ರೇಣುಕಸ್ವಾಮಿ ಕೊಲೆ ಕೇಸ್​; ದರ್ಶನ್ ಒಳ್ಳೆಯ ವ್ಯಕ್ತಿ, ಸತ್ಯ ಏನೆಂದು ಗೊತ್ತಾಗುತ್ತದೆ ಎಂದ ಬಿ.ಸಿ. ಪಾಟೀಲ್​

BC Patil
Published on

ಚಿತ್ರದುರ್ಗ: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ ಹಾಗೂ ಅವರ ಸಹಚರರು ಪರಪ್ಪನ ಅಗ್ರಹಾರ ಸೇರಿದ್ದು, ಕೋರ್ಟ್​ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18ವರೆಗೆ ವಿಸ್ತರಿಸಿ ಅದೇಶ ಹೊರಡಿಸಿದೆ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ನಟನ ಈ ಹೀನ ಕೃತ್ಯದ ಕುರಿತು ನಟ, ಮಾಜಿ ಸಚಿವ ಬಿ.ಸಿ. ಪಾಟೀಲ್​ ಪ್ರತಿಕ್ರಿಯಿಸಿದ್ದು, ನಿಷ್ಪಕ್ಷಪಾತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಚಿತ್ರದುರ್ಗದಲ್ಲಿ ರೇಣುಕಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತನಾಡಿದ ಬಿ.ಸಿ. ಪಾಟೀಲ್​, ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮೃತ ಪತ್ನಿಗೆ ಉದ್ಯೋಗ ಕೊಡಬೇಕು. ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅಂತಹವರಿಗೆ ಶಿಕ್ಷೆಯಾಗಲಿ. ಇಲ್ಲಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ.

ಮಾಡ್ರನ್ ಜಗತ್ತಲ್ಲಿ ಟೆಕ್ನಾಲಜಿ ಹೆಚ್ಚಾದ ಮೇಲೆ ಸೈಬರ್ ಕ್ರೈಮ್ ಜಾಸ್ತಿಯಾಗಿದೆ. ಮೃತ ರೇಣುಕಾಸ್ವಾಮಿ ಮೇಲೆ ದೂರು ಕೊಟ್ಟಿದ್ರೆ ವಿಚಾರಣೆ ನಡೆಸಬಹುದಿತ್ತು. ಆದರೆ ಕೊಲೆ ಮಾಡುವ ಹಂತಕ್ಕೆ ಇಳಿದಿರುವುದು ಸರಿಯಲ್ಲ. ನಟ ದರ್ಶನ್ ಪೊಲೀಸರಿಗೆ ಕರೆ ಮಾಡಿ ಹೇಳಿದ್ರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತಿತ್ತು ಎಂದು ಹೇಳಿದ್ದಾರೆ.

ಇನ್ನು ಈ ಪ್ರಕರಣದ ಬಗ್ಗೆ ತನಿಖೆ ಮಾಡಲು ಪೊಲೀಸರು ಇದ್ದಾರೆ. ನಾವು ಯಾವುದು ಸುಳ್ಳು, ಯಾವುದು ನಿಜ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಆದರೆ, ದರ್ಶನ್ ಒಳ್ಳೆಯ ವ್ಯಕ್ತಿ, ಒಳ್ಳೆಯ ನಟ ಆಗಿದ್ದ. ಈಗ ಅವರ ಮೇಲೆ ಕೊಲೆ ಆರೋಪ ಬಂದಿದೆ. ವಿಚಾರಣೆ ನಡೆಯುತ್ತಿದೆ. ತನಿಖೆ ಆದ್ಮೇಲೆ ಸತ್ಯ ಏನೆಂದು ಗೊತ್ತಾಗುತ್ತದೆ ಎಂದು ನಟ, ಮಾಜಿ ಸಚಿವ ಬಿ.ಸಿ. ಪಾಟೀಲ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net