

ಬೆಂಗಳೂರು: ಬಿಬಿಎಂಪಿ ಕಸದ ಲಾರಿಯು ಬೆಂಗಳೂರಿಗರ ಪಾಲಿಗೆ ಯಮದೂತನಾಗಿದ್ದು, ಅದರ ಅಪಘಾತದಿಂದ ಆಗುತ್ತಿರುವ ಸಾವಿನ ಸರಣಿ ಮುಂದುವರಿದಿದೆ. ಎಷ್ಟೇ ಕ್ರಮ ವಹಿಸಿದರೂ ಬಿಬಿಎಂಪಿ ಲಾರಿಗೆ ಬಲಿಯಾಗುತ್ತಿರುವ ಸಂಖ್ಯೆ ಏರುತ್ತಲೇ ಇದೆ. ಇದೀಗ ದ್ವಿಚಕ್ರ ವಾಹನ ಸವಾರ ಬಿಬಿಎಂಪಿ ಲಾರಿಗೆ ಬಲಿಯಾಗಿದ್ದಾನೆ.
ಯಶವಂತ್ (26) ಮೃತ ದುರ್ದೈವಿ. ಲಾರಿ ಚಾಲಕರು ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಅವೈಜ್ಞಾನಿಕವಾಗಿ ಪಾರ್ಕಿಂಗ್ ಮಾಡಿದ್ದರು. ಬನಶಂಕರಿ ಮಾರ್ಗದಿಂದ ಸೌತ್ ಎಂಡ್ ಸರ್ಕಲ್ ಕಡೆ ಯಶವಂತ್ ಬೈಕ್ನಲ್ಲಿ ಹೊರಟಿದ್ದ ವೇಳೆ ಜಯನಗರ ಮೆಟ್ರೋ ನಿಲ್ದಾಣದ ಬಳಿ ಬೈಕ್ ನಿಯಂತ್ರಣಕ್ಕೆ ಸಿಗದೆ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಯಶವಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಅಪಘಾತ ನಿನ್ನೆ (ಸೆ.24) ರಾತ್ರಿ 12 ಗಂಟೆ ಸುಮಾರಿಗೆ ಜಯನಗರ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಯಶವಂತ್, ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಆರು ತಿಂಗಳ ಹಿಂದಷ್ಟೇ ಹೊಸ ಕಂಪನಿ ಸೇರಿದ್ದ. ಯಶವಂತ್ಗೆ ಹೆಂಡತಿ ಮತ್ತು ಎಂಟು ತಿಂಗಳ ಮಗು ಇದೆ. ಇದೀಗ ಕುಟುಂಬದ ಆಧಾರಸ್ತಂಭ ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಕುಟುಂಬಕ್ಕೆ ಯಾರು ಗತಿ ಅನ್ನೋ ಪ್ರಶ್ನೆ ಮೂಡಿದೆ.
ಸದ್ಯ ಯಶವಂತ್ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ.