

ಬೆಂಗಳೂರು: ಕಳೆದ ವಾರ ಸುದೀಪ್ ಅವರ ಅನುಪಸ್ಥಿತಿಯಲ್ಲಿ ನಡೆದ ವಾರಾಂತ್ಯದ ಸಂಚಿಕೆ ಬಹಳ ಬೇಸರದಿಂದಲೇ ನಡೆಯಿತು. ಅದಕ್ಕೆ ಕಾರಣ ನಟ, ನಿರೂಪಕ ಕಿಚ್ಚ ಸುದೀಪ್ ಅವರ ತಾಯಿ ಅಗಲಿಕೆ. ಮಾತೃ ವಿಯೋಗದ ನೋವಿನಲ್ಲಿದ್ದ ಸುದೀಪ್ ಕಳೆದ ಸಂಚಿಕೆಯನ್ನು ನಡೆಸಿಕೊಡಲು ವೇದಿಕೆಗೆ ಹಾಜರಾಗಲಿಲ್ಲ. ಹೀಗಾಗಿ ಕಿಚ್ಚನ ಬದಲಿಗೆ ನಿರ್ದೇಶಕ ಯೋಗರಾಜ್ ಭಟ್ ಮತ್ತು ಮಾತಿನ ಮಲ್ಲ, ಬಿಗ್ ಬಾಸ್ ಸೀಸನ್ ಎರಡರ ರನ್ನರ್ ಅಪ್ ಸೃಜನ್ ಲೋಕೇಶ್ ಶನಿವಾರ ಮತ್ತು ಭಾನುವಾರದ ಸಂಚಿಕೆಯನ್ನು ಸರಿದೂಗಿಸಿದರು. ಭಾರೀ ಬೇಸರಕ್ಕೆ ಒಳಗಾಗಿದ್ದ ವೀಕ್ಷಕರು, ಈ ವಾರ ಸುದೀಪ್ ಬರುತ್ತಾರಾ? ಎಂಬ ಗೊಂದಲದ್ದಲ್ಲಿದ್ದರು. ಇದಕ್ಕೀಗ ಉತ್ತರ ಸಿಕ್ಕಿದೆ.
'ವಾರದ ಕಥೆ ಕಿಚ್ಚನ ಜತೆ' ಸಂಚಿಕೆಗೆ ಹಾಜರಾಗಿರುವ ಕಿಚ್ಚ ಸುದೀಪ್, ಅಮ್ಮನ ಅಗಲಿಕೆಯ ನೋವು ಕಾಡುತ್ತಿದ್ದರೂ ಸಹ ಭಾರವಾದ ಮನಸ್ಸಿನಿಂದಲೇ ತಮ್ಮ ಜವಾಬ್ದಾರಿ ನಿಭಾಯಿಸಲು ಇದೀಗ ವೇದಿಕೆಗೆ ಕಾಲಿಟ್ಟಿದ್ದಾರೆ. ಸುದೀಪ್ ಅವರ ತಾಯಿಯನ್ನು ಸ್ಮರಿಸಿ, ವೇದಿಕೆಯ ಮೇಲೆ ಹಾಡಿನ ಮೂಲಕ ನಮನ ಸಲ್ಲಿಸಲಾಗಿದೆ. ಕಣ್ಣಂಚಲಿ ನೀರು ತುಂಬಿಕೊಂಡೆ, ಶನಿವಾರದ ಪಂಚಾಯತಿಯನ್ನು ನಡೆಸಿಕೊಡಲು ಸಿದ್ಧತೆ ಮಾಡಿಕೊಂಡು ಬಂದಿರುವ ಸುದೀಪ್ರನ್ನು ಕಂಡು ಬಿಗ್ ಮನೆಯ ಸ್ಪರ್ಧಿಗಳು ಕೂಡ ಕಣ್ಣೀರಿಟ್ಟಿದ್ದಾರೆ.
ಅಮ್ಮನನ್ನು ಕಳೆದುಕೊಂಡ ನೋವಿನಲ್ಲಿ ಬಿಗ್ ಬಾಸ್ ವೇದಿಕೆ ಬಂದಿರುವ ಸುದೀಪ್ ಅವರ ಪ್ರೋಮೋ ಇದೀಗ ಹೊರಬಿದ್ದಿದ್ದು, ನೋಡುಗರ ಕಣ್ಣನ್ನು ಒದ್ದೆಯಾಗಿಸಿದೆ. ಈ ವಾರ ಯಾರು ಮನೆಯಲ್ಲಿ ಉಳಿಯುತ್ತಾರೆ? ಯಾರಿಗೆ ಈ ಪಯಣ ಅಂತ್ಯವಾಗಲಿದೆ ಎಂಬುದು ವಾರದ ಕಥೆ ಕಿಚ್ಚನ ಜತೆ ಮತ್ತು ಸೂಪರ್ ಸಂಡೆ ವಿತ್ ಸುದೀಪ್ ಸಂಚಿಕೆಯಲ್ಲಿ ಸ್ಪಷ್ಟವಾಗಿ ತಿಳಿಯಲಿದೆ.