ನೌಕರಿ ಹುಡುಕುವಾಗ ಎಚ್ಚರದಿಂದಿರಿ

Job
Published on

ಜಿಲ್ಲಾ ಕೇಂದ್ರವೊಂದರಲ್ಲಿದ್ದ ಇಂಜಿನಿಯರಿಂಗ್ ಕಾಲೇಜ್​ನಿಂದ ಕಂಪ್ಯೂಟರ್ ತಂತ್ರಜ್ಞಾನ ವಿಷಯದಲ್ಲಿ ಬಿ.ಇ. ಮೊದಲ ದರ್ಜೆಯಲ್ಲಿಯೇ ತೇರ್ಗಡೆಯಾದ ನಂತರ ಸುಭಾಷ್ ಅಮೆರಿಕದ ಬಹುರಾಷ್ಟಿŠೕಯ ಕಂಪನಿಗಳಲ್ಲಿ ನೌಕರಿ ಮಾಡುವ ಕನಸನ್ನು ಕಂಡಿದ್ದ. ಮಗನಿಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ನೌಕರಿ ಸಿಕ್ಕಿ ಆತ ಲಕ್ಷಾಂತರ ರೂಪಾಯಿಗಳ ಆದಾಯ ಗಳಿಸುತ್ತಾನೆ, ವಿದೇಶಕ್ಕೆ ತೆರಳಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತಾನೆ ಎಂದು ಆತನ ಮಧ್ಯಮ ವರ್ಗದ ಕುಟುಂಬ ಸಂಭ್ರಮಿಸಿತು. ತನ್ನ ಕಾಲೇಜಿಗೆ ಕ್ಯಾಂಪಸ್ ಸಂದರ್ಶನಕ್ಕೆಂದು ಯಾವುದೇ ಕಂಪನಿಗಳು ಆ ವರ್ಷ ಬಂದಿರಲಿಲ್ಲವಾದ್ದರಿಂದ ಸುಭಾಷ್ ಹಲವಾರು ಸಂಸ್ಥೆಗಳಿಗೆ ಅರ್ಜಿಗಳನ್ನು ಹಾಕಲಾರಂಭಿಸಿದ.

ನಿಮ್ಮ ಬಯೋಡಾಟಾ ಆಕರ್ಷಕವಾಗಿದ್ದರೆ ಮಾತ್ರ ಉತ್ತಮ ಸಂಸ್ಥೆಗಳು ನೌಕರಿಯ ಸಂದರ್ಶನಕ್ಕೆ ಕರೆಯುತ್ತವೆ ಎಂದು ಸ್ನೇಹಿತರು ಹೇಳಿದ್ದರಿಂದ ಆತ ಜಾಬ್ ಕನ್ಸಲ್ಟೆಂಟ್ ಒಬ್ಬರ ಬಳಿ ಹೋಗಿ ತನ್ನ ಅರ್ಜಿಯನ್ನು ತಯಾರು ಮಾಡಿಸಿದ. ಆನಂತರ ಅದನ್ನು ನೌಕರಿಗೆ ಸಂಬಂಧಿಸಿದ ವೆಬ್​ಸೈಟುಗಳಾದ ನೌಕರಿ, ಶೈನ್, ಲಿಂಕ್ಡ್ ಇನ್ ಮುಂತಾದವುಗಳಲ್ಲಿ ಅಪ್​ಲೋಡ್ ಮಾಡಿದ. ಒಂದೂವರೆ ತಿಂಗಳು ಕಳೆದ ನಂತರವೂ ಯಾವುದೇ ಕಂಪನಿಯಿಂದ ಉತ್ತರ ಬರದಿದ್ದಾಗ ಸುಭಾಷ್ ನಿರಾಶನಾದ. ತನ್ನ ಸ್ನೇಹಿತ ಶಂಕರನಿಗೆ ಯುರೋಪಿನ ಕಂಪನಿಯೊಂದರಲ್ಲಿ ಆಗಲೇ ನೌಕರಿ ಸಿಕ್ಕ ವಿಷಯ ತಿಳಿದು ಆತ ಇನ್ನಷ್ಟು ಚಿಂತೆಗೊಂಡ. ಕೆಲ ದಿನಗಳ ನಂತರ ‘ಅಡೋಬಿ’ ಐ.