

ಶಿಕಾರಿಪುರ: ಜೀವ ಕೊಡುವವನು ಭಗವಂತನಾದರೆ, ಜೀವ ಉಳಿಸುವವರು ವೈದ್ಯರು. ಆದ್ದರಿಂದಲೇ ನಾವು ವೈದ್ಯರನ್ನು ವೈದ್ಯೋನಾರಾಯಣೋ ಹರಿ ಎಂದು ಕರೆಯಲಾಗುತ್ತದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ಮಾರವಳ್ಳಿ ಹೇಳಿದರು.
ಕರ್ನಾಟಕ ಜನಪರ ವೇದಿಕೆ ಸಂಘಟನೆಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ತಾಯಿ ಮತ್ತು ಮಕ್ಕಳ ಸಾರ್ವಜನಿಕ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿ ಮಾತನಾಡಿದರು.
ವೈದ್ಯರನ್ನು ಬಹಳ ಸೌಜನ್ಯದಿಂದ ಕಾಣಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಅವರ ಕಾಳಜಿಯಿಂದ ಆಸ್ಪತ್ರೆ ಮೇಲ್ದರ್ಜೆಗೆ ಏರಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ. ಶಿವಾನಂದ, ಜೀವ ಉಳಿಸುವುದು ಮತ್ತು ರೋಗಿಗಳನ್ನು ಆರೈಕೆ ಮಾಡುವುದು ವೈದ್ಯರಾದ ನಮ್ಮ ಜವಾಬ್ದಾರಿ. ಉತ್ತಮ ಕಾರ್ಯ ನಿರ್ವಹಣೆಗೆ ಆಸ್ಪತ್ರೆಯ ಎಲ್ಲ ವೈದ್ಯರು ಮತ್ತು ಸಿಬ್ಬಂದಿ ಶ್ರಮ ಕೂಡ ಇದೆ ಎಂದು ತಿಳಿಸಿದರು.
ಜಯ ಕರ್ನಾಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಮಾತನಾಡಿ, ಈ ಹಿಂದೆ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಈಗ ತಾಲೂಕು ಕೇಂದ್ರದಲ್ಲಿಯೇ ಸುಸಜ್ಜಿತ ಆಸ್ಪತ್ರೆ ಇದೆ. ವೃತ್ತಿಪರ ವೈದ್ಯರು ಮತ್ತು ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಜಯಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಶಿವಯ್ಯ ಎನ್. ಶಾಸ್ತ್ರಿ ಮಾತನಾಡಿದರು. ಮೆಗ್ಗಾನ್ ಆಸ್ಪತ್ರೆ ಸ್ತ್ರೀರೋಗ ತಜ್ಞರಾದ ಡಾ. ಗೀತಾ, ಡಾ. ಪ್ರಕಾಶ್, ಡಾ. ಪೂಜಾ, ಅರಿವಳಿಕೆ ತಜ್ಞೆ ಡಾ. ಲಕ್ಷ್ಮೀ, ವೈಲೆಟ್ ಲೋಬೋ, ಕೋಕಿಲ, ಭಾಗೀರಥಿ ಮತ್ತಿತರರನ್ನು ಸನ್ಮಾನಿಸಲಾಯಿತು.
ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್, ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಘುವೀರ್ ಸಿಂಗ್, ಇಮ್ರಾನ್, ಸಂತೋಷ್, ವಿಜಯಕುಮಾರ್, ಶಿವರಾಜ್, ಆನಂದ, ಅಕ್ಬರ್ ಆಲಿ, ಪೈಲ್ವಾನ್ ಹುಸೇನ್ ಸಾಬ್, ರವೀಂದ್ರ, ಶಿವು, ಹರೀಶ್ ಇತರರಿದ್ದರು.