

ಚಿಕ್ಕಮಗಳೂರು: ಉಳುವವನೇ ಭೂ ಒಡೆಯ ಯೋಜನೆಯನ್ನು ಜಾರಿಗೆ ತರುವ ಮೂಲಕ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಬಡವರ ಪಾಲಿಗೆ ದಾರಿದೀಪವಾದರು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜೀವ್ ಗಾಂಧಿ, ದೇವರಾಜ ಅರಸು ಅವರು ಅಧಿಕಾರದಲ್ಲಿ ಇದ್ದಾಗ ಜಾರಿಗೊಳಿಸಿದ್ದ ಜನಪರ ಯೋಜನೆಗಳು ಈಗಲೂ ಜಾರಿಯಲ್ಲಿವೆ. ರಾಜ್ಯ ಮತ್ತು ದೇಶಕ್ಕಾಗಿ ಅವರು ಕೊಟ್ಟಿರುವ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ರಾಜೀವ್ ಗಾಂಧಿ ಅವರು ಪಂಚಾಯತ್‌ರಾಜ್ ಅಧಿಕಾರ ವಿಕೇಂದ್ರೀಕರಣಕ್ಕಾಗಿ ತೆಗೆದುಕೊಂಡ ತೀರ್ಮಾನದಿಂದ ಸಮಾಜದ ಪ್ರತಿಯೊಂದು ಸಮುದಾಯದವರು ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿದೆ. ತಾಂತ್ರಿಕ ಜಗತ್ತಿನಲ್ಲಿ ಪ್ರಪಂಚಕ್ಕೆ ಸವಾಲು ಎಂಬಂತೆ ದೇಶವನ್ನು ರೂಪಿಸಿದ ಕೀರ್ತಿ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಡಿ.ಸಿ.ಪುಟ್ಟೇಗೌಡ, ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಮುಖಂಡರಾದ ಮಹಮದ್ ಅಕ್ಬರ್, ಪ್ರಸಾದ್ ಅಮಿನ್, ರಾಮಚಂದ್ರ, ಪ್ರಕಾಶ್ ರೈ ಇತರರಿದ್ದರು.