

Child Marriage: ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಪರಾಧ ಎಂದು ಗೊತ್ತಿದ್ದರೂ ಹಲವರು ಈ ಕೃತ್ಯಕ್ಕೆ ಕೈಹಾಕುತ್ತಿರುವುದು ತೀರ ಶೋಚನೀಯ. ಬಾಲ್ಯ ವಿವಾಹಗಳನ್ನು ತಡೆಯಲು ಸರ್ಕಾರಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ಬಗ್ಗೆ ಜಾಗೃತಿ ಮೂಡಿಸಲು ಹಲವು ರೀತಿಯ ಪ್ರಯತ್ನಗಳಲ್ಲಿ ತೊಡಗಿದೆ. ಆದಾಗ್ಯೂ, ದೇಶದಲ್ಲಿ ಎಲ್ಲೋ ಒಂದು ಕಡೆ ಇಂತಹ ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಇದು ನಿಜಕ್ಕೂ ಬೇಸರದ ಸಂಗತಿ.
ಇಂತಹದ್ದೇ ಪ್ರಕರಣವೊಂದು ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯ ನಂದಿಗಾಮದಲ್ಲಿ ವರದಿಯಾಗಿದೆ. 13 ವರ್ಷದ ಬಾಲಕಿಯನ್ನು 40 ವರ್ಷದ ವ್ಯಕ್ತಿಗೆ ಕೊಟ್ಟು ಮದುವೆ ಮಾಡಲಾಗಿದೆ. ಬಾಲಕಿಗೆ ಓದುವ ಆಸೆಯಿದ್ದರೂ ತಾಯಿಯೇ ಬಲವಂತವಾಗಿ ಮಗಳಿಗೆ ವಿವಾಹ ಮಾಡಿಸಿದ್ದಾರೆ. ಇದಕ್ಕೆ ಬಲವಾದ ಕಾರಣವೂ ಇದೆ. ಪತಿ ಅಕಾಲಿಕ ಮರಣ ಹೊಂದಿದ ಬಳಿಕ ಇಬ್ಬರು ಹೆಣ್ಣುಮಕ್ಕಳನ್ನು ಸಾಕುವ ಸಂಪೂರ್ಣ ಜವಾಬ್ದಾರಿ ತನ್ನ ಮೇಲೆ ಬಿದ್ದ ಹಿನ್ನಲೆ ಮುಂದೇನು ಮಾಡಬೇಕೆಂದು ತೋಚದೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾಗಿ ಮಹಿಳೆ ಅಳಲು ವ್ಯಕ್ತಪಡಿಸಿದ್ದಾರೆ.
ಮಗಳು ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕುಟುಂಬದ ನಿರ್ವಹಣೆ ಹೊರೆಯಾಗಿದ್ದರಿಂದ, ಅವಳನ್ನು 40 ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಲು ಚಿಂತಿಸಿದೆ. ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಮಂಡಲದ ಕಾಂಡಿವಾಡ ನಿವಾಸಿ ಶ್ರೀನಿವಾಸ್ಗೆ ಒಳ್ಳೆಯ ಆಸ್ತಿ ಇದೆ ಎಂದು ಬ್ರೋಕರ್ ನನಗೆ ತಿಳಿಸಿದರು. ಹೀಗಾಗಿ, ಪುತ್ರಿಯನ್ನು ಅವರಿಗೆ ಮದುವೆ ಮಾಡಿಕೊಡಲು ಒಪ್ಪಿಕೊಂಡೆ ಎಂದಿದ್ದಾರೆ.
ತಾನು ಓದುತ್ತಿದ್ದ ಶಾಲಾ ಶಿಕ್ಷಕರಿಗೆ ಈ ವಿಚಾರವನ್ನು ತಿಳಿಸಿದ ಬಾಲಕಿ, ನನಗೆ ಮದುವೆ ಇಷ್ಟವಿಲ್ಲ. ನಾನಿನ್ನು ಓದಬೇಕು ಸರ್ ಎಂದು ಕಣ್ಣೀರಾಕಿದ್ದಾಳೆ. ಘಟನೆ ಬಗ್ಗೆ ಮಾಹಿತಿ ಕಲೆಹಾಕಿದ ಶಿಕ್ಷಕ, ಕೂಡಲೇ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಖಾಕಿ ಪಡೆ, ಬಾಲಕಿಯ ತಾಯಿ, ಅರ್ಚಕ ಶ್ರೀನಿವಾಸ್ ಗೌಡ ಮತ್ತು ಮಧ್ಯವರ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಐಸಿಡಿಎಸ್ ಅಧಿಕಾರಿಗಳ ಸಹಾಯದಿಂದ ಪೊಲೀಸರು ಬಾಲಕಿಯನ್ನು ಸಖಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ,(ಏಜೆನ್ಸೀಸ್).