

ಬೆಂಗಳೂರು: ಕಳೆದ ವಾರ ಬಿಗ್ ಮನೆಯಿಂದ ಅನುಷಾ ರೈ ಹೊರಬಿದ್ದ ಬೆನ್ನಲ್ಲೇ ವೈಲ್ಡ್ಕಾರ್ಡ್ನಲ್ಲಿ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಎಂಟ್ರಿ ಕೊಟ್ಟರು. ಬಿಗ್ ಬಾಸ್ ತೆಲುಗು ಸೀಸನ್ನಲ್ಲಿ ಭಾಗವಹಿಸಿ, ನೋಡುಗರ ಹುಬ್ಬೇರಿಸಿದ್ದ ಶೋಭಾ ಶೆಟ್ಟಿ ಮತ್ತು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ, ಮಿಂಚಿದ್ದ ರಜತ್ ಕಿಶನ್ 50ನೇ ದಿನಕ್ಕೆ ಬಿಗ್ ಮನೆಯೊಳಗೆ ಪ್ರವೇಶಿಸುವ ಮುಖೇನ ಉಳಿದ ಸ್ಪರ್ಧಿಗಳಲ್ಲಿ ಅಚ್ಚರಿ ಮೂಡಿಸಿದರು. ಆದರೆ, ಇವರು ಬಂದು ಸರಿಯಾಗಿ ಒಂದು ವಾರವೂ ಕಳೆದಿಲ್ಲ. ಆಗಲೇ ಮನೆಯಲ್ಲಿ ಮನಸ್ತಾಪದ ಜ್ವಾಲೆ ಚಿಮ್ಮಿದೆ.
ಈ ವಾರದ ಟಾಸ್ಕ್ನಲ್ಲಿ ಎರಡು ತಂಡಗಳಾಗಿ ವಿಂಗಡನೆಯಾದ ಮನೆ ಮಂದಿ ಪೈಕಿ ರಜತ್ ಮತ್ತು ಸುರೇಶ್ ಎದುರು-ಬದುರು ಆಟವಾಡಿದರು. ಈ ವೇಳೆ ಆಟದ ವಿಚಾರಕ್ಕೆ ಇಬ್ಬರ ನಡುವೆ ಉಂಟಾದ ವಾಗ್ವಾದ ತಾರಕಕ್ಕೇರಿ, ರಜತ್ ಕೆಲವು ಅವಾಚ್ಯ ಪದಗಳನ್ನು ಗೋಲ್ಡ್ ಸುರೇಶ್ ಮೇಲೆ ಪ್ರಯೋಗಿಸಿದರು. ಈ ಮಾತುಗಳಿಂದ ಸಿಡಿಮಿಡಿಗೊಂಡ ಸುರೇಶ್, ಆಟವನ್ನು ಅರ್ಧಕ್ಕೆ ಕೈಬಿಟ್ಟು, ಹೊರನಡೆದರು. ಇನ್ನು ರಜತ್ ಅವರ ಈ ನಡೆಯನ್ನು ಖಂಡಿಸಿದ ಮನೆ ಮಂದಿ, ಕಳಪೆ ಪಟ್ಟಿಗೆ ರಜತ್ ಹೆಸರನ್ನು ಪರಿಗಣಿಸಿದ್ದಾರೆ. ಇದು ವೈಲ್ಡ್ಕಾರ್ಡ್ ಸ್ಪರ್ಧಿಯ ಕೋಪಕ್ಕೆ ಕಾರಣವಾಗಿದೆ.
ಮನೆಯವರೆಲ್ಲಾ ಒಟ್ಟಾಗಿ ರಜತ್ ಹೆಸರನ್ನು ಕಳಪೆಗೆ ಸೂಚಿಸಿದ್ದು, ಆಟದ ಭರದಲ್ಲಿ ಒಬ್ಬರಿಗೆ ಬಳಸಿದ ಪದಗಳು ಈಗಲೂ ನಮ್ಮಿಂದ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಅಂತಹ ಪದಗಳು ಈ ಮನೆಗೆ ಸೂಕ್ತವಲ್ಲ. ಬೈಗುಳಗಳು ಇಲ್ಲಿಗೆ ಬೇಕಿಲ್ಲ ಎಂದು ಸೂಕ್ತ ಕಾರಣ ನೀಡಿದ್ದಾರೆ. ಇದನ್ನು ಖಂಡಿಸಿದ ರಜತ್, ಹುಡುಗಿಯರ ಕೈಹಿಡಿದು ಓಡಾಡಿದಷ್ಟು ಸುಲಭ ಅಲ್ಲ, ಬಿಗ್ ಬಾಸ್ ಗೆಲ್ಲೋದು. ನಿಮ್ಮನ್ನೆಲ್ಲ ಹೊರಗೆ ಕಳಿಸಿಯೇ, ನಾನು ಹೊರಗೆ ಹೋಗೋದು. ಇನ್ಮುಂದೆ ತೋರಿಸ್ತೀನಿ ಆಟ ಅಂದ್ರೇನು ಎಂದು ಕಟುವಾಗಿ ಮಾತನಾಡಿದ್ದಾರೆ. ಸದ್ಯ ಇದರ ಪ್ರೋಮೋ ಈಗ ಹೊರಬಿದ್ದಿದ್ದು, ಅಸಲಿಗೆ ನಡೆದಿದ್ದೇನು ಎಂಬುದನ್ನು ಇಂದಿನ ಸಂಚಿಕೆ ನೋಡಿ ತಿಳಿಯಬೇಕಿದೆ.