ಟಿ. ಕಂಪನಿಯಿಂದ ಅವನಿಗೆ ಒಂದು ಇಮೇಲ್ ಬಂದಿತು. ‘ನಮ್ಮ ಕಂಪನಿಯಲ್ಲಿ ಖಾಲಿ ಇರುವ ಕೆಲವು ಹುದ್ದೆಗಳ ಸಂದರ್ಶನಕ್ಕಾಗಿ ನಿಮ್ಮ ಹೆಸರನ್ನು ಶಾರ್ಟ್​ಲಿಸ್ಟ್ ಮಾಡಿದ್ದೇವೆ. ನಿಮ್ಮ ರಾಜ್ಯದ ರಾಜಧಾನಿಯಲ್ಲಿ ನಮ್ಮ ಹಿರಿಯ ಅಧಿಕಾರಿಗಳ ಮುಂದೆ ನೀವು ನಿಮ್ಮ ಮೂಲದಾಖಲೆಗಳ ಸಮೇತ ಹಾಜರಾಗುವುದು. ಸಂದರ್ಶನದ ಶುಲ್ಕವೆಂದು ಒಂದು ಸಾವಿರ ರೂ.ಗಳನ್ನು ಕೆಳಕಂಡ ಬ್ಯಾಂಕ್ ಖಾತೆಗೆ ಜಮಾ ಮಾಡಿ ಆ ವಿವರಗಳನ್ನು ಸಂದರ್ಶನದ ಸಮಯದಲ್ಲಿ ಹಾಜರುಪಡಿಸುವುದು’ ಎಂದು ಆ ಪತ್ರದಲ್ಲಿ ಬರೆದಿತ್ತು. ಕಡೆಗೂ ಅಮೆರಿಕದ ಪ್ರತಿಷ್ಠಿತ ಕಂಪನಿಯಿಂದ ತನಗೆ ನೌಕರಿ ಸಿಗುವ ಅವಕಾಶ ಒದಗಿತು ಎಂದು ಸಂತಸಗೊಂಡ ಸುಭಾಷ್ ಅದೇ ದಿನವೇ ಹಣವನ್ನು ಸೂಚಿಸಿದ್ದ ಬ್ಯಾಂಕ್ ಖಾತೆಗೆ ಜಮಾ ಮಾಡಿದ.

ನಿಗದಿತ ದಿನದಂದು ಸುಭಾಷ್ ಸಂದರ್ಶನಕ್ಕೆಂದು ಗೊತ್ತುಮಾಡಿದ್ದ ಹೋಟೆಲ್​ಗೆ ಹೋದ. ಅವನಂತೆಯೇ ಸಂದರ್ಶನಕ್ಕೆಂದು ಹಲವಾರು ಯುವಕ-ಯುವತಿಯರು ಅಲ್ಲಿಗೆ ಬಂದಿದ್ದರು. ಸಂದರ್ಶನ ಮೂರು ಹಂತಗಳಲ್ಲಿ ನಡೆಯಿತá- ಲಿಖಿತ ಪರೀಕ್ಷೆ, ಗುಂಪುಚರ್ಚೆ ಮತ್ತು ಮೌಖಿಕ ಪರೀಕ್ಷೆ. ಹೋಟೆಲ್​ನ ಒಂದು ಕೋಣೆಯಲ್ಲಿ ಇಬ್ಬರು ಸೂಟ್​ಧಾರಿ ವ್ಯಕ್ತಿಗಳು ಮೌಖಿಕ ಪರೀಕ್ಷೆ ನಡೆಸಿದರು. ಸಂದರ್ಶನದ ಫಲಿತಾಂಶವನ್ನು ಇಮೇಲ್​ನ ಮೂಲಕ ಒಂದು ವಾರದಲ್ಲಿ ತಿಳಿಸಲಾಗುವುದು ಎಂದು ಅವರು ಹೇಳಿದರು.

