ಸಾಮಾಜಿಕ ಜಾಲತಾಣಗಳ ಮೇಲಿರಲಿ ಎಚ್ಚರ

kgl sabhe
ಕಾರ್ಗಲ್ನಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಸಾಗರ ಗ್ರಾಮಾಂತರ ಸಿಪಿಐ ಸಂತೋಷ್ ಶೆಟ್ಟಿ ಮಾತನಾಡಿದರು. ನಾಗರಾಜ್, ಪ್ರದೀಪ್, ನಾಗೇಂದ್ರ, ವಿ.ಸಂತೋಷ್‌ಕುಮಾರ್ ಇತರರಿದ್ದರು.
Published on

ಕಾರ್ಗಲ್: ಕೃತಕ ಬುದ್ಧಿಮತ್ತೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಸಂದೇಶಗಳು ಹಾಗೂ ಗಾಳಿ ಸುದ್ದಿಗಳನ್ನು ಹಬ್ಬಿಸುವವರ ಬಗ್ಗೆ ಎಚ್ಚರವಿರಲಿ ಎಂದು ಸಾಗರ ಗ್ರಾಮಾಂತರ ಸಿಪಿಐ ಸಂತೋಷ್ ಶೆಟ್ಟಿ ಹೇಳಿದರು.

ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಸೋಷಿಯಲ್ ಮೀಡಿಯಾಗಳಲ್ಲಿ ಇಂತಹ ಸಂದೇಶಗಳು ಕಂಡುಬಂದಲ್ಲಿ ಸೂಕ್ತ ರೀತಿ ಪರಾಮರ್ಶಿಸಬೇಕು. ಜತೆಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಅತ್ಯಂತ ಶಾಂತ ರೀತಿಯಿಂದ ಹಬ್ಬಗಳನ್ನು ಆಚರಿಸುವ ಮೂಲಕ ಸಮಾಜದ ಸ್ವಾಸ್ಥೃವನ್ನು ಕಾಪಾಡಬೇಕು ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಮಾತನಾಡಿ, ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಸಮಿತಿಗಳಿಗೆ ಅನುಮತಿ ನೀಡಲು ಅಲೆದಾಡುವುದನ್ನು ತಪ್ಪಿಸಲು ಕಾರ್ಗಲ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸುವ ಎಲ್ಲ ಗಣಪತಿ ವಿಗ್ರಹಗಳಿಗೆ ವಿಶೇಷವಾಗಿ ತಾಲೂಕು ಆಡಳಿತದಿಂದ ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಪೊಲೀಸ್ ಇಲಾಖೆ, ಪಪಂ, ಮೆಸ್ಕಾಂ ಹಾಗೂ ನಾಡಕಚೇರಿ ಅಧಿಕಾರಿಗಳು ಇರಲಿದ್ದು, ಅನುಮತಿಗಾಗಿ ಬೇಕಾದ ವ್ಯವಸ್ಥೆಯನ್ನು ಸ್ಥಳದಲ್ಲಿಯೇ ಮಾಡಿಕೊಡಲಿದ್ದಾರೆ ಎಂದು ತಿಳಿಸಿದರು.

ಕಾರ್ಗಲ್ ಠಾಣೆ ಸಬ್ ಇನ್ಸ್‌ಪ್ಪೆಕ್ಟರ್ ನಾಗರಾಜ್ ಮಾತನಾಡಿ, ಠಾಣಾ ವ್ಯಾಪ್ತಿಯಲ್ಲಿ ಈ ಬಾರಿ ಒಟ್ಟು 67 ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಮೂರ್ತಿ ವಿಸರ್ಜನೆ ಸಂದರ್ಭ ಈಜು ಬರುವ ನಾಲ್ಕೈದು ಜನರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕೆಪಿಸಿ ಇಂಜಿನಿಯರ್ ಪ್ರದೀಪ್, ಮೆಸ್ಕಾಂ ಇಂಜಿನಿಯರ್ ನಾಗೇಂದ್ರ, ಶ್ರೀ ಮಹಾಗಣಪತಿ ಸಮಿತಿ ಕಾರ್ಯದರ್ಶಿ ವಿ.ಸಂತೋಷ್‌ಕುಮಾರ್, ಕೆಪಿಸಿ ಗಣಪತಿ ಸಮಿತಿ ಪರವಾಗಿ ಕೆ.ವೀರೇಂದ್ರ, ಜಮಾತ್ ಕಮಿಟಿ ಅಧ್ಯಕ್ಷ ಎಚ್.ಎಸ್.ಸಾದಿಕ್, ಶ್ರೀ ಮಹಾಗಣಪತಿ ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿಗಳು, ಜೋಗ-ಕಾರ್ಗಲ್ ಮಸೀದಿ ಕಮಿಟಿ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net