ಕಡತಗಳ ವಿಲೇವಾರಿ, ಹುಷಾರಾಗಿರಿ...: ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

Bommai F
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ಆರ್ಥಿಕ, ತಾಂತ್ರಿಕ ಹಾಗೂ ಆಡಳಿತಾತ್ಮಕ ಸೇರಿ ಯಾವುದೇ ಸ್ವರೂಪದ ಕಡತಗಳ ವಿಲೇವಾರಿಗೆ ಮುನ್ನ ತಮ್ಮ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ನೀಡಿದ್ದಾರೆ. ಪ್ರತಿಯೊಂದು ಅಂಶವನ್ನು ಕೂಲಂಕಷವಾಗಿ ಪರಿಶೀಲಿಸಿ, ದಕ್ಷ ಹಾಗೂ ಚುರುಕಿನಿಂದ ಕೆಲಸ ಮಾಡಿ ತ್ವರಿತವಾಗಿ ಅನುಮೋದನೆ ನೀಡಬೇಕು ಎಂಬ ಸಲಹೆ ನೀಡಿದ್ದಾರೆ.

ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಸೇರಿ ಕೆಲವು ಹಿರಿಯ ಅಧಿಕಾರಿಗಳ ಜತೆಗೆ ಬೊಮ್ಮಾಯಿ ಈ ಕುರಿತು ರ್ಚಚಿಸಿದ್ದಾರೆ. ಎಲ್ಲ ಇಲಾಖೆಗಳ ಪ್ರಮುಖ, ಮಹತ್ವದ ಕಡತಗಳು ಇನ್ನುಮುಂದೆ ತಮ್ಮ ಕಣ್ಣು ತಪ್ಪಿಸಿ ವಿಲೇವಾರಿ ಮಾಡುವಂತಿಲ್ಲ, ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡುವಂತೆ ಬೊಮ್ಮಾಯಿ ಸಲಹೆಯಿತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಉನ್ನತಾಧಿಕಾರಿಗಳಿಗೆ ಖಡಕ್ ಸೂಚನೆ ನೀಡುವ ಮೂಲಕ ಉಳಿದ ಅಧಿಕಾರಿಗಳಿಗೆ ಬೊಮ್ಮಾಯಿ ತಮ್ಮ ನಿಲುವು ಏನೆಂಬ ಸಂದೇಶ ರವಾನಿಸಿದ್ದಾರೆ. ಆ ಮೂಲಕ ಆಡಳಿತದ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದು, ಯಾರೋ ಹೇಳಿದರು ಅಥವಾ ತುರ್ತು ಅಗತ್ಯದ ನೆಪವೊಡ್ಡಿ ತರಾತುರಿಯಲ್ಲಿ ಕಡತ ವಿಲೇವಾರಿಗೆ ಅವಕಾಶವಿಲ್ಲ. ಕಾನೂನು, ಆಡಳಿತಾತ್ಮಕ ಸಿಕ್ಕುಗಳಿದ್ದರೆ ಕೂಡಲೇ ಗಮನಕ್ಕೆ ತಂದು ರ್ಚಚಿಸಿ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದು ಹೇಳುವ ಮೂಲಕ ಅಧಿಕಾರಿಗಳಲ್ಲಿ ಆತ್ಮವಿಶ್ವಾಸ ತುಂಬಲು ಪ್ರಯತ್ನಿಸಿದ್ದಾರೆ. ಪರಿಶೀಲನೆ ಹೆಸರಲ್ಲಿ ಕಾಲಹರಣ, ಅನಗತ್ಯ ವಿಳಂಬ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಲಿದ್ದು, ಈ ಧೋರಣೆಯನ್ನು ಸಹಿಸುವುದಿಲ್ಲ ಎನ್ನುವ ಎಚ್ಚರಿಕೆ ಕೊಟ್ಟಿದ್ದಾರೆ.

ವಿಶ್ವಾಸ ಗಳಿಸಲು ತಾಲೀಮು: ಮುಖ್ಯಮಂತ್ರಿ ಹುದ್ದೆ ಆಯ್ಕೆಗೂ ಮುನ್ನ, ನಂತರದಲ್ಲಿ ಪಕ್ಷ ಹಾಗೂ ಸಂಘ-ಪರಿವಾರದಲ್ಲಿನ ಆಂತರಿಕ ಬೆಳವಣಿಗೆ, ಸೂಕ್ಷ್ಮ ವಿಚಾರಗಳನ್ನು ಬೊಮ್ಮಾಯಿ ಗ್ರಹಿಸಿದ್ದಾರೆ. ಮುಕ್ತ, ‘ಜನತಾ ಪರಿವಾರ’ದವರು ಎಂಬ ಮುದ್ರೆ ಅಳಿಸಿ ಹಾಕಿ, ಬಿಜೆಪಿ ಶಿಸ್ತಿನ ಸಿಪಾಯಿ ಹಾಗೂ ಸಂಘ ನಿಷ್ಠರೆಂದು ಛಾಪು ಮೂಡಿಸುವುದಕ್ಕೆ ಶ್ರಮಿಸುತ್ತಿದ್ದಾರೆ.

ಆರು ತಿಂಗಳ ಗಡುವು: ಸ್ವಚ್ಛ, ದಕ್ಷ ಆಡಳಿತ, ಯೋಜನೆಗಳು ಹಾಗೂ ಕಾರ್ಯ ಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಸಲು ಬೊಮ್ಮಾಯಿಗೆ ‘ಸಂಘ’ ಆರು ತಿಂಗಳ ಗಡುವು ನೀಡಿದೆ ಎಂದು ಮೂಲಗಳು ಹೇಳಿವೆ. ‘ಇವ ನಮ್ಮವ’ ಎನ್ನುವ ರೀತಿಯಲ್ಲಿ ಕಾರ್ಯನಿರ್ವಹಿಸಿ, ಪಕ್ಷದ ಕಾರ್ಯಕರ್ತರು ಹಾಗೂ ಜನಸಾಮಾನ್ಯರಲ್ಲಿ ಮಡುಗಟ್ಟಿದ ಆಕ್ರೋಶ ತಮಣಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ. ವಿವಿಧ ಮುಖ್ಯಮಂತ್ರಿಗಳ ಜತೆಗಿನ ಕೆಲಸ ಹಾಗೂ ಆಡಳಿತದ ಅನುಭವವನ್ನು ಬೊಮ್ಮಾಯಿ ಸರಿಯಾಗಿ ಬಳಸಿಕೊಂಡು, ಬಹುಬೇಗ ಟೇಕ್​ಆಫ್ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ‘ಸಂಘ’, ಬಿಜೆಪಿಯ ಕೆಲ ಹಿರಿ ತಲೆಗಳಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net