ಜಮೀನಿಗೆ ಹೋಗುತ್ತಿದ್ದ ರೈತನ ಮೇಲೆರಗಿದವು ಕರಡಿಗಳು: ಇಂದು ಬೆಳ್ಳಂಬೆಳಗ್ಗೆ ನಡೆದ ದಾಳಿ!

Bear
Published on

ದಾವಣಗೆರೆ: ಜಿಲ್ಲೆಯ ವಿವಿಧ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕರಡಿ ಉಪಟಳ ಹೆಚ್ಚಾಗಿದ್ದು, ಪದೇಪದೆ ಕರಡಿ ದಾಳಿ ಘಟನೆಗಳು ಸುದ್ದಿಯಾಗುತ್ತಲೇ ಇವೆ. ಶುಕ್ರವಾರ ಬೆಳ್ಳಂಬೆಳಗ್ಗೆಯೇ ಇಂಥದ್ದೇ ಘಟನೆ ಮರುಕಳಿಸಿದ್ದು ರೈತನ ಮೇಲೆ ಹಿಂಬದಿಯಿಂದ ದಾಳಿ ಎಸಗಿರುವುದು ಕಂಡುಬಂದಿದೆ.

ಈ ಕರಡಿ ದಾಳಿ ಘಟನೆ ಜಗಳೂರು ತಾಲೂಕಿನ ಬಸವನ ಕೋಟೆ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಮುಂಜಾನೆ ರೈತ ದುರುಗಪ್ಪ ತಮ್ಮ ಜಮೀನಿಗೆ ಹೋಗುವ ದಾರಿಯ ಮಧ್ಯೆ ಕರಡಿಗಳು ದಾಳಿ ನಡೆಸಿವೆ. ಕರಡಿಗಳು ಹಿಂಬದಿಯಿಂದ ಬರುತ್ತಿದ್ದುದು ದುರುಗಪ್ಪ ಅವರ ಅರಿವಿಗೆ ಬಂದಿರಲಿಲ್ಲ. ದಾಳಿ ನಡೆಸಿದ ಮೇಲೆ ತಿರುಗಿ ನೋಡಿದಾಗ ಎರಡು ಕರಡಿಗಳಿರುವುದನ್ನು ಅವರು ಗಮನಿಸಿದ್ದರು. ಈ ದಾಳಿಯ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು ಹೀಗೆ-

"ಬೆಳಗ್ಗೆ ಜಮೀನಿಗೆ ಹೊರಟಿದ್ದೆ. ದಾರಿ ಮಧ್ಯೆ ಹಿಂಬದಿಯಿಂದ ಕರಡಿಗಳು ಬರುತ್ತಿರುವುದು ಗಮನಕ್ಕೆ ಬಂದಿರಲಿಲ್ಲ. ಅವುಗಳು ದಿಢೀರ್ ದಾಳಿ ನಡೆಸಿದಾಗ ಭಯಭೀತನಾಗಿ ಹಿಂದಕ್ಕೆ ತಿರುಗಿ ನೋಡಿದ್ದೆ. ಅವು ದಾಳಿ ಎಸಗುವಷ್ಟರಲ್ಲಿ ಸತ್ತವನಂತೆ ಮಲಗಿ ಬಿಟ್ಟೆ. ಉಸಿರು ಬಿಗಿ ಹಿಡಿದಿದ್ದೆ. ಕಾಲಿನ ಮೇಲೆ ಪರಚಿ ಗಾಯ ಮಾಡಿದ ಅವುಗಳು ಬಳಿಕ ಹಿಂದಿರುಗಿದವು. ರಕ್ತ ಸೋರುತ್ತಿದ್ದ ಕಾಲುಗಳೊಂದಿಗೆ ಹಾಗೇ ಊರಿಗೆ ಮತ್ತೆ ಓಡೋಡಿ ಬಂದೆ" ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ.

ಗ್ರಾಮಸ್ಥರು ಕೂಡಲೇ ಆ್ಯಂಬುಲೆನ್ಸ್​ಗೆ ಕರೆ ಮಾಡಿ, ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿ ಅವರೀಗ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net