ಐದು ದಿನಗಳ ನಂತರ ಸುಭಾಷ್​ಗೆ ಆ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡ ವ್ಯಕ್ತಿ ಮೊಬೈಲ್ ಮೂಲಕ ಸಂರ್ಪಸಿ, ‘ನಿಮಗೆ ನೌಕರಿ ನೀಡಲು ನಮ್ಮ ಕಂಪನಿ ನಿರ್ಧರಿಸಿದೆ. ಜರ್ಮನಿ ಅಥವಾ ಅಮೆರಿಕಕ್ಕೆ ನಿಮ್ಮನ್ನು ಕಳಿಸುವ ಉದ್ದೇಶವಿದೆ. ನೀವು ಎಲ್ಲಿಗೆ ಹೋಗಬಯಸುತ್ತೀರಿ?’ ಎಂದ. ಸುಭಾಷ್ ಅಮೆರಿಕಕ್ಕೆ ಹೋಗುವುದೇ ಒಳ್ಳೆಯದು ಎಂದು ನಿರ್ಧರಿಸಿ ಕಂಪನಿಯ ಪ್ರತಿನಿಧಿಗೆ ತಿಳಿಸಿದ.

ಆ ವ್ಯಕ್ತಿ-‘ನಿಮಗೆ ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಆದೇಶವನ್ನು ಕಳಿಸಲಾಗುತ್ತದೆ. ನೀವು ಅಮೆರಿಕಕ್ಕೆ ಹೋಗಬೇಕಾಗಿರುವುದರಿಂದ ಅಲ್ಲಿನ ವೀಸಾ ಮತ್ತು ವರ್ಕ್ ಪರ್ಮಿಟ್​ಗಳನ್ನು ತೆಗೆದುಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಅದನ್ನು ನಮ್ಮ ಕಂಪನಿಯಿಂದಲೇ ಮಾಡಿಸಿಕೊಡಬೇಕಾಗುತ್ತದೆ. ನಾವು ಕಳುಹಿಸುವ ಫಾರ್ಮನ್ನು ತುಂಬಿ ಅದಕ್ಕೆ ನಿಮ್ಮ ಪಾಸ್​ಪೋರ್ಟ್​ನ ಸ್ಕಾನ್ಡ್ ಕಾಪಿಯನ್ನು ಲಗತ್ತಿಸಿ ಕಳುಹಿಸಿ’ ಎಂದು ಹೇಳಿದ. ಸುಭಾಷ್ ತಾನಿನ್ನೂ ಪಾಸ್​ಪೋರ್ಟ್ ಮಾಡಿಸಿಯೇ ಇಲ್ಲ ಎಂದಾಗ ತತ್ಕಾಲ್​ನಲ್ಲಿ ಪಾಸ್​ಪೋರ್ಟ್ ಮಾಡಿಸಿ ವಿವರಗಳನ್ನು ಕಳಿಸಿ ಎಂದ.

ಹೆಚ್ಚಿನ ಶುಲ್ಕ ನೀಡಿ ತತ್ಕಾಲ್ ಪಾಸ್​ಪೋರ್ಟ್ ಪಡೆದ ಕೂಡಲೇ ಸುಭಾಷ್ ಕಂಪನಿಯ ಪ್ರತಿನಿಧಿಯನ್ನು ಸಂರ್ಪಸಿ ಪಾಸ್​ಪೋರ್ಟ್ ವಿವರಗಳನ್ನು ನೀಡಿದ. ಮಾರನೆಯ ದಿನವೇ ಅವನಿಗೆ ಇಮೇಲ್ ಬಂದಿತು. ‘ಇದರೊಡನೆ ನಿಮ್ಮ ನೇಮಕಾತಿ ಆದೇಶ ಮತ್ತು ಫಾಮ್ರ್ ಇದೆ. ಫಾರ್ಮನ್ನು ತುಂಬಿ ಅದರೊಡನೆ ನಿಮ್ಮ ಆಧಾರ್​ಕಾರ್ಡ್, ಪ್ಯಾನ್​ಕಾರ್ಡ್, ಪಾಸ್​ಪೋರ್ಟ್ ಸ್ಕಾ್ಯನ್ ಮಾಡಿ ಕಳುಹಿಸಬೇಕು. ಅಲ್ಲದೆ ವೀಸಾ ಅರ್ಜಿ ಶುಲ್ಕ, ಪ್ರೊಸೆಸಿಂಗ್ ಶುಲ್ಕ ಇವುಗಳ ಖರ್ಚಿಗೆಂದು 26,520 ರೂಪಾಯಿಗಳನ್ನು ಕಳುಹಿಸಬೇಕು, ಹಣ ಜಮಾ ಮಾಡಲು ನಿಮಗೆ ಒಂದು ಕ್ಯೂಆರ್ ಕೋಡ್ ಕಳುಹಿಸಲಾಗುತ್ತದೆ. ಅದನ್ನು ಸ್ಕಾ್ಯನ್ ಮಾಡಿ ಆ ನಂತರ ಡಾಕ್ಯುಮೆಂಟ್​ಗಳನ್ನು ಅಪ್​ಲೋಡ್ ಮಾಡಿ’ ಎಂದು ಬರೆದಿತ್ತು. ತನ್ನ ಬ್ಯಾಂಕ್ ಖಾತೆಯಲ್ಲಿ ಅಷ್ಟು ಹಣವಿರದಿದ್ದುದರಿಂದ ಸುಭಾಷ್​ನ ತಂದೆ ತಮ್ಮ ಬ್ಯಾಂಕಿನ ಮೂಲಕ ಹಣ ವರ್ಗಾವಣೆಗೆ ಒಪ್ಪಿದರು. ಸುಭಾಷ್ ಕ್ಯೂಆರ್​ಕೋಡ್ ಸ್ಕಾ್ಯನ್ ಮಾಡಿದ ಕೂಡಲೇ ಕಂಪನಿಯ ಪ್ರತಿನಿಧಿ ಅವನನ್ನು ಫೋನಿನಲ್ಲಿ ಸಂರ್ಪಸಿ ಈಗ ನಿಮಗೆ ಒಂದು ಒಟಿಪಿ ಬರುತ್ತದೆ, ಅದನ್ನು ಹೇಳಿ ಎಂದ. ಸುಭಾಷ್​ನ ತಂದೆಯ ಮೊಬೈಲ್​ಗೆ ಬಂದ ಒಟಿಪಿ ಹೇಳಿದ ಕೂಡಲೇ ಆ ವ್ಯಕ್ತಿ ಕರೆಯನ್ನು ಕಟ್ ಮಾಡಿದ. ಕೆಲವೇ ನಿಮಿಷಗಳಲ್ಲಿ ತಮ್ಮ ಅಕೌಂಟಿನಿಂದ -ಠಿ; 15 ಲಕ್ಷ ಡೆಬಿಟ್ ಆದದ್ದನ್ನು ಕಂಡ ಸುಭಾಷ್​ನ ತಂದೆ ಹೌಹಾರಿದರು. ಕೂಡಲೇ ಸುಭಾಷ್ ಕಂಪನಿಯ ಪ್ರತಿನಿಧಿಯನ್ನು ಸಂರ್ಪಸಲು ಪ್ರಯತ್ನಿಸಿದ. ಫೋನ್ ಸ್ವಿಚ್ ಆಫ್ ಆಗಿತ್ತು. ಕಂಪನಿಯ ವಿಳಾಸಕ್ಕೆ ಒಂದಾದ ನಂತರ ಒಂದು ಇಮೇಲ್​ಗಳನ್ನು ಕಳುಹಿಸಿದ, ಉತ್ತರವೇ ಬರಲಿಲ್ಲ. ಈ ಹಿಂದೆ ಸಂರ್ಪಸಿದ್ದ ಸ್ಥಿರ ದೂರವಾಣಿಯೂ ರದ್ದಾಗಿತ್ತು.

