

ನವದೆಹಲಿ: ಭಾರತದಲ್ಲಿನ ಅತಿ ಹೆಚ್ಚು ಕರೊನಾ ಸೋಂಕಿತ ಪ್ರಕರಣಗಳು 21 ರಿಂದ 40ರ ವಯೋಮಿತಿ ಒಳಗೆ ಪತ್ತೆಯಾಗಿರುವುದಾಗಿ ಕೇಂದ್ರ ಸರ್ಕಾರ ಶನಿವಾರ ಖಚಿತಪಡಿಸಿದ್ದು, ಯುವ ಸಮೂಹ ಕರೊನಾ ಬಗ್ಗೆ ತುಂಬಾ ಎಚ್ಚರವಹಿಸಲು ಸಲಹೆ ನೀಡಿದೆ.
ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಆರೋಗ್ಯ ಸಚಿವಾಲಯ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿತು. ಭಾರತದ 42 ರಷ್ಟು ರೋಗಿಗಳು 21 ರಿಂದ 40ರ ವಯೋಗುಂಪಿಗೆ ಸೇರಿರುವುದಾಗಿ ವಯಸ್ಸಿನ ಆಧಾರದ ಮೇಲೆ ನಡೆದ ಕರೊನಾ ಪ್ರಕರಣಗಳ ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ.
41 ರಿಂದ 50ರೊಳಗಿನ ವಯೋಗುಂಪು ಎರಡನೇ ಹೆಚ್ಚು ಕರೊನಾ ಬಾಧಿತ ರೋಗಿಗಳಾಗಿದ್ದು, ಶೇ. 33 ರಷ್ಟು ಪ್ರಕರಣಗಳು ಈ ವಯೋಮಿತಿಯಲ್ಲಿ ಕಂಡುಬಂದಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಕರೊನಾ ಸೋಂಕಿನ ಹೆಚ್ಚಿನ ಅಪಾಯದ ಗುಂಪೆಂದು ಪರಿಗಣಿಸಲಾಗಿದೆ. 17ರಷ್ಟು ಪ್ರಕರಣಗಳು ಕಂಡುಬಂದಿದ್ದರೂ, ಇವರಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಹೀಗಾಗಿ ಈ ವಯೋಮಿತಿಯವರನ್ನು ಅಪಾಯಕಾರಿ ಎಂದು ಗುರುತಿಸಲಾಗಿದೆ.
ಕೇವಲ 9ರಷ್ಟು ಕರೊನಾ ಸೋಂಕಿತ ಪ್ರಕರಣಗಳು 20ರ ವಯೋಮಿತಿಯೊಳಗೆ ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಆರೋಗ್ಯ ಸಚಿವಾಲಯದ ವಿಶ್ಲೇಷಣೆಯ ಪ್ರಕಾರ ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಿ ಹೆಚ್ಚಿನ ಕರೊನಾ ಸೋಂಕಿತ ಪ್ರಕರಣಗಳು ಈವರೆಗೆ ಕಂಡುಬಂದಿದೆ. ಸೋಂಕಿಗೆ ಒಳಗಾಗುವವರಲ್ಲಿ ಯುವ ಜನಾಂಗವೇ ಹೆಚ್ಚಿದ್ದು, 83 ರಷ್ಟು ರೋಗಿಗಳು 50ರ ವಯೋಮಿತಿಯೊಳಗೆ ಕಂಡುಬಂದಿದ್ದಾರೆ.
ಪರಿಣಿತರು ಹೇಳುವ ಪ್ರಕಾರ ಯುವ ಸಮೂಹವೂ ಕೂಡ ಸೋಂಕಿಗೆ ಗುರಿಯಾಗಿ ಗಂಭೀರತೆ ಎದುರಿಸಲಿದ್ದಾರೆ. ಸಾಯುವ ಸಾಧ್ಯತೆಯು ಇದೆ ಎಂದಿದ್ದಾರೆ. ಆರಂಭದಲ್ಲಿ ವಯಸ್ಸಾದವರಲ್ಲಿ ಮರಣ ಪ್ರಮಾಣ ಅಧಿಕವಾಗಿರುತ್ತದೆ. ಆದರೆ, ಯುವ ಸಮೂಹ ಸೋಂಕಿನಿಂದ ಸಾಯುವುದೇ ಇಲ್ಲವೆಂದು ಹೇಳಲಾಗದು ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್)