾದನೆ ಯಾವತ್ತೂ ಕೇಸರಿಯಾಗಿರಲಿಲ್ಲ. ಮುಂದೆಯೂ ಹಾಗೆ ಇರುವುದಿಲ್ಲ. ಕೊನೆಗೂ ಸತ್ಯಕ್ಕೆ ಗೆಲುವಾಗಿದೆ. | ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ

ದಿಗ್ವಿಜಯ್ ವಿರುದ್ಧ ಭಾರಿ ಗೆಲುವು

ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ 2019ರ ಚುನಾವಣೆಗೆ ಬಿಜೆಪಿ ಅಚ್ಚರಿ ಅಭ್ಯರ್ಥಿಯನ್ನಾಗಿ ಸಾಧ್ವಿ ಪ್ರಜ್ಞಾ ಸಿಂಗ್​ರನ್ನು ಕಣಕ್ಕಿಳಿಸಿತು. ಅಲ್ಲಿ ಅವರಿಗೆ ಪ್ರತಿಸ್ಪರ್ಧಿಯಾಗಿ ಇದ್ದದ್ದು ಕಾಂಗ್ರೆಸ್​ನ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್. ‘ಇಲ್ಲಿ ಬಿಜೆಪಿಯ ರಾಜಕೀಯ ಲೆಕ್ಕಾಚಾರ ತಪ್ಪಾಗಲಿದೆ’ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಆದರೆ, ಸಾಧ್ವಿ 3.64 ಲಕ್ಷ ಮತಗಳ ಭರ್ಜರಿ ಅಂತರದಿಂದ ಸಿಂಗ್​ರನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದರು. ಮುಂದೆ ವಿವಾದಿತ ಹೇಳಿಕೆಗಳಿಂದ ಬಿಜೆಪಿಗೆ ಮುಜುಗರ ಸೃಷ್ಟಿಸಿದ್ದರಿಂದ 2024ರ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net