ಸುಭಾಷ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ. ಮೋಸದ ಪ್ರಕರಣ ದಾಖಲಾಯಿತು. ಸುಭಾಷನಿಗೆ ಆ ಕಂಪನಿ ಕಳಿಸಿದ್ದ ಇಮೇಲ್ ಅಮೆರಿಕದ ಕಂಪನಿಯ ಕಚೇರಿಯಿಂದ ಬರದೆ ಆಫ್ರಿಕಾ ದೇಶದ ನೈಜೀರಿಯಾದಿಂದ ಬಂದಿದ್ದಾಗಿ ತಿಳಿಯಿತು. ಕಂಪನಿಯ ಹೆಸರನ್ನು ‘ಅಡೋಬಿ’ ಬದಲಿಗೆ ‘ಅಡೋಬಾ’ ಎಂದು ಬರೆದಿರುವುದಾಗಿ ಪೊಲೀಸರು ಗಮನಿಸಿದರು. ಅಭ್ಯರ್ಥಿಗಳ ಸಂದರ್ಶನ ಮಾಡಿದ್ದವರ ಬಗ್ಗೆ ಹೋಟೆಲ್​ನಲ್ಲಿ ವಿಚಾರಿಸಿದಾಗ ಕೋಣೆಯನ್ನು ಪಡೆದಿದ್ದವರು ಜಾರ್ಖಂಡ್ ರಾಜ್ಯದವರಾಗಿದ್ದರು. ಸುಮಾರು ಇಪ್ಪತ್ತು ಯುವಕರು ಮೋಸಹೋಗಿದ್ದ ಕಾರಣ ಪೊಲೀಸರು ಜಾರ್ಖಂಡ್​ಗೆ ಹೋಗಿ ಅವರಿಬ್ಬರನ್ನೂ ಪತ್ತೆ ಮಾಡಿದರು. ಇಬ್ಬರೂ ನಿವೃತ್ತ ಪ್ರೊಫೆಸರ್​ಗಳಾಗಿದ್ದರು. ಕೆಲವು ಆಫ್ರಿಕನ್ನರು ತಮ್ಮನ್ನು ಸಂರ್ಪಸಿ, ತಾವು ಒಂದು ಐ.ಟಿ. ಕಂಪನಿಯನ್ನು ನಡೆಸುತ್ತಿರುವುದಾಗಿಯೂ ಕಂಪನಿಯಲ್ಲಿರುವ ಖಾಲಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಸಂದರ್ಶನವನ್ನು ಕೆಲವು ನಗರಗಳಲ್ಲಿ ಮಾಡಬೇಕು ಎಂದು ಹೇಳಿ ತಮಗೆ ಹೋಟೆಲ್ ರೂಂ ಬುಕ್ ಮಾಡಿಸಿ, ಪ್ರವಾಸ ಖರ್ಚು ಮತ್ತು ವೃತ್ತಿಶುಲ್ಕವನ್ನು ನೀಡಿದರು. ತಾವು ಅವರಿಗಾಗಿ ಸಂದರ್ಶನವನ್ನು ನಡೆಸಿ ಸಂದರ್ಶನದಲ್ಲಿ ಉತ್ತೀರ್ಣರಾದವರ ಪಟ್ಟಿಯನ್ನು ಸಲ್ಲಿಸಿದೆವೇ ಹೊರತು ಕಂಪನಿ ಮೋಸ ಮಾಡಿದ ಬಗ್ಗೆ ಅರಿವಿಲ್ಲ ಎಂದರು.

ಪ್ರೊಫೆಸರ್​ಗಳನ್ನು ಸಂರ್ಪಸಿದ ಆಫ್ರಿಕನ್ನರು ಯಾರು ಎಂದು ಕಡೆಗೂ ಪತ್ತೆಯಾಗಲೇ ಇಲ್ಲ. ಮೋಸಗಾರರು ರಾಂಚಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆದಿದ್ದು ಆರೇ ತಿಂಗಳ ನಂತರ ಅವನ್ನು ಮುಚ್ಚಿದ್ದರು. ಎಷ್ಟೇ ಪ್ರಯತ್ನ ಪಟ್ಟರೂ ಆರೋಪಿಗಳು ಪತ್ತೆಯಾಗದೆ ಇದ್ದ ಕಾರಣ ಪ್ರಕರಣ ನಾಪತ್ತೆಯಾಗಿಯೇ ಉಳಿಯಿತು. ನೌಕರಿಯ ಆಮಿಷವನ್ನೊಡ್ಡಿ ಮೋಸ ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಪ್ರಖ್ಯಾತ ಕಂಪನಿಗಳ ಹೆಸರು, ಲೋಗೋ, ವೆಬ್​ಸೈಟ್​ಗಳನ್ನು ಅನುಕರಿಸಿ ಅಮಾಯಕರಿಗೆ ಬಲೆ ಬೀಸಲಾಗುತ್ತದೆ. ನೌಕರಿಗೆ ಸಂಬಂಧಿಸಿದ ವೆಬ್​ಸೈಟುಗಳಲ್ಲಿ ಅಪ್​ಲೋಡ್ ಆಗಿರುವ ಆಕಾಂಕ್ಷಿಗಳ ವಿವರಗಳನ್ನು ನೋಡಿ ತಮಗೆ ಬೇಕಾದ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸಂರ್ಪಸಲಾಗುತ್ತದೆ. 25ರಿಂದ 28 ವರ್ಷ ವಯಸ್ಸಿನವರು, ಯಾವುದೇ ಕೆಲಸದ ಅನುಭವವಿರದವರು, ಇಂಗ್ಲಿಷ್ ಭಾಷೆಯ ಸಂವಹನ ಸರಿಯಾಗಿ ಇರದವರೇ ಇಂತಹವರ ಗುರಿಗೆ ಈಡಾಗುವವರು.

ಮೋಸಗಾರರು ಇಮೇಲ್​ಗಳ ಮೂಲಕವಾಗಲೀ ಇಲ್ಲವೇ ಟೆಕ್ಸ್ ್ಟ ಮೆಸೇಜುಗಳ ಮೂಲಕವಾಗಲೀ ಸಂರ್ಪಸಿದಾಗ ಎಚ್ಚರದಿಂದ ಇರಬೇಕು. ಅವರು ಕಳುಹಿಸುವ ವೆಬ್​ಸೈಟಿನ ಲಿಂಕುಗಳನ್ನು ಕ್ಲಿಕ್ ಮಾಡಿದ ನಂತರ ಆ ಸೈಟುಗಳನ್ನು ಎಚ್ಚರದಿಂದ ಗಮನಿಸಬೇಕು. ಮೇಲ್​ಗಳನ್ನು ಕಳುಹಿಸಿದವರ ಸಂಪೂರ್ಣ ವಿಳಾಸವನ್ನು ಪರಿಶೀಲಿಸಿ ಅದು ಕಂಪನಿಯ ಅಧಿಕೃತ ಮೇಲ್ ಅಡ್ರೆಸ್​ನಿಂದ ಬಂದಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕು. ಪತ್ರಗಳ ಇಂಗ್ಲಿಷ್ ಭಾಷೆ ಮತ್ತು ವ್ಯಾಕರಣಗಳಲ್ಲಿನ ದೋಷಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಂಶಯ ಬಂದರೆ ಸಂಬಂಧಪಟ್ಟ ಕಂಪನಿಗೆ ಕರೆ ಮಾಡಿ ವಿಚಾರಿಸಬೇಕು. ವೀಸಾ ಶುಲ್ಕ, ಇಂಟರ್​ವ್ಯೂ ಶುಲ್ಕ ಮುಂತಾದ ಯಾವುದೇ ಕಾರಣ ಕೊಟ್ಟರೂ ನೌಕರಿ ಪಡೆಯಲು ಹಣ ಕೊಡಲೇಬಾರದು. ಪ್ರತಿಷ್ಠಿತ ಕಂಪನಿಗಳು ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವಾಗ ಯಾವುದೇ ಶುಲ್ಕವನ್ನು ಕೇಳುವುದಿಲ್ಲ ಎನ್ನುವುದನ್ನು ಅರಿತಿರಬೇಕು. ‘ಅತಿ ಶೀಘ್ರದಲ್ಲಿ (ಇತರರ ಬಗ್ಗೆ) ವಿಶ್ವಾಸ ಮೂಡಿಸಿಕೊಳ್ಳುವ ಕಾರಣಕ್ಕಾಗಿಯೇ ಯುವಜನಾಂಗ ಬೇಗನೇ ಮೋಸಹೋಗುತ್ತದೆ’ ಎಂದ ಅರಿಸ್ಟಾಟಲ್. ಕೆಲಸ ಸಿಗುವುದು ತಡವಾದರೂ ತಾಳ್ಮೆಯಿಂದಿರಬೇಕಲ್ಲದೆ ಮೋಸಗಾರರ ಜಾಲಕ್ಕೆ ಮರುಳಾಗಬಾರದು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net